ಕಾರವಾರ: ಲಿಂಬೋ ಸ್ಕೇಟಿಂಗ್‌ ನಲ್ಲಿ ದಾಖಲೆ ಬರೆದ 5 ವರ್ಷದ ಬಾಲಕಿ

ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಹಿಮ್ಮುಖವಾಗಿ ಲಿಂಬೋ ಸ್ಕೇಟಿಂಗ್‌ ಮಾಡುವ ಮೂಲಕ 5 ವರ್ಷದ ಬಾಲಕಿ ಪ್ರಿಯದರ್ಶಿನಿ ಎಂ. ಹಿರೇಮಠ ಹೊಸ ..
ಪ್ರಿಯದರ್ಶಿನಿ ಹೀರೆಮಠ್
ಪ್ರಿಯದರ್ಶಿನಿ ಹೀರೆಮಠ್
ಕಾರವಾರ:  ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಹಿಮ್ಮುಖವಾಗಿ ಲಿಂಬೋ ಸ್ಕೇಟಿಂಗ್‌ ಮಾಡುವ ಮೂಲಕ  5 ವರ್ಷದ ಬಾಲಕಿ ಪ್ರಿಯದರ್ಶಿನಿ ಎಂ. ಹಿರೇಮಠ ಹೊಸ ದಾಖಲೆ ಬರೆದಿದ್ದಾಳೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ವಸತಿ ಸಂಕೀರ್ಣದ ಸ್ಕೇಟಿಂಗ್‌ ರಿಂಕ್‌ನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪ್ರದರ್ಶನದಲ್ಲಿ ಪ್ರಿಯದರ್ಶಿನಿ ಈ ಸಾಧನೆ ಮಾಡಿದ್ದಾಳೆ.
50 ಮೀಟರ್‌ ದೂರದವರೆಗೆ ನೆಲದಿಂದ 6.50 ಇಂಚು ಎತ್ತರದಲ್ಲಿ ಒಟ್ಟು 48 ಬಾರ್‌ಗಳನ್ನು ಅಡ್ಡಲಾಗಿ ಇಡಲಾಗಿತ್ತು. ಈ ಬಾರ್‌ಗಳ ಅಡಿಯಲ್ಲಿ ಹಿಮ್ಮುಖವಾಗಿ ನುಸುಳಿ ಕೇವಲ 22 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ, ನಂತರ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಅದೇ ರೀತಿಯಲ್ಲಿ ನುಸುಳಿ  ನೆರೆದಿದ್ದವರ ಮನಗೆದ್ದಿದ್ದಾಳೆ. 
ದೆಹಲಿಯ ರೆಕಾರ್ಡ್‌ ಹೋಲ್ಡರ್ಸ್‌ ರಿಪಬ್ಲಿಕ್‌ ಇಂಡಿಯಾ ಮಾರ್ಕೆಟಿಂಗ್‌ ಮುಖ್ಯಸ್ಥ ಪ್ರಮೋದ್‌ ರೂಹಿಯಾ ದಾಖಲೆಯನ್ನು ಘೋಷಿಸಿದರಲ್ಲದೇ ಪ್ರಿಯದರ್ಶಿನಿಗೆ ಪ್ರಮಾಣ ಪತ್ರ ವಿತರಿಸಿದರು. ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್‌ನ ಮಾರಿಯಾ ಗೋಮ್ಸ್‌ ಸಹ ವೀಕ್ಷಕರಾಗಿ ಬಂದಿದ್ದರು.
ಪ್ರಿಯಾದರ್ಶಿನಿಯ ಈ ಸಾಧನೆಯ ಪ್ರದರ್ಶನವನ್ನು ಸಂಪೂರ್ಣವಾಗಿ ಚಿತ್ರೀಕರಿಸಲಾಗಿದ್ದು, ಅದನ್ನು ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ ಸಂಸ್ಥೆಗೆ ಕಳುಹಿಸಿಕೊಡಲಾಗುವುದು.
ಕಳೆದ ಎರಡು ವರ್ಷಗಳಿಂದ ಪ್ರಿಯದರ್ಶಿನಿ  ಕೈಗಾ ರೋಲರ್‌ ಸ್ಕೇಟಿಂಗ್‌ ಕ್ಲಬ್‌ ನಲ್ಲಿ ತರಬೇತಿ ಪಡೆಯುತ್ತಿದ್ದಳು.ಕೈಗಾ ಕೇಂದ್ರೀಯ ವಿದ್ಯಾಲಯದ ಯುಕೆಜಿಯಲ್ಲಿ ಓದುತ್ತಿರುವ ಪ್ರಿಯದರ್ಶಿನಿ, ತರಬೇತುದಾರ ದಿಲೀಪ್‌ ಹಣಬರ ಗರಡಿಯಲ್ಲಿ ತರಬೇತಿ ಪಡೆದಿದ್ದಾಳೆ.ಕಳೆದ ಆರು ತಿಂಗಳಿಂದ ಹಿಮ್ಮುಖ ಚಲನೆಯ ಲಿಂಬೋ ಸ್ಕೇಟಿಂಗ್ ಗಾಗಿ ಕಠಿಣ ಅಭ್ಯಾಸ ಮಾಡುತ್ತಿದ್ದಳು ಎಂದು ದಿಲೀಪ್ ಹೇಳಿದ್ದಾರೆ.
ಪ್ರಿಯದರ್ಶಿನಿ ಕೈಗಾ ಅಣುವಿದ್ಯುತ್‌ ಸ್ಥಾವರದ ವೈಜ್ಞಾನಿಕ ಸಹಾಯಕ ಮಹಾಂತೇಶ ಹಿರೇಮಠ ಹಾಗೂ ಭಾರತಿ ದಂಪತಿ ಪುತ್ರಿ. ಮಗಳ ಸಾಧನೆಯು ನಮಗೆ ಹೆಮ್ಮೆ ತಂದಿದೆ ಎಂದು ಪೋಷಕರು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com