ಬೆಂಗಳೂರು: ಬೆಂಗಳೂರಿನ ಮಾಗಡಿ ರಸ್ತೆಯ ಅಗ್ರಹಾರ ದಾಸರಹಳ್ಳಿ ನಿವಾಸಿ ಗೀತಾ ಎಂಬುವರನ್ನು ಹತ್ಯೆಗೈದು ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡುಪಾಳ್ಯ ಗ್ಯಾಂಗ್‌ನ ಐವರಿಗೆ ಜೀವನ ಪರ್ಯಂತ ಶಿಕ್ಷೆ ಹಾಗೂ ತಲಾ ಐದು ಸಾವಿರ ರುಪಾಯಿ ದಂಡ ವಿಧಿಸಿ ವಿಶೇಷ ಕೋರ್ಟ್ ಗುರುವಾರ ತೀರ್ಪು ನೀಡಿದೆ.
ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಿದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶಿವನಗೌಡ ಅವರು, ಐವರು ಅಪರಾಧಿಗಳಿಗೆ ಜೀವನ ಪರ್ಯಂತ ಶಿಕ್ಷೆ ವಿಧಿಸಿದ್ದಾರೆ.
ಒಂಟಿ ಮಹಿಳೆ ಕೊಲೆ ಪ್ರಕರಣದಲ್ಲಿ ದಂಡುಪಾಳ್ಯ ಗ್ಯಾಂಗ್‌ನ ದೊಡ್ಡ ಹನುಮ, ಲಕ್ಷ್ಮೀ, ಮುನಿಕೃಷ್ಣ, ನಲ್ಲತಿಮ್ಮ, ವೆಂಕಟೇಶ್ ದೋಷಿಗಳಾಗಿದ್ದು, ಎಲ್ಲಾ ಅಪರಾಧಿಗಳಿಗೂ ಜೀವನ ಪರ್ಯಂತ ಶಿಕ್ಷೆ ಮತ್ತು ತಲಾ 5 ಸಾವಿರ ರೂ. ದಂಡ ವಿಧಿಸಲಾಗಿದೆ.
2000ನೇ ಇಸವಿಯಲ್ಲಿ ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯ ನಿವಾಸಿ ಗೀತಾ ಅವರನ್ನು ಐವರು ಸೇರಿ ಕೊಲೆ ಮಾಡಿದ್ದರು. ನಂತರ ಮನೆಯಲ್ಲಿದ್ದ ಸೀರೆ, ಬೆಲೆಬಾಳುವ ವಸ್ತುಗಳನ್ನು ದೋಚಿದ್ದರು.