ರಾಜ್ಯವನ್ನು 'ಉಡ್ತಾ ಕರ್ನಾಟಕ' ಆಗಲು ಬಿಡುವುದಿಲ್ಲ: ಜಿ. ಪರಮೇಶ್ವರ್

ಮಾದಕ ವಸ್ತು ಮಾರಾಟ ಕುರಿತಂತೆ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಪಂಜಾಬ್'ನಂತೆ ರಾಜ್ಯವನ್ನು 'ಉಡ್ತಾ ಕರ್ನಾಟಕ' ಆಗಲು ಬಿಡುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್...
ಗೃಹ ಸಚಿವ ಪರಮೇಶ್ವರ್
ಗೃಹ ಸಚಿವ ಪರಮೇಶ್ವರ್
Updated on
ಬೆಂಗಳೂರು: ಮಾದಕ ವಸ್ತು ಮಾರಾಟ ಕುರಿತಂತೆ ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಪಂಜಾಬ್'ನಂತೆ ರಾಜ್ಯವನ್ನು 'ಉಡ್ತಾ ಕರ್ನಾಟಕ' ಆಗಲು ಬಿಡುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಅವರು ಗುರುವಾರ ಹೇಳಿದ್ದಾರೆ. 
ನಗರದಲ್ಲಿ ಮಾದಕ ವಸ್ತು ಮಾರಾಟವಾಗುತ್ತಿರುವ ಕುರಿತು ಜೆಡಿಎಸ್'ನ ಟಿ.ಎ. ಶರವಣ, ಕಾಂಗ್ರೆಸ್'ನ ಎಂ ನಾರಾಯಣ ಸ್ವಾಮಿ ಹಾಗೂ ಬಿಜೆಪಿಯ ಲೆಹರ್ ಸಿಂಗ್ ಸಿರೋಯ ಅವರ ಪ್ರಶ್ನೆಗೆ ಉತ್ತರಿಸಿರುವ ಅವರು, ಮಾದಕ ವಸ್ತು ಕಳ್ಳಸಾಗಣೆ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದೆ. ಪ್ರಮುಖವಾಗಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಬೆಂಗಳೂರು ಪಂಜಾಬ್ ಹಾದಿ ಹಿಡಿಯಲು ನಾವು ಬಿಡುವುದಿಲ್ಲ. ರಾಜ್ಯ 'ಉಡ್ತಾ ಪಂಜಾಬ್' ಆಗುವುದಿಲ್ಲ ಎಂದು ಹೇಳಿದ್ದಾರೆ. 
ಪ್ರಕರಣಗಳ ಸಂಬಂಧ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಮಾದಕ ವಸ್ತು ಕಳ್ಳಸಾಗಣೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಕಾಲೇಜುಗಳ ಬಳಿಯಿರುವ ಅಂಗಡಿಗಳಲ್ಲಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. 
ಮಾದಕ ವಸ್ತು ಕಳ್ಳಸಾಗಣೆ, ಅಪಹರಣ ಪ್ರಕರಣಗಳ ಸಂಬಂಧ ಈ ವರೆಗೂ 65 ಭಾರತೀಯರು ಹಾಗೂ 23 ವಿದೇಶಿ ಪ್ರಜೆಗಳನ್ನು ಬಂಧನಕ್ಕೊಳಪಡಿಸಲಾಗಿದೆ. ಮಾದಕ ವಸ್ತು ಕಳ್ಳಸಾಗಣೆಯಲ್ಲಿ ಬಹುತೇಕ ವಿದೇಶಿಯರೇ ಹೆಚ್ಚು ಅಪರಾಧಿಗಳಾಗಿದ್ದಾರೆ. ನೈಜೀರಿಯನ್ನರೇ ಹೆಚ್ಚಿದ್ದಾರೆ. 
ಶಾಲಾ-ಕಾಲೇಜುಗಳ ಹೊರಗಿನ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದು, ಮಂಗಳೂರು, ಮಣಿಪಾಲದಂತಹ ಶಿಕ್ಷಣ ಸಂಸ್ಥೆಗಳು ಹೆಚ್ಚಿರುವ ಪ್ರದೇಶದಲ್ಲಿ ಡ್ರಗ್ಸ್ ಹಾವಳಿ ಇರುವುದಾಗಿ ಸಚಿವರು ಮಾಹಿತಿ ನೀಡಿದ್ದಾರೆ. 
ಬೆಂಗಳೂರು ಕುರಿತು ವಿಶೇಷ ಎಚ್ಚರಿಕೆ ವಹಿಸಲಾಗಿದೆ. ಒಟ್ಟು 1023 ವಿದೇಶಿಯರ ವಿಸಾ ಅವಧಿ ಮುಗಿದಿದ್ದು, ಇವರಲ್ಲಿ ಬಹುಪಾಲು ಮಂದಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇವರೆಲ್ಲರನ್ನೂ ಗಡಿಪಾರು ಮಾಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಮಾತುಕತೆ ನಡೆಸಲಾಗಿದ್ದು, ಈಗಾಗಲೇ 59 ವಿದೇಶಿಯರ ಗಡಿಪಾರು ಮಾಡಲಾಗಿದೆ ಎಂದು ತಿಳಿಸಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ನೈಜೀರಿಯಾ ಪ್ರಜೆಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಆತನ ವೀಸಾ ಅವಧಿ ಮುಗಿದಿತ್ತು. ಆತ ಮಾದಕ ವಸ್ತು ಕಳ್ಳಸಾಗಣೆ ಮಾಡುವ ವ್ಯಕ್ತಿಯಾಗಿದ್ದ. ನೈಜೀರಿಯಾ ರಾಯಭಾರಿಗಳಿಗೆ ಮಾಹಿತಿ ನೀಡಿದ್ದರು ಮೃತದೇಹವನ್ನು ತೆಗೆದುಕೊಂಡು ಹೋಗಲು ಯಾರೂ ಬರಲಿಲ್ಲ. ನ್ಯಾಯಾಲಯದ ಆದೇಶದ ಬಳಿಕ ಶವಸಂಸ್ಕಾರವನ್ನು ಮಾಡಲಾಗಿತ್ತು ಎಂದು ಇದೇ ವೇಳೆ ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com