ವಿಮ್ಸ್ ನಲ್ಲಿ ಮಹಿಳೆ, ನವಜಾತ ಶಿಶು ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ; ಶವವಿಟ್ಟು ಪ್ರತಿಭಟನೆ

ಹೆರಿಗೆಗಾಗಿ ದಾಖಲಾಗಿದ್ದ ಸಂಡೂರು ತಾಲ್ಲೂಕಿನ ಮಹಿಳೆ ಹಾಗೂ ನವಜಾತ ಶಿಶು ಸಾವನ್ನಪ್ಪಿದ ಘಟನೆ ನಡೆದಿದ್ದು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ...
ಮೃತ ಮಹಿಳೆ ಸುಜಾತಾ
ಮೃತ ಮಹಿಳೆ ಸುಜಾತಾ

ಬಳ್ಳಾರಿ:  ಹೆರಿಗೆಗಾಗಿ ದಾಖಲಾಗಿದ್ದ ಸಂಡೂರು ತಾಲ್ಲೂಕಿನ ಮಹಿಳೆ ಹಾಗೂ ನವಜಾತ ಶಿಶು ಸಾವನ್ನಪ್ಪಿದ ಘಟನೆ ನಡೆದಿದ್ದು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿಯೇ ತಾಯಿ ಮಗು ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಮೃತರ ಸಂಬಂಧಿಕರು, ಆಸ್ಪತ್ರೆಯ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಕೆರೆ ರಾಂಪುರ ಗ್ರಾಮದ ನಿವಾಸಿ ಸುಜಾತ ಅವರನ್ನು ವಿಮ್ಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಹೆರಿಗೆಯಾದ ಕೆಲವೇ ಕ್ಷಣಗಳಲ್ಲಿ ಶಿಶು ಸಾವನ್ನಪ್ಪಿದ್ದು, ಆ ನಂತರ ತಾಯಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಯಿ ಹಾಗೂ ಮಗುವಿನ ಸಾವಿನ ಸುದ್ದಿ ತಿಳಿಯುತ್ತಲೇ ಆಕ್ರೋಶ ಗೊಂಡ ಮೃತರ ಬಂಧುಗಳು ವಿಮ್ಸ್ ಆಸ್ಪತ್ರೆಯ ಎದುರುಗಡೆ ಶವವನ್ನಿಟ್ಟು ಪ್ರತಿಭಟನೆ ನಡೆಸಿದರು. ಬಾಣಂತಿ ಮತ್ತು ನವಜಾತ ಶಿಶುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಬಂಧುಗಳು ಆರೋಪಿಸಿ, ಧರಣಿ ನಡೆಸಿದರು.

ಇನ್ನೂ ಶವವನ್ನು ನೀಡಲು ಆಸ್ಪತ್ರೆ ಸಿಬ್ಬಂದಿ ಹಣ ಕೇಳಿದರು ಎಂದು ಆರೋಪಿಸಿ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು ಎಂದು ಹೇಳಲಾಗಿದೆ, .ವಿಷಯ ತಿಳಿಯುತ್ತಲೇ ವಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಕೃಷ್ಣಸ್ವಾಮಿ ಮತ್ತು ಇತರೆ ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣದ ತನಿಖೆ ನಡೆಸುವುದಾಗಿ ಭರವಸೆ ನೀಡಿ ಮೃತರ ಸಂಬಂಧಿಕರನ್ನು ಸಮಾಧಾನ ಪಡಿಸಿದರು.

ತಾಯಿ ಹಾಗೂ ಮಗುವಿನ ಸಾವಿಗೆ ಕಾರಣವೇನು ಎಂದು ತಿಳಿದು ಬಂದಿಲ್ಲ, ಈಗಾಗಲೇ ತನಿಖೆ ನಡೆಸುವಂತೆ ಆದೇಶಿಸಲಾಗಿದೆ. ಭಾನುವಾರ ಬೆಳಗ್ಗೆ ಮಹಿಳೆ ಆಸ್ಪತ್ರೆಗೆ ಬಂದು ಚೆಕ್ ಅಪ್ ಮಾಡಿಸಿಕೊಂಡು ವಾಪಸ್ ಊರಿಗೆ ತೆರಳಿದ್ದಾರೆ, ರಾತ್ರಿ ಆಕೆಗೆ ಉಸಿರಾಟ ತೊಂದರೆ ಕಾಣಿಸಿದೆ. ಕೂಡಲೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಖಾಸಗಿ ಆಸ್ಪತ್ರೆ ವೈದ್ಯರು ವಿಮ್ಸ್ ಗೆ ತೆರಳುವಂತೆ ಸೂಚಿಸಿದ್ದಾರೆ, ವಿಮ್ಸ್ ನಲ್ಲಿ ದಾಖಲಾದ ನಂತರ ಆಕೆಗೆ ಹೆರಿಗೆಯಾಗಿದೆ, ಹೆರಿಗೆ ನಂತರ ತಾಯಿ ಹಾಗೂ ನವಜಾತ ಶಿಶು ಸಾವನ್ನಪ್ಪಿದ್ದಾರೆ ಎಂದು ವಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಕೃಷ್ಣಸ್ವಾಮಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com