ಬೆಂಗಳೂರು: ಮನೆಗೆ ನುಗ್ಗಿ ಗನ್ ತೋರಿಸಿ ನಗದು, ಚಿನ್ನಾಭರಣ ದರೋಡೆ

ದುಷ್ಕರ್ಮಿಗಳ ತಂಡವೊಂದು ಕೆ.ಆರ್. ಪುರಂನ ಸೀಗೆಹಳ್ಳಿಯ ಮನೆಯೊಂದಕ್ಕೆ ನುಗ್ಗಿ ದಂಪತಿಗಳಿಗೆ ಗನ್ ತೋರಿಸಿ ಲಕ್ಷಾಂತರ....
ಪಾರ್ಥಿಬನ್ ನಿವಾಸ
ಪಾರ್ಥಿಬನ್ ನಿವಾಸ
ಬೆಂಗಳೂರು: ದುಷ್ಕರ್ಮಿಗಳ ತಂಡವೊಂದು ಕೆ.ಆರ್. ಪುರಂನ ಸೀಗೆಹಳ್ಳಿಯ ಮನೆಯೊಂದಕ್ಕೆ ನುಗ್ಗಿ ದಂಪತಿಗಳಿಗೆ ಗನ್ ತೋರಿಸಿ ಲಕ್ಷಾಂತರ ರುಪಾಯಿ ನಗದು ಹಾಗೂ ಚಿನ್ನಾಭರಣ ದರೋಡೆ ಮಾಡಿದ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ. 
ಇಂದು ಬೆಳಗಿನ ಜಾವ 3.30ರ ಸುಮಾರಿಗೆ ನೋಕಿಯಾ ಕಂಪನಿಯ ಲೆಕ್ಕಾಧಿಕಾರಿ(ಅಕೌಂಟೆಂಟ್)ಪಾರ್ಥಿಬನ್ ಅವರ ಮನೆಗೆ ನುಗ್ಗಿದ ೭ ಮಂದಿಯ ತಂಡ ರಾಡ್‌ನಿಂದ ದಂಪತಿಗಳ ಮೇಲೆ ಹಲ್ಲೆ ನಡೆಸಿ, ಬಾಯಿಗೆ ಪಿಸ್ತೂಲ್ ಇಟ್ಟು ಬೆದರಿಸಿ ೨ ಲಕ್ಷ ೬೦ ಸಾವಿರ ನಗದು ಸೇರಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಪಾರ್ಥಿಬನ್ ಅವರ ರಕ್ಷಣೆಗೆ ಬಂದ ಪತ್ನಿ ಪ್ರಭಾವತಿ, ತಾಯಿ ವಲ್ಲಿಯಮ್ಮನ್, ಮಗಳು ಪವಿತ್ರ ಅವರ ಮೇಲೆ ಹಲ್ಲೆ ನಡೆಸಿ ಕೈ ಕಾಲು ಕಟ್ಟಿ ಬೆದರಿಸಿರುವ ದುಷ್ಕರ್ಮಿಗಳು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಹಲ್ಲೆಯಿಂದ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾರ್ಥಿಬನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಏಳು ಮಂದಿ ದರೋಡೆಕೋರರು, ಮನೆಯ ಮುಂಬಾಗಿಲು ಮುರಿದು ಒಳನುಗ್ಗಿ ಬೆಲೆಬಾಳುವ ವಸ್ತುಗಳಿಗಾಗಿ ಶೋಧ ನಡೆಸಿದ್ದಾರೆ. ಗಲಾಟೆಯಿಂದ ಎಚ್ಚರಗೊಂಡು ಪ್ರತಿರೋಧ ತೋರಿದ ಪಾರ್ಥಿಬನ್ ಅವರ ಕಾಲಿಗೆ ರಾಡ್‌ನಿಂದ ಹೊಡೆದಿದ್ದಾರೆ ಅವರ ರಕ್ಷಣೆಗೆ ಬಂದ ಪತ್ನಿ ಪ್ರಭಾವತಿ, ತಾಯಿ ವಲ್ಲಿಯಮ್ಮನ್, ಮಗಳು ಪವಿತ್ರ ಅವರ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿ ಕೈ ಕಾಲು ಕಟ್ಟಿ ಬೆದರಿಸಿದ್ದಾರೆ.
ಗಾಯಗೊಂಡ ಪಾರ್ಥಿಬನ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪೊಲಿಸರಿಗೆ ಮಾಹಿತಿ ನೀಡಲಾಗಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ದಳ ಶ್ವಾನದಳ ತಪಾಸಣೆ ನಡೆಸಿವೆ.
ದರೋಡೆಕೋರರು ಸುಮಾರು ೨೦ರಿಂದ ೩೦ ವರ್ಷ ವಯಸ್ಸಿನೊಳಗಿನವರಾಗಿದ್ದು  ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಪಾರ್ಥಿಬನ್ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್. ಪುರಂ ಠಾಣೆಯ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ, ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com