ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು: ಸಾಹಿತಿ. ಪ್ರೊ.ಚಂದ್ರಶೇಖರ ಪಾಟೀಲ್

ರಾಜ್ಯದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಪ್ರತ್ಯೇಕ ಧ್ವಜದ ಅವಶ್ಯಕತೆ ಇದೆ ಎಂದು 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಾಹಿತಿ. ಪ್ರೊ.ಚಂದ್ರಶೇಖರ ಪಾಟೀಲ್ ಅವರು ಬುಧವಾರ ಹೇಳಿದ್ದಾರೆ...
83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಾಹಿತಿ. ಪ್ರೊ.ಚಂದ್ರಶೇಖರ ಪಾಟೀಲ್
83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಾಹಿತಿ. ಪ್ರೊ.ಚಂದ್ರಶೇಖರ ಪಾಟೀಲ್
ಬೆಂಗಳೂರು: ರಾಜ್ಯದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ಪ್ರತ್ಯೇಕ ಧ್ವಜದ ಅವಶ್ಯಕತೆ ಇದೆ ಎಂದು 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಾಹಿತಿ. ಪ್ರೊ.ಚಂದ್ರಶೇಖರ ಪಾಟೀಲ್ ಅವರು ಬುಧವಾರ ಹೇಳಿದ್ದಾರೆ. 
ನಗರದ ಪ್ರೆಸ್ ಕ್ಲಬ್ ನಲ್ಲಿ ನಿನ್ನೆ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿರುವ ಅವರು, ಪ್ರತ್ಯೇಕ ಧ್ವಜದ ಕೂಗು ಹೊಸದೇನಲ್ಲ. ಪ್ರಸ್ತುತ ರಾಜ್ಯದಲ್ಲಿರುವ ಧ್ವಜವನ್ನು ಕನ್ನಡ ಪರ ಹೋರಾಟಗಾರ ಮ ರಾಮಮೂರ್ತಿಯವರು ಅಲಂಕರಿಸಿದ್ದರು. ಹಳದಿ ಮತ್ತು ಕೆಂಪು ಬಣ್ಣದ ಧ್ವಜಕ್ಕೆ ನಾವು ಭಾವನಾತ್ಮಕವಾಗಿ ಹೊಂದಿಕೊಂಡಿದ್ದೇವೆ ಎಂದು ಹೇಳಿದ್ದಾರೆ. 
ಕನ್ನಡ ಪಕ್ಷ ಎಂಬ ರಾಜಕೀಯ ಪಕ್ಷಕ್ಕಾಗಿ ರಾಮಮೂರ್ತಿಯವರು ನಾಡಧ್ವಜವನ್ನು ಅಲಂಕರಿಸಿದ್ದರು. ಇಂದಿಗೂ ಈ ಧ್ವಜ ನಾಜಧ್ವಜವಾಗಿಯೇ ಚಾಲ್ತಿಯಲ್ಲಿದೆ. ಭಾರದಲ್ಲಿ ಹಲವು ಸಂಸ್ಕೃತಿ ಹಾಗೂ ಸಂಪ್ರದಾಯಗಳಿವೆ. ರಾಜ್ಯ ಧ್ವಜದಿಂದ ದೇಶದ ಒಂದು ದೇಶ, ಒಂದು ಬಾವುಟವೆಂಬುದಕ್ಕೆ ಯಾವುದೇ ರೀತಿಯೆ ಧಕ್ಕೆಯುಂಟಾಗುವುದಿಲ್ಲ. ದೇಶದ ಧ್ವಜಕ್ಕಿಂತ ನಾಡ ಧ್ವಜವನ್ನು ಬಹು ಎತ್ತರಕ್ಕೆ ಹಾರಿಸುವುದಿಲ್ಲ. ನಾಡ ಧ್ವಜವನ್ನು ಹೊಂದುವುದರಿಂದ ಕರ್ನಾಟಕ ಇತರೆ ರಾಜ್ಯಗಳಿಗೆ ಮಾದರಿಯಾಗಲಿದೆ. 
ಭಾರತದ ಅಸ್ಮಿತೆಯನ್ನು ಸಾರುವುದಕ್ಕಾಗಿ ಅಶೋಕ ಚಕ್ರವುಳ್ಳ ತ್ರಿವರ್ಣ ಧ್ವಜವಿದೆ. ಹಾಗೆಯೇ ಹಲವು ರಾಜ್ಯಗಳಿಗೂ ತನ್ನದೇ ಧ್ವಜವಿದ್ದು, ಕರ್ನಾಟಕದ ಸಂಸ್ಕೃತಿ ಬಿಂಬಿಸುವ ಪ್ರತ್ಯೇಕ ಧ್ವಜದ ಅವಶ್ಯವಿದೆ. ಈಗಿರುವ ಧ್ವಜಕ್ಕೆ ರಾಜ್ಯದ ಕಲೆ, ಸಾಹಿತ್ಯ, ಸಂಸ್ಕೃತಿ ಪರಂಪರೆ ಬಿಂಬಿಸುವ ಚಿತ್ರವನ್ನು ಬಳಸಿಕೊಂಡು ಪ್ರತ್ಯೇಕ ಧ್ವಜ ಮಾಡಿಕೊಳ್ಳಬಹುದು. ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದಬಾರದು ಎಂದು ಸಂವಿಧಾನದಲ್ಲಿಯೂ ಹೇಳಿಲ್ಲ ಎಂದು ಚಂಪಾ ತಿಳಿಸಿದ್ದಾರೆ. 
ಬಳಿಕ ಭಾಷಾ ನೀತಿ ಕುರಿತಂತೆ ಮಾತನಾಡಿರುವ ಅವರು, ಸ್ಥಳೀಯ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕು. ಮೊದಲನೇ ತರಗತಿಯಿಂದಲೇ ಕನ್ನಡ ವಿಷಯವನ್ನು ಉತ್ತೇಜಿಸಬೇಕು. ಇದಕ್ಕೆ ಕಾನೂನು ಅಡಚಣೆಗಳಿವೆ. ಈ ಕುರಿತ ನಿರ್ಧಾರಗಳು ಪೋಷಕರಿಗೆ ಬಿಟ್ಟಿದ್ದು ಎಂದು ಸುಪ್ರೀಂಕೋರ್ಟ್ ಹೇಳುತ್ತಿದೆ. ನ್ಯಾಯಾಲಯದ ಈ ಆದೇಶ ಕೇವಲ ಕನ್ನಡಕ್ಕಷ್ಟೇ ಅಲ್ಲದೆ ಸ್ಥಳೀಯ ಭಾಷೆಗಳಿಗೂ ಭಾರೀ ಹೊಡೆತವನ್ನು ನೀಡಿದೆ. ಹೀಗಾಗಿ ಸ್ಥಳೀಯ ಭಾಷೆಗಳಿಗಾಗಿ ಸಂವಿಧಾನದಲ್ಲಿ ತಿದ್ದುಪಡಿ ತರುವ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದಾರೆ. ಆದರೆ, ಪ್ರತಿಕ್ರಿಯೆಗಳು ಉತ್ತಮವಾಗಿ ಬಂದಿಲ್ಲ. ಈ ಬಗ್ಗೆ ಮತ್ತೆ ಸಿದ್ದರಾಮಯ್ಯ ಅವರು ಎಲ್ಲಾ ರಾಜ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಬೆಂಗಳೂರಿನಲ್ಲಿಯೇ ಸಭೆ ನಡೆಸಿ ಮನವರಿಕೆ ಮಾಡುವಂತೆ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆಂದಿದ್ದಾರೆ. 

ಗ್ರಾಮೀಣ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಕನ್ನಡದ ಅನುಷ್ಠಾನ ಉತ್ತಮವಾಗಿದೆ. ಆದರೆ, ನಗರ ಪ್ರದೇಶಗಳಲ್ಲಿ ಬೆಳವಣಿಗೆ ಉತ್ತಮವಾಗಿಲ್ಲ. ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳೇ ಆಡಳಿತ ಭಾಷೆಯಾಗಿದೆ. ಆದರೆ, ರಾಜ್ಯದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಶೇ.80 ರಷ್ಟು ಪ್ರಮಾಣದಲ್ಲಿ ಕನ್ನಡ ಬಳಕೆಯಾಗುತ್ತಿದ್ದರೆ, ರಾಜಧಾನಿ ಮತ್ತು ಕೇಂದ್ರ ಕಚೇರಿಗಳಲ್ಲಿ ಇಂದಿಗೂ ಇಂಗ್ಲೀಷ್ ನಲ್ಲಿ ವ್ಯವಹರಿಸುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಆಡಳಿತ ಭಾಷೆಯನ್ನಾಗಿ ಮಾಡುವ ನೀತಿ ಜಾರಿ ಮಾಡಬೇಕೆಂದು ಹೇಳಿದ್ದಾರೆ. 

ಇದೇ ವೇಳೆ ವಿವಾದಿತ ಟಿಪ್ಪು ಜಯಂತಿ ಆಚರಣೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಟಿಪ್ಪು ಜಯಂತಿ ಆಚರಣೆ ಕುರಿತಂತೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ, ಕನ್ನಡ ರಾಜ್ಯೋತ್ಸವ ಇವುಗಳನ್ನು ಹೊರತುಪಡಿಸಿ ಇತರೆ ಯಾವುದೇ ಜಯಂತಿಗಳಿಗೂ ರಜೆ ಘೋಷಣೆ ಮಾಡಬಾರದು. ನಾನು ಸಮುದಾಯದ ಜಯಂತಿಗಳನ್ನು ಮಾಡುವ ಮೂಲಕ ಸರ್ಕಾರ ಸಾಕಷ್ಟು ರಜೆಗಳನ್ನು ನೀಡುತ್ತಿದೆ. ಈ ಮೂಲಕ ಸಮಯ ಮತ್ತು ರಾಜ್ಯದ ವರಮಾನವನ್ನು ವ್ಯರ್ಥ ಮಾಡಲಾಗುತ್ತಿದೆ. ಸಮುದಾಯದ ಜಯಂತಿಗಳು ನಡೆದರೆ ಅದಕ್ಕೆ ನಿರ್ಬಂಧಿತ ರಜೆ ನೀಡಲಿ. ಟಿಪ್ಪು ಜಯಂತಿ ಬೇಕೆ, ಬೇಡವೇ ಎಂಬುದರ ಬಗ್ಗೆ ನಾನು ಖಚಿತವಾಗಿ ಏನನ್ನೂ ಹೇಳುವುದಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com