ಹಂಚಿನಾಳ: ಬೆಂಕಿಯ ಕೆನ್ನಾಲಗೆ ಅವರ ಬದುಕನ್ನೇ ಕಿತ್ತುಕೊಂಡಿದೆ, ಹಣ, ಜಾನುವಾರು, ಚಿನ್ನ, ಬೆಳ್ಳಿ, ಬ್ಯಾಂಕ್ ದಾಖಲಾತಿಗಳು, ರೇಷನ್ ಕಾರ್ಡ್ ಸೇರಿದಂತೆ ಎಲ್ಲವೂ ಬೆಂಕಿಗೆ ಆಹುತಿಯಾಗಿವೆ.
ಬೆಳಗಾವಿಯ ಹಂಚಿನಾಳ ಗ್ರಾಮದಲ್ಲಿ ನಡೆದ ಬೆಂಕಿ ದುರಂತದಲ್ಲಿ ಸುಮಾರು 50 ಕುಟುಂಬಗಳು ತಮ್ಮ ಸೂರು ಕಳೆದುಕೊಂಡು ಬೀದಿಗೆ ಬಿದ್ದಿವೆ. ದುರಂತ ನಡೆದ ಮೂರು ದಿನಗಳ ನಂತರ ಬೂದಿ ಅವಶೇಷಗಳಲ್ಲಿ ತಾವವು ಕಳೆದುಕೊಂಡಿರುವ ಮೌಲ್ಯಯುತ ವಸ್ತುಗಳನ್ನು ಹುಡುಕುತ್ತಿದ್ದಾರೆ.
ಸಿಡಿಲಿನಿಂದಾಗಿ ಈ ಮನೆಗಳಿಗೆ ಬೆಂಕಿ ಹಚ್ಚಿಕೊಂಡಿವೆ, ಅದರಲ್ಲಿ ಹಂಚಿನಾಳದ ವಾಲ್ಮೀಕಿ ದೇವಾಲಯ ರಸ್ತೆಯಲ್ಲಿ 32 ಮನೆಗಳು ಸುಟ್ಟು ಭಸ್ಮವಾಗಿವೆ. ಬೆಂಕಿಗೆ ಆಹುತಿಯಾಗದೇ ಉಳಿದಿರುವ ವಸ್ತುಗಳನ್ನು ತಮ್ಮ ಮನೆಗಳಿಂದ ಸಂತ್ರಸ್ತರು ಹೊರ ತೆಗೆಯುತ್ತಿದ್ದಾರೆ.
ಕಬೋರ್ಡ್ ನಲ್ಲಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಇಟ್ಟಿದ್ದೆವು, ಬೂದಿಯಲ್ಲಿ ಅವುಗಳನ್ನು ಹುಡುಕುತ್ತಿದ್ದರು ಸಿಗುತ್ತಿಲ್ಲ, ನಾನು ಲಾಕರ್ ನಲ್ಲಿ 20 ಸಾವಿರ ರು. ಹಣ ಇಟ್ಟಿದ್ದೆ, ಬೆಂಕಿ ತೀವ್ರವಾಗಿ ಹರಡಿದ್ದರಿಂದ ಮನೆಯೊಳಗೆ ಹೋಗಿ ಅವುಗಳನ್ನು ತೆಗೆದುಕೊಂಡು ಬರಲಾಗಲಿಲ್ಲ ಎಂದು ಸಂತ್ರಸ್ತ ಸುರೇಶ್ ನೋವು ತೋಡಿಕೊಂಡಿದ್ದಾರೆ.
ಮನೆಗಳ ಸುತ್ತ ಮುತ್ತ ಅಧಿಕವಾಗಿ ಬೆಳದಿದ್ದ ಕಳೆಯಿಂದಾಗಿ ಸಿಡಿಲಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಜಿಲ್ಲಾಡಳಿತ ಕಾರಣ ನೀಡಿದೆ.
ನಾವು ಒಂದೇ ಮನೆಯಲ್ಲಿ ಎರಡು ಕುಟುಂಬಗಳು ವಾಸಿಸುತ್ತಿದ್ದೆವು.ನಮ್ಮ ಮನೆ ಸಂಪೂರ್ಣವಾಗಿ ಭಸ್ಮವಾಗಿದೆ. ಹೀಗಾಗಿ ನಾವಿಬ್ಬರು ಸಹೋದರರು ಪರಿಹಾರ ಕೇಳುತ್ತಿದ್ದೇವೆ, ಜಿಲ್ಲಾಡಳಿತ ನಮ್ಮ ಬೇಡಿಕೆಗಳನ್ನು ನೆರವೇರಿಸುತ್ತದೆ ಎಂಬ ಭರವಸೆಯಲ್ಲಿದ್ದೇವೆ, ಬೆಂಕಿ ಆಕಸ್ಮಿಕದಲ್ಲಿ ನಾವು ನಮ್ಮ ಜಾನುವಾರು ಮತ್ತು ಕೃಷಿ ಉಪಕರಣಗಳನ್ನು ಕಳೆದುಕೊಂಡಿದ್ದೇವೆ, ಹೀಗಾಗಿ ಮತ್ತೆ ಅವುಗಳನ್ನೆಲ್ಲಾ ಖರೀದಿಸಿ ಕೆಲಸ ಆರಂಭಿಸುವುದು ಕಷ್ಟದ ಕೆಲಸ ವಾಗಿದೆ ಎಂದು ಶಿವಪ್ಪ ಎಂಬುವರು ಹೇಳಿದ್ದಾರೆ.
ಪಕ್ಕದ ಗ್ರಾಮದವರು ಸಂತ್ರಸ್ತರ ನೆರವಿಗೆ ಬಂದಿದ್ದಾರೆ. ಊಟ, ನೀರು, ಬಟ್ಟೆ, ಮತ್ತು ಹೊದಿಕೆಗಳನ್ನ ನೀಡುತ್ತಿದ್ದಾರೆ ಎಂದು ಸಂತ್ರಸ್ತರು ತಿಳಿಸಿದ್ದಾರೆ.
ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಬೆಳಗಾವಿ ಜಿಲ್ಲಾಧಿಕಾರಿ ಎನ್ ಜಯರಾಮ್, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ತಹಶೀಲ್ದಾರ್ ಸೇರಿದಂತೆ ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದ್ದಾರೆ.