ಮ್ಯಾನ್ ಹೋಲ್ ದುರಂತ: ಅವಸರವಾಗಿ ಮಧ್ಯರಾತ್ರಿಯಲ್ಲಿ ಕೆಲಸ ಮಾಡಲು ಕಾರಣವೇನು?

ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ತೆರಳಿದ್ದ ಮೂವರು ಕಾರ್ಮಿಕರ ಸಾವಿಗೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದಿದ್ದು ಪ್ರಮುಖ ಕಾರಣ ಎಂದು ತಿಳಿದು ಬಂದಿದೆ...
ಮ್ಯಾನ್ ಹೋಲ್ ದುರಂತದಲ್ಲಿ ಸಾವನ್ನಪ್ಪಿದ ದಂತ ಈರಯ್ಯ ಪತ್ನಿ ಮತ್ತು ಪುತ್ರ
ಮ್ಯಾನ್ ಹೋಲ್ ದುರಂತದಲ್ಲಿ ಸಾವನ್ನಪ್ಪಿದ ದಂತ ಈರಯ್ಯ ಪತ್ನಿ ಮತ್ತು ಪುತ್ರ

ಬೆಂಗಳೂರು:  ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ತೆರಳಿದ್ದ ಮೂವರು ಕಾರ್ಮಿಕರ ಸಾವಿಗೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದಿದ್ದು ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಆದರೆ ಅಷ್ಟೊಂದು ಅವಸರವಾಗಿ ಮಧ್ಯರಾತ್ರಿಯಲ್ಲಿ ಕೆಲಸ ಮಾಡಲು ಕಾರಣ ಹುಡುಕುತ್ತಾ ಹೋದರೆ ಗುತ್ತಿಗೆ ಕಂಪನಿಯ ಕರಾಳ ಮುಖ ಬಯಲಾಗುತ್ತದೆ.

ಬೆಂಗಳೂರು ಜಲ ಮಂಡಳಿ ಗುತ್ತಿಗೆ ಪಡೆದಿದ್ದ ರಾಮ್ ಕೀ ಎಂಟರ್ ಪ್ರೈಸಸ್  ಬಿಡಬ್ಲ್ಯೂ ಎಸ್ ಎಸ್ ಬಿಯಿಂದ ಬಿಲ್ ಕ್ಲಿಯರ್ ಮಾಡಿಸಿಕೊಳ್ಳುವ ಅವಸರದಲ್ಲಿತ್ತು. ಶೀಘ್ರವಾಗಿ ಗುತ್ತಿಗೆ ನೀಡಿರುವ ಕಾಮಗಾರಿಯನ್ನು ಪೂರ್ಣಗೊಳಿಸದಿದ್ದರೇ ಬಿಲ್ ಕ್ಲಿಯರ್ ಮಾಡುವುದಿಲ್ಲ ಎಂದು ಹೇಳಿತ್ತು. ಜೊತೆಗೆ ಮಂಗಳವಾರ ಬಿಡಬ್ಲ್ಯೂ ಎಸ್ ಎಸ್ ಬಿ  ಗುತ್ತಿಗೆ ಕಾಮಗಾರಿ ಪರಿಶೀಲನೆ ನಡೆಸುವ ಕಾರ್ಯಕ್ರಮವಿತ್ತು. ಒಂದು ವೇಳೆ ಕಾಮಗಾರಿ ಸರಿಯಾಗಿ ಪೂರ್ಣಗೊಳ್ಳದಿದ್ದರೇ ಬಿಲ್ ಕ್ಲಿಯರ್ ಮಾಡುವುದಿಲ್ಲ ಎಂದು ಮಂಡಳಿ ಎಚ್ಚರಿಕೆ ನೀಡಿತ್ತು.

ಈ ಎಲ್ಲಾ ಪರಿಸ್ಥಿತಿಗಳು ಮೂವರು ಕಾರ್ಮಿಕರ ಜೀವಕ್ಕೆ ಮಾರಕವಾಯಿತು. ಬೆಂಗಳೂರಿನಲ್ಲಿ ಸೋಮವಾರ ಮಳೆ ಸುರಿಯಿತು. ಮೇಲ್ವಿಚಾರಕ ಆಂಜನೇಯ ರೆಡ್ಡಿ ಅವರಿಗೆ ಸಿ ವಿರಾಮನ್ ನಗರದಲ್ಲಿ ಮ್ಯಾನ್ ಹೋಲ್ ಸ್ವಚ್ಚಗೊಳಿಸುವಂತೆ ರಾಮ್ ಕೀ ಗುತ್ತಿಗೆದಾರರಿಂದ ಒತ್ತಡ ಬಂದಿತ್ತು. ಹೀಗಾಗಿ ಜೆಟ್ಟಿಂಗ್ ಮೆಷಿನ್ ತರಲು ಸಮಯ ಇರಲಿಲ್ಲ, ಮ್ಯಾನ್ ಹೋಲ್ ಗಳು ಮುಚ್ಚಿವೆ, ಹೀಗಾಗಿ ಅದನ್ನು ಸ್ವಚ್ಚಗೊಳಿಸಬೇಕು ಎಂದು ಕಾರ್ಮಿಕರಿಗೆ ಹೇಳಲಾಗಿತ್ತು.

ರಾಮ್ ಕೀ ಎಂ ಡಿ ಅವರಿಂದ ಆಂಜನೇಯ ರೆಡ್ಡಿ ಅವರಿಗೆ ಕರೆ ಬಂದಿತ್ತು. ಕೆಲಸವನ್ನು ಮಧ್ಯರಾತ್ರಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು. ಏಕೆಂದರೆ ಮರುದಿನ ಬೆಳಗ್ಗೆ ಜಲ ಮಂಡಳಿಯಿಂದ ಬಾಕಿ ಉಳಿದಿದ್ದ ಬಿಲ್ ಕ್ಲಿಯರ್ ಆಗಬೇಕಿತ್ತು. ಜಲಮಂಡಳಿ ಅಧಿಕಾರಿಗಳು ಕಾಮಗಾರಿಯನ್ನು ಪರಿಶೀಲನೆ ನಡೆಸಿದ ನಂತರವೇ ಬಿಲ್ ಕ್ಲಿಯರ್ ಮಾಡುವುದಾಗಿ ಹೇಳಿದ್ದರು.  ಹೀಗಾಗಿ ಅವಸರದಲ್ಲಿ ಆಂಜನೇಯ ರೆಡ್ಡಿ ಮತ್ತಿತರ ಕಾರ್ಮಿಕರು ಕೆಲಸ ಮಾಡಲು ಮುಂದಾಗಿದ್ದರು. ಆದರೆ ಮ್ಯಾನ್ ಹೋಲ್ 12 ಅಡಿ ಆಳ ಇದೆ ಎಂಬುದು ತಿಳಿಯದೇ ಅದರೊಳಗೆ ಇಳಿದು ಸಾವನ್ನಪ್ಪಿದ್ದಾರೆ. ಹೀಗಾಗಿ ಮೇಲಧಿಕಾರಿಗಳ ಸತತ ಒತ್ತಡವೇ ದುರಂತಕ್ಕೆ ಸ್ಪಷ್ಟ ಕಾರಣ ಎಂದು ಆಂಜನೇಯ ರೆಡ್ಡಿ ಸಂಬಂಧಿ ಹೇಳಿದ್ದಾರೆ.

ಮತ್ತೊಂದು ಆಸಕ್ತಿದಾಯಕ ವಿಷಯವೆಂದರೇ ಬೈಯ್ಯಪ್ಪನಹಳ್ಳಿ ಎರಡು ಜೆಟ್ಟಿಂಗ್ ಮೆಷಿನ್ ಇದೆ. ಇನ್ನೂ ಬಿಲ್ ಕ್ಲಿಯರ್ ವಿಷಯ ಸಂಬಂಧ ಪ್ರತಿಕ್ರಿಯಿಸಿರುವ ಬೆಂಗಳೂರು ಜಲ ಮಂಡಳಿ  ಅಧ್ಯಕ್ಷ ತುಷಾರ್ ಗಿರಿನಾಥ್ ಕೆ.ಆರ್ ಪುರಂ ನಿಂದ ಕಾಡು ಬೀಸನಹಳ್ಳಿ ವರೆಗೂ ಒಳಚರಂಡಿ ಪೈಪ್ ಲೈನ್ ಕಾಮಗಾರಿಯನ್ನು ಕಳೆದ ಮೂರು ವರ್ಷಗಳ ಹಿಂದೆಯೇ ನೀಡಲಾಗಿತ್ತು. ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಂಡಿತು ಎಂದು ತಿಳಿಸಿದರು, ಆದರೆ ಅವುಗಳಲ್ಲಿ ಕೆಲ ಲೋಪದೋಷಗಳು ಕಂಡು ಬಂದಿದ್ದವು. ದೋಷಗಳನ್ನು ಸರಿ ಪಡಿಸದಿದ್ದರೇ ನಾವು ಬಿಲ್ ಕ್ಲಿಯರ್ ಮಾಡುವುದಿಲ್ಲ ಎಂದು  ಮೊದಲೇ ಹೇಳಿದ್ದಾಗಿ ಅವರು ತಿಳಿಸಿದ್ದಾರೆ.

ಪ್ರಕರಣ ನಡೆದು ಮೂರು ದಿನ ಕಳೆಯುತ್ತಾ ಬಂದಿದ್ದರೂ ಇದುವರೆಗೂ ಯಾರೋಬ್ಬರ ಬಂಧನವಾಗಿಲ್ಲ, ಯಾವುದೇ ಜಲಮಂಡಳಿ ಎಂಜಿನೀಯರ್ ಅಥವಾ ಗುತ್ತಿಗೆದಾರರ ವಿರುದ್ಧ ಎಫ್ ಐ ಆರ್ ದಾಖಲಾಗಿಲ್ಲ. ಪೊಲೀಸರು ಸುಮೊಟೊ ಕೇಸು ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com