ಇನ್ನು ಬೆಂಗಳೂರಲ್ಲಿ ವಿಳಾಸ ಹುಡುಕುವುದು ಸುಲಭ; ವಿಶಿಷ್ಟ ಡಿಜಿಟಲ್ ಗುರುತು ಸಂಖ್ಯೆ ಜಾರಿ

ನಗರದ ಯಾವ ಮೂಲೆಯಲ್ಲಿಯಾದರೂ ಇನ್ನು ಮುಂದೆ ವಿಳಾಸ ಹುಡುಕುವುದು ಸುಲಭವೆನಿಸಲಿದೆ. ಇದು ದೇಶದಲ್ಲಿಯೇ ವಿನೂತನ ಕ್ರಮವಾಗಿದ್ದು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ನಗರದ ಯಾವ ಮೂಲೆಯಲ್ಲಿಯಾದರೂ ಇನ್ನು ಮುಂದೆ  ವಿಳಾಸ ಹುಡುಕುವುದು ಸುಲಭವೆನಿಸಲಿದೆ. ಇದು ದೇಶದಲ್ಲಿಯೇ ವಿನೂತನ ಕ್ರಮವಾಗಿದ್ದು ಇನ್ನೆರಡು ವಾರಗಳಲ್ಲಿ ಬೆಂಗಳೂರಿನ  ಕಟ್ಟಡಗಳು ಮತ್ತು ಮನೆಗಳಿಗೆ ವಿಶಿಷ್ಟ ಡಿಜಿಟಲ್ ಗುರುತು ಸಂಖ್ಯೆಯನ್ನು(ಡಿಐಎನ್) ನೀಡಲಾಗುತ್ತದೆ. ಗೂಗಲ್ ಮ್ಯಾಪ್ ನ್ನು ಬಳಸಿಕೊಂಡು ವಿಶಿಷ್ಟ ಗುರುತು ಸಂಖ್ಯೆ ಸ್ಥಳ  ಮತ್ತು ವಿಳಾಸವನ್ನು ಹುಡುಕಲು ಸಹಾಯ ಮಾಡುತ್ತದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 93,000 ರಸ್ತೆಗಳಿದ್ದು ಪ್ರತಿ ರಸ್ತೆಗಳಿಗೆ ವಿಶಿಷ್ಟ ಡಿಜಿಟಲ್ ಸಂಖ್ಯೆಯನ್ನು ನೀಡಲಾಗುತ್ತದೆ. 2013ರಲ್ಲಿ ಬಿಬಿಎಂಪಿ ಭೌಗೋಳಿಕ ಮಾಹಿತಿ ವ್ಯವಸ್ಥೆಯನ್ನು ಆಸ್ತಿ ಗುರುತಿಸುವಿಕೆ (PID) ಸಂಖ್ಯೆ ಯೋಜನೆಯಡಿ ಆರಂಭಿಸಿತ್ತು. ಅದರಲ್ಲಿ ವಾರ್ಡ್ ಸಂಖ್ಯೆ, ರಸ್ತೆ ಸಂಖ್ಯೆ ಮತ್ತು ಆಸ್ತಿ ಸಂಖ್ಯೆಗಳನ್ನು ಒಟ್ಟುಗೂಡಿಸಲಾಗುತ್ತದೆ. ಯೋಜನೆಯ ಭಾಗವಾಗಿ ಬೆಂಗಳೂರು ಮಹಾನಗರದ ಪ್ರತಿ ರಸ್ತೆಗಳಿಗೆ ವಿಶಿಷ್ಟ ಸಂಖ್ಯೆಯನ್ನು ನೀಡಲಾಗುತ್ತದೆ.

ಈ ಅಂಕಿಅಂಶವನ್ನು ಬಳಸಿಕೊಂಡು ಬಿಬಿಎಂಪಿ ಕಿಯೊನಿಕ್ಸ್ ಜೊತೆಗೂಡಿ ಮೊಬೈಲ್ ಅಪ್ಲಿಕೇಶನ್ ವೊಂದನ್ನು ಅಭಿವೃದ್ಧಿಪಡಿಸಿದೆ. ಜನರು ಈ ಆಪ್ ನ್ನು ತಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡರೆ ವಿಶಿಷ್ಟ ಡಿಐಎನ್ ನ್ನು ಬಳಸಿಕೊಂಡು  ಮನೆ,ಸ್ಥಳದ ವಿಳಾಸವನ್ನು ಪತ್ತೆಹಚ್ಚಬಹುದು. ಇಂಗ್ಲಿಷ್ ವರ್ಣಮಾಲೆ ಮತ್ತು  ಸಂಖ್ಯಾಶಾಸ್ತ್ರದ ಸಂಯೋಜನೆ ಡಿಐಎನ್ ಆಗಿದ್ದು, ಅದರಲ್ಲಿ 9 ಅಂಕೆಗಳಿರುತ್ತವೆ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಈ ಹಿಂದಿನ ವಿಳಾಸದ ಮಾದರಿಯನ್ನು 9 ಅಂಕೆಗಳು ಸಂಪೂರ್ಣ ಬದಲಿಸಲಿವೆ. ಆಪ್ ಆಧಾರಿತ ಟ್ಯಾಕ್ಸಿಗಳು, ಕೊರಿಯರ್ ಸೇವೆ, ಆಹಾರ ಪೂರೈಕೆ ಸಂಸ್ಥೆಗಳು ಮತ್ತು ಇನ್ನು ಕೆಲವು ಸೇವೆಗಳಿಗೆ ಇದು ಅನುಕೂಲವಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಅಗ್ನಿಶಾಮಕ ಮತ್ತು ಆಂಬ್ಯುಲೆನ್ಸ್ ನಂತಹ ತುರ್ತು ಸೇವೆಗಳಿಗೆ ಇದು ಹೆಚ್ಚು ಸಹಾಯವಾಗಲಿದೆ.
ಅಪಾರ್ಟ್ ಮೆಂಟ್ ಕಟ್ಟಡಗಳು ಅಥವಾ ಬಹುಮಹಡಿ ಕಟ್ಟಡಗಳ ಪ್ರತಿ ಮಹಡಿ ಅಥವಾ ಮನೆಗಳಿಗೆ ಉಪ ಸಂಖ್ಯೆಗಳನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

ಡಿಐಎನ್ ಗಳನ್ನು ವಿಸ್ತರಿಸಲೂ ಬಹುದು. ಉದಾಹರಣೆಗೆ ಕಟ್ಟಡವೊಂದರಲ್ಲಿ ಮೂರು ಮಹಡಿಯಿದೆ ಎಂದಿಟ್ಟುಕೊಳ್ಳೋಣ, ಪ್ರತಿ ಮಹಡಿಗೆ ಕೂಡ ವಿಶಿಷ್ಟ ಸಂಖ್ಯೆಯಿರುತ್ತದೆ. ಸ್ವಲ್ಪ ಸಮಯದ ನಂತರ ಮತ್ತೊಂದು ಮಹಡಿ ನಿರ್ಮಿಸಿದರೆ ಮತ್ತೊಂದು ಸಂಖ್ಯೆಯನ್ನು ಸೇರಿಸಲಾಗುತ್ತದೆ.

ಮೊಬೈಲ್ ಅಪ್ಲಿಕೇಶನ್ ಇನ್ನು 15  ದಿನಗಳಲ್ಲಿ ಸಿದ್ದವಾಗುತ್ತದೆ. ಇದನ್ನು ಬಳಸಿ ಪ್ರತಿ ಮನೆಗೆ ವಿಶಿಷ್ಟ ಡಿಜಿಟಲ್ ಗುರುತು ಸಂಖ್ಯೆ ನೀಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com