ಸರ್ಕಾರಿ ನೌಕರರ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಕಡ್ಡಾಯ ಶಿಕ್ಷಣ ಮಸೂದೆಗೆ ಒತ್ತಾಯ

ಸರ್ಕಾರಿ ನೌಕರರ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಕಡ್ಡಾಯ ಶಿಕ್ಷಣ ನೀಡಬೇಕು ಎಂಬ ಖಾಸಗಿ ವಿಧೇಯಕ ಮಂಡನೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯ ರಘು ಆಚಾರ್ ಅವರು ಶುಕ್ರವಾರ ಪ್ರತಿಭಠನೆ ನಡೆಸಿದರು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಳಗಾವಿ: ಸರ್ಕಾರಿ ನೌಕರರ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಕಡ್ಡಾಯ ಶಿಕ್ಷಣ ನೀಡಬೇಕು ಎಂಬ ಖಾಸಗಿ ವಿಧೇಯಕ ಮಂಡನೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯ ರಘು ಆಚಾರ್ ಅವರು ಶುಕ್ರವಾರ ಪ್ರತಿಭಠನೆ ನಡೆಸಿದರು. 
ಬೆಳಗಾವಿ ಚಳಿಗಾಲ ಅಧಿವೇಶನದ ಕಡೆಯ ದಿನವಾದ ನಿನ್ನೆ ಕಲಾಪ ಆರಂಭವಾಗುತ್ತಿದ್ದಂತೆಯೇ ಖಾಸಗಿ ವಿಧೇಯಕ ಮಂಡಿಸಲು ಅವಕಾಶ ನೀಡುವಂತೆ ರಘು ಆಚಾರ್ ಅವರು ಮನವಿ ಮಾಡಿದರು. ಇದಕ್ಕೆ ಸಂಭಾಪತಿಗಳು ನಿರಾಕರಿಸಿದ್ದರಿಂದ ಸಭಾಪತಿಗಳ ಪೀಠದ ಎದುರು ಧಾವಿಸಿ ಪ್ರತಿಭಟನೆ ಆರಂಭಿಸಿದ್ದರು. 
ಬಳಿಕ ಪ್ರತಿಕ್ರಿಯೆ ನೀಡಿದ ಸಭಾಪತಿ ಶಂಕರಮೂರ್ತಿಯವರು, ಸದನದಲ್ಲಿ ಖಾಸಗಿ ವಿಧೇಯಕವನ್ನು ಮಂಡಿಸಲು ಕೆಲ ನಿಯಮಗಳಿದ್ದು, ಆ ನಿಯಮಗಳಿಗೆ ಅನುಸಾರ ನಡೆಯಬೇಕಿದೆ ಎಂದು ಹೇಳಿದರು. 
ರಘು ಆಚಾರ್ ಅವರು ನೀಡಿರುವ ವಿಧೇಯಕದ ಪ್ರತಿಯನ್ನು ಈಗಾಗಲೇ ಸಂಬಂಧಿಸಿದ ಕಾನೂನು ಮತ್ತು ಸಂಸದೀಯ ವಿಭಾಗಕ್ಕೆ ಕಳುಹಿಸಲಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಇಲಾಖೆಗೆ ಕಳುಹಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ ಈ ವರೆಯೂ ಯಾವುದೇ ರೀತಿಯ ಪ್ರತಿಕ್ರಿಯೆಗಳು ಬಂದಿಲ್ಲ. ಮುಂದಿನ ಧ ಅಧಿವೇಶನದಲ್ಲಿ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು. 
ಇದಕ್ಕೆ ಒಪ್ಪದ ರಘು ಆಚಾರ್ ಅವರು ತಮ್ಮ ಧರಣಿಯನ್ನು ಮುಂದವರೆಸಿದರು, ಬಳಿಕ ರಘು ಆಚಾರ್ ಅವರಿಗೆ ಬಿಜೆಪಿ ಸದಸ್ಯರು ಬೆಂಬಲ ನೀಡಿದರು. ವಿಧೇಯಕ್ಕೆ ಸರ್ಕಾರವೇಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು, ಬಳಿಕ ರಘು ಆಚಾರ್ ಅವರಿಗೆ ಪ್ರತಿಕ್ರಿಯೆ ನೀಡಿದ ಸಚಿವ ತನ್ವೀರ್ ಸೇಠ್ ಅವರು, ಕೆಲ ಸಮಿತಿಗಳು ಕೂಡ ಸರ್ಕಾರಕ್ಕೆ ಇದೇ ರೀತಿಯ ಶಿಫಾರಸುಗಳನ್ನು ಮಾಡಿದೆ ಎಂದು ಹೇಳಿದರು. 
ರಘು ಆಚಾರ್ ಅವರ ವಿಚಾರ ಬಹಳ ಮಹತ್ವದ್ದಾಗಿದೆ. ಈ ಕುರಿತು ಅನೇಕ ವರದಿಗಳು ಸರ್ಕಾರಕ್ಕೆ ಬಂದಿವೆ. ಸರ್ಕಾರ ವಿಧೇಕಕ್ಕೆ ಬೆಂಬಲ ನೀಡಿದೆ. ಈ ವಿಧೇಯಕದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಯಬೇಕಿದೆ. ಪ್ರಸ್ತುತ ರಘು ಅವರು ಹಠ ಮಾಡಿತ್ತಿರುವುದು ಸರಿಯಲ್ಲ ಎಂದು ತಿಳಿಸಿದರು. 
ವಿಧೇಯಕ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಈ ರೀತಿಯ ವಿಧೇಯಕ ಜಾರಿಯಾಗಬೇಕೆಂದು ಕಾದು ಕುಳಿತಿದ್ದೇವೆ. ಐಎಎಸ್, ಐಪಿಎಸ್ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಿದರೆ, ಸರ್ಕಾರಿ ಶಾಲೆಗಳ ಪರಿಸ್ಥಿತಿಗಳೂ ಕೂಡ ಸುಧಾರಿಸುತ್ತವೆ ಎಂದು ಹೇಳಿದ್ದಾರೆ. 
ಸರ್ಕಾರ ಒಂದು ವೇಳೆ ಕಾಯ್ದೆಯನ್ನು ಜಾರಿಗೆ ತಂದಿದ್ದೇ ಆದರೆ, ಪ್ರಸ್ತುತ ಶುಲ್ಕದ ಹೆಸರಿನಲ್ಲಿ ಪೋಷಕರ ಬಳಿ ಖಾಸಗಿ ಶಾಲೆಗಳು ಕೊಳ್ಳೆಹೊಡೆಯುತ್ತಿರುವುದು ನಿಯಂತ್ರಣಕ್ಕೆ ಬರಲಿದೆ. ಒಳ್ಳೆಯದು ಅಷ್ಟು ಸುಲಭವಾಗಿ ಜಾರಿಯಾಗುವುದಿಲ್ಲ ಎಂದು ಅನಿಲ್ ಧರ್ಮಪ್ಪ ಅವರು ತಿಳಿಸಿದ್ದಾರೆ. 
ಸರ್ಕಾರದ ಇಂತಹ ವಿಧೇಯಕವನ್ನು ಜಾರಿಗೆ ತಂದಿದ್ದೇ ಆದರೆ, ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳು ವರ್ಚಸ್ಸು ಬದಲಾಗಲಿದೆ. ಮುಂದಿನ ಫೆಬ್ರವರಿ ತಿಂಗಳಲ್ಲಿ ಈ ವಿಧೇಯಕ ಮಂಡನೆಯಾಗಲಿದೆ ಎಂದು ಕೇಳಿದ್ದೇನೆ. ಆದರೆ, ಪ್ರತೀ ಅಧಿವೇಶನವೂ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಮತಗಳನ್ನು ಗುರಿಮಾಡಿಕೊಂಡೇ ನಡೆಸಲಾಗುತ್ತಿದೆ. ರಘು ಆಚಾರ್ ಅವರ ನೇತೃತ್ವವನ್ನು ಶ್ಲಾಘಿಸಬೇಕು ಎಂದು ಸರ್ಕಾರಿ ಶಾಲೆಯ ಮುಖ್ಯಸ್ಥ ಮಲ್ಲೇಶಪ್ಪ ಎಂಬುವವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com