
ರಾಯಚೂರು: ರಾಯಚೂರಿನಲ್ಲಿ ನಡೆದ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ ಪ್ರಕರಣ ಇದೀಗ ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದ್ದು, ಬಿಗದಿ ಬಂದೋಬಸ್ತ್ ನಡುವೆಯೂ ಪ್ರಶ್ನೆ ಪತ್ರಿಕೆ ವಾಟ್ಸಪ್ ನಲ್ಲಿ ಹರಿದಾಡಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ರಾಯಚೂರಿನ ಮಾನ್ವಿ ಪಟ್ಟಣದ ಎಸ್ ಆರ್ ಎಸ್ ವಿ ಎಸ್ ಪಿಯು ಕಾಲೇಜಿನಲ್ಲಿ ಸೋಮವಾರ ಅಕೌಂಟೆನ್ಸಿ ಪರೀಕ್ಷೆ ನಡೆಯುತ್ತಿತ್ತು. ಪ್ರಸ್ತುತ ಪೊಲೀಸರ ಅತಿಥಿಯಾಗಿರುವ ಸಿದ್ಧನಗೌಡ ಸೋಮವಾರ ಬೆಳಗ್ಗೆ 10.45ರಲ್ಲಿ ಪರೀಕ್ಷಾ ಪರಿವೀಕ್ಷಕನ ನೆಪದಲ್ಲಿ ಕೇಂದ್ರ ಪ್ರವೇಶಿಸಿದ್ದ. ಈ ವೇಳೆ ವಿದ್ಯಾರ್ಥಿಯೊಬ್ಬನ ಬಳಿ ಹೋಗಿ ಪ್ರಶ್ನೆಪತ್ರಿಕೆಯ 3ನೇ ಪುಟವನ್ನು ತನ್ನ ಮೊಬೈಲ್ನಲ್ಲಿ ಫೋಟೋ ತೆಗೆದುಕೊಂಡಿದ್ದ. ಕಳಿಂಗ ಕಾಲೇಜಿನ ಪ್ರಾಂಶುಪಾಲ ಮಹೇಶ್ ಎಂಬುವವರಿಗೆ 11.30ಕ್ಕೆ ವಾಟ್ಸ್ ಆಪ್ ನಲ್ಲಿ ಕಳುಹಿಸಿದ್ದ. ನಂತರ ಮಹೇಶ್, ಕಾಲೇಜಿನ ನಿರ್ದೇಶಕ ಶರಣಬಸಪ್ಪನಿಗೆ ಕಳುಹಿಸಿದ್ದಾರೆ. ಶರಣಬಸಪ್ಪ ಈ ಹಿಂದೆ ಮಾಧ್ಯಮ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರಿಂದ ಮಾಧ್ಯಮ ಮಿತ್ರರಿಗೆ ಕಳುಹಿಸಿದ್ದಾರೆ.
ಮಾಧ್ಯಮಗಳಿಗೆ ತಲುಪಿದ ತಕ್ಷಣ ವಿಷಯ ಬಹಿರಂಗವಾಗಿದ್ದು, ಕ್ಷಣ ಮಾತ್ರದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ ಹಬ್ಬಿತು. ಕೂಡಲೇ ಎಚ್ಚೆತ್ತ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ತನಿಖೆ ನಡೆಸಿ ಮೂರು ಆರೋಪಿಗಳನ್ನು ಇದೀಗ ಬಂಧಿಸಿದ್ದಾರೆ.
ಕೆಟ್ಟ ಹೆಸರು ತರಲು ಕೃತ್ಯ?
ಮಾನ್ವಿ ಪಟ್ಟಣದ ಕಳಿಂಗ ಮತ್ತು ಕಲ್ಮಠ ಕಾಲೇಜಿನ ಅತಿಥಿ ಉಪನ್ಯಾಸಕ ಸಿದ್ದನಗೌಡ ಯಾವ ಉದ್ದೇಶಕ್ಕಾಗಿ ಪ್ರಶ್ನೆಪತ್ರಿಕೆ ಸೋರಿಕೆಗೆ ಮುಂದಾಗಿದ್ದ ಎಂಬುದು ಇನ್ನೂ ನಿಗೂಢವಾಗಿದ್ದು, ತನಿಖೆಯಿಂದ ಮಾತ್ರ ತಿಳಿದುಬರಬೇಕಿದೆ. ಆದರೆ, ಸ್ಥಳೀಯ ಮೂಲಗಳ ಪ್ರಕಾರ ಮಾನ್ವಿ ಪಟ್ಟಣದಲ್ಲಿರುವ ಖಾಸಗಿ ಕಾಲೇಜುಗಳ ಉಪನ್ಯಾಸಕರ ನಡುವಿನ ದ್ವೇಷದಿಂದ ಈ ಕೃತ್ಯಕ್ಕೆ ಆತ ಮುಂದಾಗಿದ್ದಾನೆ. ಕಲ್ಮಠ ಕಾಲೇಜಿನ ಪ್ರಾಂಶುಪಾಲ ಮಹೇಶ್, ಎಸ್ ಆರ್ ಎಸ್ವಿ ಎಸ್ ಪಿಯು ಕಾಲೇಜಿಗೆ ಕೆಟ್ಟ ಹೆಸರು ತರಬೇಕು. ಪ್ರಶ್ನೆಪತ್ರಿಕೆ ಸೋರಿಕೆಯಾದರೆ, ಕಾಲೇಜಿಗೆ ಕೆಟ್ಟ ಹೆಸರು ಬರುತ್ತದೆ ಎಂಬ ದುರುದ್ದೇಶದಿಂದ ಹೀಗೆ ಮಾಡಿದ್ದಾನೆ ಎಂದು ಶಂಕಿಸಲಾಗುತ್ತಿದೆ.
Advertisement