ಬೆಂಗಳೂರು: ಕುಡಿದ ಮತ್ತಿನಲ್ಲಿ ಅತ್ತೆ-ಮಾವನನ್ನು ಕೊಂದಿದ್ದ ಅಳಿಯನ ಬಂಧನ
ಬೆಂಗಳೂರು: ಕುಡಿದ ಮತ್ತಿನಲ್ಲಿ ಅತ್ತೆ- ಮಾವನನ್ನು ಕೊಂದು ಹೆಂಡತಿ ಹಾಗೂ ನೆರೆಮನೆಯಾತನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ರಾತ್ರಿ ಕೋಣನಕುಂಟೆಯ ಅನ್ನಪೂರ್ಣೇಶ್ವರಿ ಲೇಔಟ್ ನಲ್ಲಿ ಸೆಂಥಿಲ್ ಕುಮಾರ್ ಎಂಬಾತ ತನ್ನ ಅತ್ತೆ ಹಾಗೂ ಮಾವ ಮರುಗಮ್ಮ(55) ಕುಮಾರ್ (60) ರನ್ನು ಚಾಕುವಿನಿಂದ ಇರಿದಿದ್ದ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಇಬ್ಬರು ಅಸು ನೀಗಿದ್ದರು.
ಜಗಳ ಬಿಡಿಸಲು ಬಂದ ಹೆಂಡತಿ ಸತ್ಯವತಿ ಹಾಗೂ ನೆರೆಮನೆಯಾತ ಮಂಜುನಾಥ್ ಎಂಬುವರಿಗೂ ಸೆಂಥಿಲ್ ಕುಮಾರ್ ಚಾಕುವಿನಿಂದ ಇರಿದಿದ್ದಾನೆ. ಕುಮಾರ್ ಹಾಗೂ ಮರುಗಮ್ಮ ಚಿತ್ತೂರು ಜಿಲ್ಲೆಯವರು, ಬೆಂಗಳೂರಿನಲ್ಲಿ ದಿನಗೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರು. ತಮಿಳುನಾಡು ಮೂಲದ ಸೆಂಥಿಲ್ ಹಾಗೂ ಕುಮಾರ್ ಮುರುಗಮ್ಮ ದಂಪತಿ ಪುತ್ರಿ ಸತ್ಯವತಿ ಇಬ್ಬರು ಪರಸ್ಪರ ಪ್ರೀತಿಸಿ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದರು.
ಇಬ್ಬರು ತಮಿಳುನಾಡಿನಲ್ಲಿ ವಾಸವಿದ್ದರು, ಆದರೆ ದಿನಕಳೆದಂತೆ ಸೆಂಥಿಲ್ ಕುಮಾರ್ ಕುಡಿತದ ಚಟ ಹೆಚ್ಚಿದ್ದರಿಂದ ತಮಿಳುನಾಡಿನಿಂದ ವಾಪಸ್ ಬಂದು ಒಂದು ವರ್ಷದಿಂದ ತನ್ನ ಪೋಷಕಪ ಜೊತೆಗಿದ್ದಳು. ಪದೇ ಪದೇ ಮನೆಗೆ ಬರುತ್ತಿದ್ದ ಸೆಂಥಿಲ್ ಕುಮಾರ್ ವಾಪಸ್ ಮನೆಗೆ ಬರುವಂತೆ ಒತ್ತಾಯಿಸುತ್ತಿದ್ದ, ಇದಕ್ಕೆ ಸತ್ಯವತಿ ಪೋಷಕರು ವಿರೋಧ ವ್ಯಕ್ತ ಪಡಿಸಿದ್ದರು.
ಶುಕ್ರವಾರ ರಾತ್ರಿ ಮನೆಗೆ ಬಂದ ಸೆಂಥಿಲ್ ಮೊದಲು ಅತ್ತೆ ಮಾವನ ಜೊತೆ ಜಗಳ ಆರಂಭಿಸಿದ್ದಾನೆ, ಈ ವೇಳೆ ಅವರಿಬ್ಬರಿಗೂ ಚಾಕುವಿನಿಂದ ಚುಚ್ಚಿದ್ದಾನೆ. ಪೋಷಕರ ಆಕ್ರಂದನ ಕೇಳಿ ಅಡುಗೆ ಮನೆಯಲ್ಲಿದ್ದ ಮಗಳು ಸತ್ಯವತಿ ಕೂಡಲೇ ಓಡಿ ಬಂದಿದ್ದಾಳೆ. ಈ ವೇಳೆ ಸೆಂಥಿಲ್ ಕುಮಾರ್ ಆಕೆಯ ಕಾಲಿಗೂ ಚುಚ್ಚಿದ್ದಾನೆ. ಜಗಳ ಬಿಡಿಸಲು ಬಂದ ನೆರೆಮನೆಯ ಮಂಜುನಾಥ್ ಎಂಬುವರಿಗೆ ಚಾಕುವಿನಿಂದ ಇರಿದ ಸೆಂಥಿಲ್ ಕುಮಾರ್ ಅಲ್ಲಿಂದ ಪರಾರಿಯಾಗಿದ್ದಾನೆ. ಕೂಡಲೇ ದಾವಿಸಿದ ಅಕ್ಕಪಕ್ಕದ ಮನೆಯವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಸೆಂಥಿಲ್ ಕುಮಾರ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ