ಡೈರಿ ಗದ್ದಲಕ್ಕೆ ಮತ್ತೆ ಕಲಾಪ ಬಲಿ: ಬಿಜೆಪಿ ವಿರುದ್ದ ಹರಿಹಾಯ್ದ ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ಸಲ್ಲಿಸಿದ ವಿವರಗಳಿವೆ ಎನ್ನಲಾದ ಡೈರಿ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಸತತ ಎರಡನೇ ದಿನವೂ ಪಟ್ಟು ಹಿಡಿದ ಹಿನ್ನಲೆಯಲ್ಲಿ ವಿಧಾನಸಭೆಯ ಕಲಾಪ ಶುಕ್ರವಾರವೂ ಧರಣಿ ಹಾಗೂ ಆರೋಪ್-ಪ್ರತ್ಯಾರೋಪಕ್ಕೆ...
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Updated on: 
ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ಸಲ್ಲಿಸಿದ ವಿವರಗಳಿವೆ ಎನ್ನಲಾದ ಡೈರಿ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಸತತ ಎರಡನೇ ದಿನವೂ ಪಟ್ಟು ಹಿಡಿದ ಹಿನ್ನಲೆಯಲ್ಲಿ ವಿಧಾನಸಭೆಯ ಕಲಾಪ ಶುಕ್ರವಾರವೂ ಧರಣಿ ಹಾಗೂ ಆರೋಪ್-ಪ್ರತ್ಯಾರೋಪಕ್ಕೆ ಬಲಿಯಾಯಿತು. 
ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಡೈರಿ ವಿಚಾರ ಪ್ರಸ್ತಾಪಿಸಿದ ಬಿಜೆಪಿ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟುಹಿಡಿದಿತ್ತು. ಡೈರಿ ವಿಚಾರ ಕುರಿತಂತೆ ಚರ್ಚೆಗೆ ನಿಯಮ 69ರ ಅಡಿಯಲ್ಲಿ ಅವಕಾಶ ನೀಡುವುದಾಗಿ ಸ್ಪೀಕರ್ ಪ್ರಕಟಿಸಿದ ನಂತರ ತಮ್ಮದೇ ರೂಲಿಂಗನ್ನು ವಾಪಸ್ ಪಡೆಯುವ ಮೂಲಕ ಸದನದ ಘನೆತೆಗ ಕಳಂಕ ತರಲಾಗುತ್ತಿದೆ. ಚರ್ಚೆಗೆ ಅವಕಾಶ ಕೊಟ್ಟ ನಂತರ ಚರ್ಚೆ ನಡೆಸುವುದು ನಮ್ಮ ಹಕ್ಕು. ಪ್ರತಿಪಕ್ಷಗಳ ಹಕ್ಕು ಮೊಟಕುಗೊಳಿಸುವಂತಹ ಕೆಲಸ ನಡೆಯುತ್ತಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ವಾಗ್ದಾಳಿ ನಡೆಸಿದರು. 
ಆದರೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸದಸ್ಯರು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಕ್ರಿಯಾಲೋಪ ಎತ್ತಿರುವುದನ್ನು ಸ್ಪೀಕರ್ ಮಾನ್ಯ ಮಾಡಿದ್ದಾರೆ. ಹೀಗಾಗಿ ಡೈರಿ ವಿಚಾರವಾಗಿ ಚರ್ಚೆ ನಡೆಸುವ ಪ್ರಶ್ನೆಯೇ ಬರುವುದಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ, ಸ್ಪೀಕರ್ ಕೆ.ಬಿ ಕೋಳಿವಾಡ ಅವರು, ಪ್ರತಿಪಕ್ಷಗಳು ಧರಣಿ ವಾಪಸ್ ಪಡೆದು ಬಜೆಟ್ ಮೇಲಿನ ಚರ್ಚೆ ಹಾಗೂ ಬರ ಪರಿಸ್ಥಿತಿ ಚರ್ಚೆಯಲ್ಲಿ ಪಾಲ್ಗೊಂಡು ಸುಗಮ ಕಲಾಪ ನಡೆಯಲು ಅವಕಾಶ ಕಲ್ಪಿಸಬೇಕೆಂದು ಪದೇ ಪದೇ ಮನವಿ ಮಾಡಿದರು. 
ಸ್ಪೀಕರ್ ಹಲವು ಬಾರಿ ಮನವಿ ಮಾಡಿದರೂ ಜಗ್ಗದ ಪ್ರತಿಪಕ್ಷಗಳ ಸದಸ್ಯರು, ತಮ್ಮ ಧರಣಿಯನ್ನು ಮುಂದುವರೆಸಿದರು. ತೀವ್ರ ಗದ್ದಲ ಹಿನ್ನಲೆಯಲ್ಲಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು. 
ಕಲಾಪ ಮುಂದೂಡುವುದಕ್ಕೂ ಕೆಲ ನಿಮಿಷಗಳ ಮುನ್ನ ಬಿಜೆಪಿ ವಿರುದ್ಧ ಕಂಡ ಕಾರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪ್ರಚಾರಕ್ಕಾಗಿ ಬಿಜೆಪಿಯವರು ಅಧಿವೇಶನ ಹಾಳಾಗುವಂತೆ ಮಾಡುತ್ತಿದ್ದಾರೆ. ಜನರೇ ನಿಮಗೆ ಸರಿಯಾದ ಪಾಠವನ್ನು ಕಲಿಸುತ್ತಾರೆಂದು ಹೇಳಿದರು. 
ಸಾಕಷ್ಟು ಬಿಜೆಪಿ ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ. ಬಿಜೆಪಿ ನಾಯಕರು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಕನಸ್ಸನ್ನು ಕಾಣುತ್ತಿದ್ದಾರೆ. ಆದರೆ, ಈ ಕನಸು ಎಂದಿಗೂ ನನಸಾಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆಂದು ತಿಳಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com