ರಾಜ್ಯದಲ್ಲಿ ಇಂದಿನಿಂದ ಬಿಜೆಪಿ 'ಪರಿವರ್ತನಾ ಯಾತ್ರೆ
ರಾಜ್ಯ
ರಾಜ್ಯದಲ್ಲಿ ಇಂದಿನಿಂದ ಬಿಜೆಪಿ 'ಪರಿವರ್ತನಾ ಯಾತ್ರೆ': ಅಮಿತ್ ಶಾರಿಂದ ಚಾಲನೆ
ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟದ ರಣಕಹಳೆ ಮೊಳಗಿಸಿರುವ ಬಿಜೆಪಿಯ 'ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ' ಗುರುವಾರ ಚಾಲನೆ ದೊರೆಯಲಿದ್ದು. ಜ.28ರವರೆಗೆ ನಡೆಯುವ ಯಾತ್ರೆಗೆ...
ಬೆಂಗಳೂರು: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟದ ರಣಕಹಳೆ ಮೊಳಗಿಸಿರುವ ಬಿಜೆಪಿಯ 'ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ' ಗುರುವಾರ ಚಾಲನೆ ದೊರೆಯಲಿದ್ದು. ಜ.28ರವರೆಗೆ ನಡೆಯುವ ಯಾತ್ರೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಚಾಲನೆ ನೀಡಲಿದ್ದಾರೆ.
ಬಿಜೆಪಿ ನಡೆಯುತ್ತಿರುವ ಈ ಪರಿವರ್ತನಾ ಯಾತ್ರೆ ರಾಜ್ಯ ರಾಜಕಾರಣದ ಮಟ್ಟಿಗೆ ಇದೊಂದು ಐತಿಹಾಸಿಕ ಯಾತ್ರೆಯಾಗಲಿದ್ದು, ದಾಖಲೆ ಮೆರೆಯಲಿದೆ. ಸುಮಾರು 75 ದಿನಗಳ ಕಾಲ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಹಲವು ಮುಖಂಡರು ಅಂದಾಜು 7,500 ಕಿ.ಮೀ ಗಳನ್ನು ಕ್ರಮಿಸುವ ಗುರಿ ಹೊಂದಲಾಗಿದೆ.
ನಗರದ ಹೊರವಲಯದಲ್ಲಿನ ತುಮಕೂರು ರಸ್ತೆಯಲ್ಲಿರುವ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಆವರಣದಲ್ಲಿ ಬೃಹತ್ ಉದ್ಘಾಟನಾ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಅಮಿತ್ ಶಾ ಅವರೊಂದಿಗೆ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ-ಸಹ ಉಸ್ತವಾರಿಗಳೂ ಆಗಿರುವ ಕೇಂದ್ರ ಸಚಿವರಾದ ಪ್ರಕಾಶ್ ಜವಡೇಕರ್ ಮತ್ತು ಪಿಯೂಷ್ ಗೋಯಲ್ ಸೇರಿ ರಾಜ್ಯದ ಎಲ್ಲಾ ಹಿರಿಯ ನಾಯಕರೂ ಉಪಸ್ಥಿತರಿರಲಿದ್ದಾರೆ.
ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಮತಯಾಚನೆ ಮಾಡುವುದೇ ಈ ಯಾತ್ರೆಯ ಮುಖ್ಯ ಉದ್ದೇಶವಾಗಿದ್ದು, ರಾಜ್ಯ ಎಳ್ಲಾ 224 ವಿಧಾನಸಭಾ ಕ್ಷೇತ್ರಗಳನ್ನೂ ಒಳಗೊಳ್ಳಲಾಗುತ್ತದೆ. ಬಿ.ಎಸ್. ಯಡಿಯೂರಪ್ಪ ಅವರುಮೊದಲ ದಿನದಿಂದ ಕೊನೆಯ ದಿನದವರೆಗೂ ಪ್ರವಾಸ ನಡೆಸಲು ತೀರ್ಮಾನಿಸಿದ್ದು, ಇತರೆ ಪ್ರಮುಖ ನಾಯಕರು ಆಯಾ ಭಾಗಗಳಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿದುಬಂದಿದೆ.
ಇದೇ ವೇಳೆ ಕಾಂಗ್ರೆಸ್ ತೊರೆದಿರುವ ಚೆನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ ಮತ್ತು ಬಿ.ಆರ್.ಎಸ್ ಕಾಂಗ್ರೆಸ್'ನ ಕುಡಚಿ ಶಾಸಕ ರಾಜೀವ್ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಬೆಂಗಲೂರು ಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳ ಪ್ರತಿ ಬೂತ್ ನಿಂದ 6 ಬೈಕ್ ಗಳಲ್ಲಿ ತಲಾ ಇಬ್ಬರಂತೆ ಮತ್ತು ಇತರೆ 16 ಜಿಲ್ಲೆಗಳ 86 ವಿಧಾನಸಭಾ ಕ್ಷೇತ್ರಗಳ ಪ್ರತಿ ಬೂತ್ ನಿಂದ 3 ಬೈಕ್ ಗಳಲ್ಲಿ ತಲಾ ಇಬ್ಬರಂತೆ ಒಟ್ಟು 1 ಲಕ್ಷ ಬೈಕ್ ಗಳಲ್ಲಿ 2 ಲಕ್ಷ ಯುವ ಮೋರ್ಚಾ ಕಾರ್ಯಕರ್ತರು ಆಗಮಿಸಲಿದ್ದಾರೆ. ಇವರೊಂದಿಗೆ ಇತರೆ ವಾಹನಗಳಲ್ಲಿ ಸುಮಾರು 1 ಲಕ್ಷ ಮಂದಿ ಪಾಲ್ಗೊಳ್ಳುತ್ತಿದ್ದು, ಒಟ್ಟಾರೆ ಸುಮಾರು 3 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.
ಯಾತ್ರೆಗೆ ವಿಶೇಷ ರಥ ಸಿದ್ಧ
ಪರಿವರ್ತನಾ ಯಾತ್ರೆಗೆ ಸಂಬಂಧಿಸಿದಂತೆ ಸುಮಾರು ರೂ.90ಲಕ್ಷ ವೆಚ್ಚದಲ್ಲಿ ವಿಶೇಷ ರಥವನ್ನು ಸಿದ್ಧಪಡಿಸಲಾಗಿದ್ದು, ಯಾತ್ರೆಯ ಜೊತೆಗೆ ರಥಕ್ಕೂ ಅಮಿತ್ ಶಾ ಅವರು ಹಸಿರು ನಿಶಾನೆ ತೋರಲಿದ್ದಾರೆ.
ಟಾಟಾ ಸಂಸ್ಥೆಯ ವಾಹನವನ್ನು ಕೇಸರಿ ರಥದ ರೀತಿ ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ ಪರಿವರ್ತನಾ ಯಾತ್ರೆ ಮತ್ತು ಕನ್ನಡಿಗರ ಭರವಸೆಯ ಸರ್ಕಾರಕ್ಕೆ ನಾವು ಬದ್ಧ ಎಂಬ ಘೋಷವಾಕ್ಯವನ್ನು ಬರೆಯಲಾಗಿದೆ. ಸುಮಾರು 12 ಜನ ನಿಂತುಕೊಳ್ಳಲು ಸಾಧ್ಯವಾಗುವ ವೇದಿಕೆ ರಥದಲ್ಲಿ ನಿರ್ಮಾಣ ಮಾಡಲಾಗಿದ್ದು, ಸುಮಾರು 2,000 ಮಂದಿಗೆ ಕೇಳಲು ಸಾಧ್ಯವಾಗುವ ಸಾಮರ್ಥ್ಯವುಳ್ಳ ಮೈಕ್ ನ್ನು ಅಳವಡಿಸಲಾಗಿದೆ.
ರಥ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಒಂದು ತಿರುಗುವ ಕುರ್ಚಿ ಮತ್ತು ಮೇಜನ್ನು ಅಳವಪಡಿಸಲಾಗಿದೆ. ಅಲ್ಲದೆ, ವಿಶ್ರಾಂತಿ ಮತ್ತು ಮಾತುಕತೆಗಾಗಿ ಪ್ರತ್ಯೇಕ ಕೊಠಡಿ ಜೊತೆಗೆ ಶೌಚಾಲಯ, ಅಡುಗೆ ಮನೆ ವ್ಯವಸ್ಥೆ ಕೂಡ ವಾಹನದಲ್ಲಿದೆ.
ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಯಾತ್ರೆಯ ಉದ್ಘಾಟನಾ ಸಮಾರಂಭದ ನಂತರ ಅಲ್ಲಿಯೇ ಮಧ್ಯಾಹ್ನ ಭೋಜನ ನಡೆಯಲಿದೆ. ನಂತರ ಯಾತ್ರೆ ಆರಂಭವಾಗಲಿದ್ದು, ಮೊದಲ ದಿನ ತುಮಕೂರು ಜಿಲ್ಲೆಯ ಕುಣಿಗಲ್ ಮೂಲಕ ಸಂಚರಿಸಿ ಯಡಿಯೂರಿನಲ್ಲಿ ವಾಸ್ತವ್ಯ ಹೂಡಲಿದೆ. ಪ್ರತಿ ನಿತ್ಯ ಮೂರರಿಂದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಹಾದು ಹೋಗಲಿರುವ ಯಾತ್ರೆಗೆ ಹೆಚ್ಚು ಕಡಿಮೆ ವಾರಕ್ಕೆ ಒಂದರಂತೆ ವಿಶ್ರಾಂತಿ ನೀಡಲಾಗುತ್ತದೆ.
ಯಾತ್ರೆಯಲ್ಲಿ ರಾಷ್ಟ್ರೀಯ ನಾಯಕರು ಭಾಗಿ
ಬಿಜೆಪಿ ನಡೆಸುತ್ತಿರುವ ಈ ಬೃಹತ್ ರ್ಯಾಲಿಯಲ್ಲಿ ರಾಷ್ಟ್ರೀಯ ನಾಯಕರು ಭಾಗಿಯಾಗಲಿದ್ದಾರೆಂದು ಹೇಳಲಾಗುತ್ತಿದೆ. ಉತ್ತಪ್ರದೇಶ ಮುಖ್ಯಮಂತ್ರಿ ಯೋದಿ ಆದಿತ್ಯನಾಥ್ ಅವರು ಡಿ.30 ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ.
ಇನ್ನು ಕೇಂದ್ರ ಸಚಿವೆ ಉಮಾ ಭಾರತಿಯವರು ನ.30 ರಂದು ಬೆಳಗಾವಿ ಜಿಲ್ಲೆಯಲ್ಲಿ ನಡೆಯುವ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಲ್ಲದೆ. ಸಾಧ್ವಿ ನಿರಂಜನ್ ಜ್ಯೋತಿಯವರೂ ಕೂಡ ಡಿ.11 ರಂದು ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಡಿ.21 ರಂದು ಹುಬ್ಬಳ್ಳಿಗೆ, ಅರುಣ್ ಜೇಟ್ಲಿಯವರು ನ11 ರಂದು ಮಂಗಳೂರು ಹಾಗೂ ನಿತಿನ್ ಗಡ್ಕರಿಯವರು ಡಿ.28 ರಂದು ಶಿವಮೊಗ್ಗದಲ್ಲಿ ನಡೆಯುವ ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ.
ಯಾತ್ರೆ ವೇಳೆ ರಾಜ್ಯದಲ್ಲಿ ಸಿದ್ಧರಾಮಯ್ಯ ಸರ್ಕಾರ ವೈಫಲ್ಯಗಳು, ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮಾಡಿರುವ ಸಾಧನೆಗಳು ಪ್ರಮುಖವಾಗಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ