ಸರ್ಕಾರದ ಸುತ್ತೋಲೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವ ಹಿನ್ನಲೆಯಲ್ಲಿ ಮೊದಲಿನಂತೆ 100 ಸಿಸಿ ಎಂಜಿನ್ ಸಾಮರ್ಥ್ಯಕ್ಕಿಂತ ಕಡಿಮೆಯಿರುವ ವಾಹನಗಳ ನೋಂದಣಿ ರಾಜ್ಯದ್ಯಂತ ಆರಂಭವಾಗಲಿದೆ.
100 ಸಿಸಿ ಬೈಕ್ ಗಳ ಕುರಿತಂತೆ ಸಾರಿಗೆ ಇಲಾಖೆ ಈ ಹಿಂದೆ ಹೊರಡಿಸಿರುವ ಸುತ್ತೋಲೆ ರದ್ದತಿ ಕೋರಿ ಟಿವಿಎಸ್ ಮೋಟರ್ ಕಂಪನಿ ಲಿಮಿಟೆಡ್ ಹಾಗೂ ಹೀರೋ ಮೋಟೋ ಕಾರ್ಪ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಹಿಂಬದಿ ಸೀಟು ಅಳವಡಿಸಿದ 100 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯ ಹೊಂದಿರುವ ದ್ವಿಚಕ್ರ ವಾಹನಗಳ ನೋಂದಣಿ ನಿಷೇಧಿಸುವ ಕರ್ನಾಟಕ ಮೋಟಾರು ವಾಹನ ಅಧಿ ನಿಯಮ 1989ರ 143(3)ಗೆ ತಿದ್ದುಪಡಿ ಮಾಡುವವರೆಗೂ ಸುತ್ತೋಲೆಗೆ ತಡೆಯಾಜ್ಞೆ ನೀಡಿತು.
ಇದಕ್ಕೂ ಮುನ್ನ ಅರ್ಜಿ ವಿಚಾರಣೆ ವೇಳೆ ಕಂಪನಿಗಳ ಪರ ವಕೀಲರು ವಾದ ಮಂಡಿಸಿ, ಕರ್ನಾಟಕ ಮೋಟಾರು ವಾಹನ ಕಾರ್ಯೆ 1989ರ ಸೆಕ್ಷನ್ 143(3) ನಿಯಮದ ಪ್ರಕಾರ ಸರ್ಕಾರ, ಹಿಂಬದಿ ಸೀಟು ಅಳವಡಿಸಿರುವ 100 ಹಾಗೂ ಅದಕ್ಕಿಂತ ಕಡಿಮೆ ಸಿಸಿಯ ದ್ವಿಚಕ್ರ ವಾಹನಗಳ ನೋಂದಣಿ ನಿಷೇಧಿಸಿ ಅ.13ರ ಸುತ್ತೋಲೆ ಹೊರಡಿಸಿದೆ. ಆದರೆ, ಮೋಟಾರು ವಾಹನ ಕಾಯ್ದೆಯು ಕೇಂದ್ರ ಸರ್ಕಾರದ ಕಾಯ್ದೆಯಾಗಿದೆ. ಆದರೆ, ರಾಜ್ಯ ಸರ್ಕಾರ ಸೂಕ್ತ ತಿದ್ದುಪಡಿ ತರದೆ ನಿಷೇಧ ಮಾಡಿದೆ. ಇನ್ನು ಕೇಂದ್ರದಲ್ಲಿ ಕಾಯ್ದೆಯಲ್ಲಿ ಸುರಕ್ಷಿತ ಕ್ರಮಗಳೊಂದಿಗೆ 100 ಸಿಸಿ ಸಾಮರ್ಥ್ಯದ ದ್ವಿಚಕ್ರ ವಾಹನಗಕ್ಕೆ ಹಿಂಬದಿ ಸೀಟು ಅಳವಡಿಸಲು ಅವಕಾಶವಿದೆ. ಮೇಲಾಗಿ ಅರ್ಜಿದಾರರ ಕಂಪನಿಗಳು ಕೇಂದ್ರ ಸರ್ಕಾರದ ನಿಯಮಗಳಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಂಡಿವೆಎಂದು ತಿಳಿಸಿದರು.
ಬಳಿಕ ರಾಜ್ಯ ಸರ್ಕಾರವೇ ಈ ಕುರಿತು ತಿದ್ದುಪಡಿ ನಿಯಮ ರೂಪಿಸುವುದಾಗಿ ತಿಳಿಸಿದ್ದರಿಂದ ಹಾಲಿ ಸುತ್ತೋಲೆಗೆ ತಡೆಯಾಜ್ಞೆ ನೀಡಲಾಗುತ್ತಿದೆ ಎಂದು ನ್ಯಾಯಾಲಯ ಮಧ್ಯಂತ ಆದೇಶ ಹೊರಡಿಸಿತು.