ಬೆಂಗಳೂರು: ಕಳೆದ ಏಳು ದಿನಗಳ ಹಿಂದೆ ದುಷ್ಕರ್ಮಿಯಿಂದ ಅಪಹರಣಕ್ಕೊಳಗಾಗಿದ್ದ ಇಬ್ಬರು ಮಕ್ಕಳು ತಿರುಪತಿಯಲ್ಲಿ ಪತ್ತೆಯಾಗಿದ್ದಾರೆ. ಮಕ್ಕಳನ್ನು ದುಷ್ಕರ್ಮಿಯಿಂದ ರಕ್ಷಿಸಿರುವ ಸಂಜಯ್‌ನಗರ ಠಾಣೆ ಪೊಲೀಸರು ಪೋಷಕರಿಗೆ ಒಪ್ಪಿಸಿದ್ದಾರೆ.
ಅಕ್ಟೋಬರ್ 28 ರಂದು ಉದ್ಯಮಿ ಪ್ರಶಾಂತ್ ಎಂಬುವರ ಮಕ್ಕಳಿಗೆ ತಿಂಡಿ ಕೊಡಿಸುವ ನೆಪ ಹೇಳಿ ವಿನೋದ್ ಎಂಬಾತ ಮಕ್ಕಳನ್ನು ಅಪಹರಿಸಿದ್ದ.
ಪೊಲೀಸರು ಇಬ್ಬರು ಮಕ್ಕಳ ಫೋಟೋವನ್ನು ಸಾಮಾಜಿ ಜಾಲತಾಣದಲ್ಲಿ ಹಾಕಿ ಮಾಹಿತಿ ನೀಡಿದ್ದರು, ಇದರ ಬಗ್ಗೆ ತಿಳಿದುಕೊಂಡ ಆರೋಪಿ ವಿನೋದ್, ಮಕ್ಕಳನ್ನು ತಿರುಪತಿಯಲ್ಲಿ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದ.
ದಿನಗೂಲಿ ಕಾರ್ಮಿಕ ನಾಗೇಶ್ ಎಂಬಾತ ಮಕ್ಕಳನ್ನು ಗಮನಿಸಿ, ಅವರಿಂದ ಮಾಹಿತಿ ಕಲೆ ಹಾಕಿ ಸಂಜಯನಗರ ಪೊಲೀಸರಿಗೆ ವಿಷಯ ತಿಳಿಸಿದ್ದ. ತಿರುಪತಿಗೆ ತೆರಳಿದ್ದ ಪೊಲೀಸರ ತಂಡ ಗುರುವಾರ ಬೆಳಗ್ಗೆ ಮಕ್ಕಳನ್ನು ನಗರಕ್ಕೆ ವಾಪಸ್ ಕರೆ ತಂದಿದೆ.
ಆರೋಪಿ ವಿನೋದ್ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಡಕಾಯಿತಿ ಯತ್ನ ಪ್ರಕರಣವಿದೆ. ಪೊಲೀಸರಿಗೆ ಮಾಹಿತಿ ಗೊತ್ತಾಗಿದೆ ಎಂದು ತಿಳಿದ ಕೂಡಲೇ ವಿನೋದ್ ಎಸ್ಕೇಪ್ ಆಗಿದ್ದಾನೆ. ಆತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಆದರೆ ಆತ ಯಾವ ಕಾರಣಕ್ಕಾಗಿ ಮಕ್ಕಳನ್ನು ಕಿಡ್ನಾಪ್ ಮಾಡಿದ ಎಂಬುದು ಇನ್ನೂ ತಿಳಿದು ಬಂದಿಲ್ಲ.