
ರಾಯಚೂರು: ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದ್ದ ವಾಟ್ಸಪ್ ನಲ್ಲಿ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ತುರ್ತು ಕಾರ್ಯಾಚರಣೆ ನಡೆಸಿರುವ ಅಧಿಕಾರಿಗಳು ಓರ್ವ ಶಿಕ್ಷಕ ಹಾಗೂ ಇತರೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ವರ್ಷ ಎರಡೆರಡು ಬಾರಿ ದ್ವಿತೀಯ ಪಿಯು ಪ್ರಶ್ನೆಪತ್ರಿಕೆ ಸೋರಿಕೆಯಿಂದ ತೀವ್ರ ಮುಜುಗರಕ್ಕೀಡಾಗಿದ್ದ ಶಿಕ್ಷಣ ಇಲಾಖೆ ಈ ಬಾರಿ ಚುನಾವಣೆ ಮಾದರಿ ಬಿಗಿ ಬಂದೋಬಸ್ತ್ ನಲ್ಲಿ ಪರೀಕ್ಷೆ ನಡೆಸಲು ಕ್ರಮ ತೆಗೆದುಕೊಂಡಿತ್ತು. ಆದರೂ ವಾಣಿಜ್ಯ ವಿಭಾಗದ ಅಕೌಂಟೆನ್ಸಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಈ ಸಂಬಂಧ ಇದೀಗ ಮೂವರನ್ನು ಬಂಧಿಸಲಾಗಿದೆ. ಪರೀಕ್ಷೆ ಆರಂಭವಾದ ಅರ್ಧ ಗಂಟೆ ನಂತರ ವಾಟ್ಸ್ ಆಪ್ ನಲ್ಲಿ ಪಶ್ನೆಪತ್ರಿಕೆ ಹರಿದಾಡಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿ ಮಾಡಿತ್ತು.
ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ತುರ್ತು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಯಚೂರಿನ ಕಳಿಂಗ ಮತ್ತು ಕಲ್ಮಠ ಕಾಲೇಜಿನ ಅತಿಥಿ ಉಪನ್ಯಾಸಕ ಸಿದ್ಧನಗೌಡ, ಪ್ರಾಂಶುಪಾಲ ಮಹೇಶ್ ಮತ್ತು ಕಾಲೇಜಿನ ನಿರ್ದೇಶಕ ಶರಣಬಸಪ್ಪ ಎಂಬವವರನ್ನು ಬಂಧಿಸಲಾಗಿದ್ದು, ಪರೀಕ್ಷೆಗೆ ಸಂಬಂಧಿಸದ ವ್ಯಕ್ತಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶ ನೀಡಿದ ಆರೋಪದಲ್ಲಿ ಮುಖ್ಯ ಪರೀಕ್ಷಾ ಮೇಲ್ವಿಚಾರಕ ಸಿ.ಎಸ್. ವಿಜಯರಾವ್ ಅವರನ್ನು ಅಮಾನತು ಮಾಡಲಾಗಿದೆ. ಕಳಿಂಗ ವಿದ್ಯಾಸಂಸ್ಥೆ ಮಾನ್ಯತೆ ರದ್ದುಗೊಳಿಸಲು ನಿರ್ಧರಿಸಿರುವುದಾಗಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೋರಿಕೆ ಅಲ್ಲ, ಪರೀಕ್ಷಾ ಅಕ್ರಮ
ಇನ್ನು ರಾಯಚೂರು ಪ್ರಕರಣ ಪ್ರಶ್ನೆ ಪತ್ರಿಕೆ ಸೋರಿಕೆ ಅಲ್ಲ. ಬದಲಿಗೆ ಪರೀಕ್ಷಾ ಅಕ್ರಮವೆಂದು ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಮರು ಪರೀಕ್ಷೆ ಇಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಹೆದರುವ ಅಗತ್ಯವಿಲ್ಲ ಎಂದೂ ಸ್ಪಷ್ಟನೆ ನೀಡಿದೆ. ಅಂತೆಯೇ ಬಂಧಿತ ಮೂವರ ದೂರವಾಣಿ ಕರೆಗಳ ಪರಿಶೀಲನೆ ನಡೆಸಲು ಪೊಲೀಸರಿಗೆ ತಿಳಿಸಲಾಗಿದೆ ಎಂದು ಸಚಿವರು ತಿಳಿಸಿದರು.
Advertisement