'ಬಿಟ್ಟಿ ಸಿಕ್ರೆ'....ಪೆಟ್ರೋಲ್, ಡೀಸೆಲ್ ಆಯ್ತು.. ಈಗ ಮೊಟ್ಟೆಗೂ ಮುಗಿ ಬಿದ್ದ ಜನ!

ವಾಹನ ಅಪಘಾತದಿಂದ ರಸ್ತೆಗೆ ಬಿದ್ದಿದ್ದ ಮೊಟ್ಟೆಗಳಿಗಾಗಿ ಸ್ಥಳೀಯ ಜನ ಮುಗಿಬಿದ್ದ ಘಟನೆ ಶನಿವಾರ ತುಮಕೂರಿನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ತುಮಕೂರು: ವಾಹನ ಅಪಘಾತದಿಂದ ರಸ್ತೆಗೆ ಬಿದ್ದಿದ್ದ ಮೊಟ್ಟೆಗಳಿಗಾಗಿ ಸ್ಥಳೀಯ ಜನ ಮುಗಿಬಿದ್ದ ಘಟನೆ ಶನಿವಾರ ತುಮಕೂರಿನಲ್ಲಿ ನಡೆದಿದೆ.
ಈ ಹಿಂದೆ ಪೆಟ್ರೋಲ್, ಡೀಸೆಲ್ ವಾಹನಗಳು ಅಪಘಾತಕ್ಕೀಡಾಗಿದ್ದ ಸಂದರ್ಭದಲ್ಲಿ ಸೋರಿಕೆಯಾಗುತ್ತಿದ್ದ ಇಂಧನಕ್ಕಾಗಿ ಜನ ಮುಗಿಬಿದ್ದ ಸುದ್ದಿಯನ್ನು ನಾವು ಕೇಳಿದ್ದೇವೆ. ಇದೀಗ ಅಂತಹುದೇ ಘಟನೆ ಕರ್ನಾಟಕದ ತುಮಕೂರಿನಲ್ಲಿ  ನಡೆದಿದ್ದು, ಇಲ್ಲಿ ಇಂಧನವಲ್ಲ ಕೋಳಿ ಮೊಟ್ಟೆಗಾಗಿ ಜನ ಮುಗಿಬಿದ್ದಿದ್ದಾರೆ.
ಹೌಜು..ತುಮಕೂರಿನ ಕಳ್ಳಬೆಳ್ಳ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಘಟನೆ ನಡೆದಿದ್ದು, ರಸ್ತೆ ಬದಿ ನಿಂತಿದ್ದ ಮೊಟ್ಟೆಗಳ ತುಂಬಿದ್ದ ಟೆಂಪೋಗೆ ವೇಗವಾಗಿ ಬಂದ ಟ್ರಕ್ ಢಿಕ್ಕಿ ಹೊಡೆದಿದೆ. ಢಿಕ್ಕಿ ರಭಸಕ್ಕೆ ಮೊಟ್ಟೆ ಚುಂಬಿದ ಟೆಂಪೋ  ಪಲ್ಟಿಯಾಗಿದ್ದು, ಅದರೊಳಗಿದ್ದ ಮೊಟ್ಟೆಗಳೆಲ್ಲವೂ ರಸ್ತೆಗೆ ಬಿದ್ದಿದೆ. ಈ ವಿಚಾರ ಸ್ಥಳೀಯರಿಗೆ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಹತ್ತಾರು ಸಂಖ್ಯೆಯಲ್ಲಿ ಧಾವಿಸಿದ ಜನ ನಾಮುಂದು-ತಾಮುಂದು ಎಂಬಂತೆ ರಸ್ತೆಯಲ್ಲಿ ಬಿದ್ದಿದ್ದ ಮೊಟ್ಟೆಗಳನ್ನು  ತುಂಬಿಕೊಂಡು ಹೋಗಿದ್ದಾರೆ.
ಕೈಗೆ ಸಿಕ್ಕ ಕವರ್, ಬ್ಯಾಗ್ ಗಳು ಸೇರಿದಂತೆ ವಿವಿಧ ರೀತಿಯ ವಸ್ತುಗಳನ್ನು ಮೊಟ್ಟೆಗಳನ್ನು ತುಂಬಿಕೊಂಡು ಹೋಗಿದ್ದು, ಏನೂ ಸಿಗದ ಮಂದಿ ಅಲ್ಲೇ ಬಿದ್ದಿದ್ದ ಮೊಟ್ಟೆ ಟ್ರೇಗಳಲ್ಲೇ ಮೊಟ್ಟೆಗಳನ್ನು ಸಂಗ್ರಹಿಸಿ ಹೊತ್ತು ಪರಾರಿಯಾಗಿದ್ದಾರೆ.  ಇನ್ನು ಈ ವಿಚಾರ ಸ್ಥಳೀಯ ಪೊಲೀಸರಿಗೆ ತಿಳಿದಿದ್ದು, ಐದು ಮಂದಿ ಪೊಲೀಸರು ಸ್ಥಳಕ್ಕಾಗಮಿಸಿ ಜನರನ್ನು ಚದುರಿಸುವ ಕೆಲಸಕ್ಕೆ ಮುಂದಾದರು. ಆದರೆ ಪೊಲೀಸರ ಮಾತಿಗೂ ಕ್ಯಾರೇ ಎನ್ನದ ಮಂದಿ ತಮ್ಮಷ್ಟಕ್ಕೇ ತಾವು  ಮೊಟ್ಟೆಗಳನ್ನು ತುಂಬಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದರು. ರಸ್ತೆಗೆ ಬಿದ್ದಿದ್ದ ಮೊಟ್ಟೆಗಳ ಪೈಕಿ ಒಡೆಯದೇ ಚೆನ್ನಾಗಿರುವ ಮೊಟ್ಟೆಗಳನ್ನು ಸಂಗ್ರಹಿಸಿಕೊಂಡು ಮನೆಗೆ ತೆಗೆದುಕೊಂಡು ಹೋದರು.
ಇನ್ನು ಟೆಂಪೋ ಚಾಲಕ ನೀಡಿದ ಮಾಹಿತಿಯಂತೆ ವಾಹನದಲ್ಲಿ ಸುಮಾರು 6 ಲಕ್ಷ ರು. ಮೌಲ್ಯದ ಮೊಟ್ಟೆಗಳು ಇದ್ದವಂತೆ.  ಮೊಟ್ಟೆಗಳಿಗಾಗಿ ಜನ ಮುಗಿಬಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಅಚ್ಚರಿ ವಿಚಾರವೆಂದರೆ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಸವಾರರೂ ಕೂಡ ರಸ್ತೆಗಿಳಿದು ಮೊಟ್ಟೆಗಳನ್ನು ಸಂಗ್ರಹಿಸಿ ಹೊತ್ತೊಯ್ದರಂತೆ.
ಈ ಹಿಂದೆ ಇಂತಹುದೇ ಪ್ರಕರಣ ಆಂಧ್ರ ಪ್ರದೇಶದ ಅದಿಲಾ ಬಾದ್ ನಲ್ಲಿ ನಡೆದಿತ್ತು. ತುಪ್ಪವನ್ನು ತುಂಬಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಸಂದರ್ಭದಲ್ಲಿ ಅಲ್ಲಿನ ಮಂದಿ ಅಡುಗೆ ಮನೆ ವಸ್ತುಗಳನ್ನು ತಂದು ತುಪ್ಪವನ್ನು  ತುಂಬಿ ಕೊಂಡು ಹೋಗಿದ್ದರು. ಇನ್ನು ಕಳೆದ ವರ್ಷ ಪಾಕಿಸ್ತಾನದಲ್ಲಿ ಅಪಘಾತಕ್ಕೀಡಾದ ಪೆಟ್ರೋಲ್ ಟ್ಯಾಂಕರ್ ನಿಂದ ಸೋರುತ್ತಿದ್ದ ಪೆಟ್ರೋಲ್ ಸಂಗ್ರಹಿಸಲು ಹೋಗಿ 200ಕ್ಕೂ ಅಧಿಕ ಮಂದಿ ಧಾರುಣವಾಗಿ ಸಾವನ್ನಪ್ಪಿದ್ದರು.  ಇಷ್ಟೆಲ್ಲಾ ಘಟನೆಗಳು ನಡೆದಿದ್ದರೂ ಜನ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com