ದೇಶದ ಆರ್ಥಿಕ ವ್ಯವಸ್ಥೆಯನ್ನೇ ಅಲುಗಾಡಿಸಿದ್ದ ತೆಲಗಿ ಬಂಧನಕ್ಕೆ ವರ್ಷಗಳ ಕಾಲ ಬಲೆ ಬೀಸಿದ್ದ ಪೊಲೀಸರು!

ನಕಲಿ ಛಾಪಾ ಕಾಗದ ಹಗರಣದ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯನ್ನೇ ಅಲುಗಾಡಿಸಿದ್ದ ಅಬ್ದುಲ್ ಕರೀಂ ಲಾಲಾ ತೆಲಗಿ ಕೊನೆಗೆ ಸುಮಾರು 16 ವರ್ಷಗಳ ಕಾಲ ಅನಾರೋಗ್ಯದಿಂದ ಬಳಲುತ್ತಲೇ ಜೈಲುವಾಸ ಅನುಭವಿಸಿ ಸಾವನ್ನಪ್ಪಿದ್ದಾನೆ...
ಅಬ್ದುಲ್ ಕರೀಂ ಲಾಲಾ ತೆಲಗಿ
ಅಬ್ದುಲ್ ಕರೀಂ ಲಾಲಾ ತೆಲಗಿ
Updated on

ಬೆಂಗಳೂರು: ನಕಲಿ ಛಾಪಾ ಕಾಗದ ಹಗರಣದ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯನ್ನೇ ಅಲುಗಾಡಿಸಿದ್ದ ಅಬ್ದುಲ್ ಕರೀಂ ಲಾಲಾ ತೆಲಗಿ ಕೊನೆಗೆ ಸುಮಾರು 16 ವರ್ಷಗಳ ಕಾಲ ಅನಾರೋಗ್ಯದಿಂದ ಬಳಲುತ್ತಲೇ ಜೈಲುವಾಸ ಅನುಭವಿಸಿ ಸಾವನ್ನಪ್ಪಿದ್ದಾನೆ. 

1961ರಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ರೈಲ್ವೆ ಇಲಾಖೆ 'ಡಿ' ದರ್ಜೆ ನೌಕರ ಲಾಡ್ ಸಾಬ್ ಹಾಗೂ ಶರೀಫಾಬಿ ಬಾಯಿ ದಂಪತಿ ಪುತ್ರನಾಗಿ ಕರೀಂ ಲಾಲ್ ತೆಲಗಿ ಜನಸಿದ್ದ. ತೆಲಗಿಗೆ ಮೂವರು ಸೋದರರಿದ್ದಾರೆ. ಈ ಕುಟುಂಬಕ್ಕೆ ಲಾಡಸಾಬ್ ದುಡಿಮೆಯೇ ಆದಾಯ ಮೂಲವಾಗಿತ್ತು. ಬಡತನ ಹಿನ್ನಲೆಯಲ್ಲಿ ವಿದ್ಯಾರ್ಥಿದೆಸೆಯಲ್ಲಿ ತೆಲಗಿ, ಖಾನಾಪುರದ ರೈಲ್ವೆ ನಿಲ್ದಾಣಗಳಲ್ಲಿ ಹಣ್ಣು ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದ. 

ಇದೇ ಅವಧಿಯಲ್ಲಿ ಅಲ್ಲಿನ ಸರ್ವೋದಯ ಕಾಲೇಜಿನಲ್ಲಿ ಬಿಕಾಂ ಪದವಿ ಮುಗಿಸಿದ್ದ ತೆಲಗಿ, ಕೆಲ ವರ್ಷಗಳು ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ. ನಂತರ 1990ರ ಸುಮಾರಿಗೆ ಮುಂಬೈನಲ್ಲಿ ಟ್ರಾವೆಲ್ಸ್ ಏಜೆನ್ಸಿ ಸ್ಥಾಪಿಸಿದ್ದ ತೆಲಗಿ, ಆ ಕಾಲಕ್ಕೆ ಗಲ್ಫ್ ದೇಶಗಳಿಗೆ ಉದ್ಯೋಗ ಅರಸಿ ಹೊರಟ ಯುವಕರಿಗೆ ನೌಕರಿ ಆಸೆ ತೋರಿಸಿ ಅವರಿಂದ ಹಣ ಪಡೆದು ವಂಚಿಸಿದ್ದ ಆರೋಪಗಳು ಕೇಳಿ ಬಂದಿತ್ತು. ಹೀಗೆ 1992ರಲ್ಲಿ ವಂಚನೆ ಪ್ರಕರಣ ಸಂಬಂಧ ತೆಲಗಿ ಬಂಧನವಾಗಿತ್ತು. ಮುಂಬೈ ಜೈಲು ಅವನಿಗೆ ದೇಶದ ಆರ್ಥಿಕ ವ್ಯವಸ್ಥೆಗೆ ಸವಾಲೆಸೆದ ಸ್ಟ್ಯಾಂಪ್ ದಂಧೆಗೆ ಮೂಲವಾಯಿತು. ಅಂದು ಜಾಮೀನು ಪಡೆದು ಹೊರಬಂದ ತೆಲಗಿಗೆ ವಿವಾಹವಾಯಿತು. ಆತನಿಗೆ ಈಗ ಮಗಳಿದ್ದಾಳೆ. 

ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ತೆಲಗಿಗೆ ಅಲ್ಲಿ ನಕಲಿ ಸ್ಟ್ಯಾಂಪ್ ದಂಧೆಕೋರ ರಾಮರತನ್ ಸೋನಿ ಪರಿಚಯವಾಗಿತ್ತು. ಒಂದು ಅರ್ಥದಲ್ಲಿ ತೆಲಗಿಗೆ ಈ ರತನ್ ಗುರು ಎಂದೇ ಹೇಳಬಹುದು. 

2000 ಇಸವಿಯಲ್ಲಿ ಸ್ಟ್ಯಾಂಪ್ ಪೇಪರ್ ಮಾರಾಟ ಸಂಬಂಧ ಅಂದು ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ಆಗಿದ್ದ ಜಿ.ಎ. ಬಾವಾ ಅವರಿಗೆ ಈ ಕುರಿತ ಮಾಹಿತಿ ಸಿಕ್ಕಿತ್ತು. ಈ ಸುಳಿವು ಪಡೆದ ಪೊಲೀಸರು, ಸುಬೇದಾರ್ ಛತ್ರ ರಸ್ತೆಯಲ್ಲಿದ್ದ ತೆಲಗಿ ಮಾಲೀಕತ್ವದ ಸಿಟಿಜನ್ ಎಂಟರ್ ಪ್ರೈಸಸ್ ಕಚೇರಿ ಮೇಲೆ ದಾಳಿ ನಡೆಸಿದ್ದರು. ಅಲ್ಲಿ ಅಪಾರ ಪ್ರಮಾಣದ ನಕಲಿ ಛಾಪಾ ಕಾಗದಗಳು, ಸ್ಟ್ಯಾಂಪ್'ಗಳು ಹಾಗೂ ಸರ್ಕಾರಿ ಮುದ್ರೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. 

ತುಮಕೂರಿನ ನಜೀರ್, ಬದ್ರುವುದ್ದೀನ್, ವಿಠಲ ಸೇರಿದಂತೆ 19 ಮಂದಿ ಬಂಧನವಾಯಿತು. ಈಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ತೆಲಗಿ ಸೇರಿದಂತೆ ಇತರರ ಮೇಲೆ ಎಫ್ಐಆರ್ ದಾಖಲಾಗಿತ್ತು. ಇದುವೇ ರಾಜ್ಯದಲ್ಲಿ ತೆಲಗಿ ಮೇಲೆ ದಾಖಲಾದ ಪ್ರಥಮ ಪ್ರಕರಣವಾಗಿತ್ತು. ಇದಾದ ವರ್ಷದ ಬಳಿಕ 2001ರಲ್ಲಿ ಅಜ್ಮೀರ್ ನಲ್ಲಿ ತೆಲಗಿ ಬಂಧನವಾಯಿತು. ಬಳಿಕ ಸ್ಟ್ಯಾಂಪಿಟ್ ಅಧಿಕಾರಿಗಳು, 2002ರಲ್ಲಿ ಕೋಲ್ಕತ್ತಾದ ಮೊಹಮ್ಮದ್ ಸೈಯದ್, ತೆಲಗಿ ಗುರು ರಾಮರತನ್ ಸೋನಿ, ಅನೀಶ್ ಕುಮಾರ್ ಚಕ್ರವರ್ತಿಯನ್ನು ಬಂಧಿಸಿದ್ದರು. 2004ರಲ್ಲಿ ಸಚಿವ ಬೇಗ್ ಸೋದರ ರೇಹಾನ್ ಬೇಗ್, ಪೊಲೀಸ್ ಅಧಿಕಾರಿಗಳಾದ ಸಂಗ್ರಾಮ್ ಸಿಂಗ್ ಮತ್ತಿತರರನ್ನು ಬಂಧನಕ್ಕೊಳಪಡಿಸಿದ್ದರು. ಇತ್ತ ಮಹಾರಾಷ್ಟ್ರದಲ್ಲಿಯೂ ಸಹ ರಾಜಕಾರಣಿಗಳು ಹಾಗೂ ಪೊಲೀಸರು ಸಿಕ್ಕಿ ಬಿದ್ದಿದ್ದರು. 

ನಕಲಿ ಛಾಪಾ ಕಾಗದ ಹಗರಣ ಬೆಳಕಿಗೆ ಬಂದ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತರಾಗಿ ಹೆಚ್.ಟಿ, ಸಾಂಗ್ಲಿಯಾನಾ ಅರು ಅಧಿಕಾರ ಸ್ವೀಕರಿಸಿದ್ದರು. ನಕಲಿ ಛಾಪಾ ಕಾಗದ ಹಗರಣ ಬಗ್ಗೆ ನಾನು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಲೇ ಬಂದಿದ್ದೇನೆ. ಆದರೆ, ಈ ಬಗ್ಗೆ ಯಾರೊಬ್ಬರೂ ಆಸಕ್ತಿ ತೋರುತ್ತಿಲ್ಲ ಎಂದು ಮಾಹಿತಿಗಾರರೊಬ್ಬರು ನನಗೆ ತಿಳಿಸಿದ್ದರು. ಬಳಿಕ ನಾನು ಜಿ.ಎ. ಬಾವಾ, ನಾನು ನಂಬಿಕೆ ಇಟ್ಟಿದ್ದ ಇನ್ಸ್ ಪೆಕ್ಟರ್ ಗಳಿಗೆ ಸಮನ್ಸ್ ಜಾರಿ ಮಾಡಿದ್ದೆ. ಬಳಿಕ ಪ್ರಕರಣ ಸಂಬಧ ತನಿಖೆಗಾಗಿ ರಾಜಸ್ತಾನಕ್ಕೆ ಒಂದು ತಂಡವನ್ನು ಕಳುಹಿಸಿದ್ದೆ. 

ಪ್ರಬಲ ರಾಜಕಾರಣಿಗಳ ಬೆಂಬಲ, ಸಹಾಯಗಳಿಗಾಗಿ ತೆಲಗಿ ಬಹುಕೋಟಿ ಹಣವನ್ನು ಖರ್ಚು ಮಾಡುತ್ತಿದ್ದು, ಹಗರಣದಲ್ಲ ಪೊಲೀಸ್ ಅಧಿಕಾರಿಗಳೂ ಕೂಡ ಭಾಗಿಯಾಗಿದ್ದಾರೆಂದು ಮಾಹಿತಿಗಾರ ಮಾಹಿತಿ ನೀಡಿದ್ದ ಎಂದು ಸಾಂಗ್ಲಿಯಾನ ಅವರು ಹೇಳಿದ್ದಾರೆ. 

ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಿ.ಎ. ಬಾವಾ ಅವರು, 2001ರಲ್ಲಿ ಪ್ರಕರಣ ದಾಖಲಾದ ಬಳಿಕ ರೂ.10 ಕೋಟಿಯಷ್ಟು ನಕಲಿ ಸ್ಟ್ಯಾಂಪ್ ಗಳು ಹಾಗೂ ರೂ.37 ಲಕ್ಷವನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಅಲ್ಲದೆ, 11 ಮಂದಿಯನ್ನು ಬಂಧನಕ್ಕೊಳಪಡಿಸಿ, 18 ಮಂದಿ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಜಾರ್ಜ್ ಶೀಟ್ ನಲ್ಲಿ ತೆಲಗಿ ನಂ.1 ಆರೋಪಿಯಾಗಿದ್ದ. ಬಳಿಕ ತೆಲಗಿಗಾಗಿ ಹುಡುಕಾಟ ಆರಂಭಿಸಿದ್ದೆವು. ಇದಕ್ಕೂ ಹಿಂದೆ ನಗರ ಪೊಲೀಸ್ ಆಯುಕ್ತರಾಗಿದ್ದ ಮಡಿಯಾಳ್ ಅವರೂ ಕೂಡ ತೆಲಗಿ ಬಗ್ಗೆ ಮಾಹಿತಿ ಕಲೆ ಹಾಕಿ ಆತನ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದರು. 
2002ರಲ್ಲಿ ಸಾಂಗ್ಲಿಯಾನಾ ಅವರು ತಮಗೆ ಮಾಹಿತಿ ನೀಡುತ್ತಿದ್ದ ಮಾಹಿತಿಗಾರನ ಮೊಬೈಲ್ ಸಂಖ್ಯೆಯನ್ನು ನೀಡಿದ್ದರು. ಆತನನ್ನು ಸಂಪರ್ಕಿಸಲು ನನಗೆ 2-3 ತಿಂಗಳು ಬೇಕಾಯಿತು. ಮಾಹಿತಿಯನ್ನು ನೀಡಲು ಆತ ಹಿಂಜರಿಯುತ್ತಿದ್ದ. ಅದೇ ವರ್ಷ ಆಗಸ್ಟ್ ತಿಂಗಳಿನಲ್ಲಿ ಆ ಮಾಹಿತಿಗಾರ ನನಗೆ ಕರೆ ಮಾಡಿ, ಮದುವೆಯೊಂದಕ್ಕೆ ಹೋಗುವ ಸಲುವಾಗಿ ತೆಲಗಿ ಅಜ್ಮೆರ್ ಗೆ ಭೇಟಿ ನೀಡುತ್ತಿದ್ದು, ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾನೆಂದು ತಿಳಿಸಿದ್ದ. ರೈಲ್ವೆ ಪೊಲೀಸರ ಸಹಾಯದೊಂದಿಗೆ ನಾವು ಸ್ಥಳಕ್ಕೆ ಹೋದಿ ಪರಿಶೀಲನೆ ನಡೆಸಿದ್ದೆವು. ಪಠಾಣರ ವೇಷಭೂಷಣದೊಂದಿಗೆ ನಾವೂ ಮದುವೆ ಸಮಾರಂಭಕ್ಕೆ ಹೋಗಿದ್ದೆವು. ಆದರೆ, ಅಲ್ಲಿ ತೆಲಗಿ ಕಣ್ಣಿಗೆ ಬಿದ್ದಿರಲಿಲ್ಲ. ಸಾಕಷ್ಟು ಹುಡುಕಾಟ ನಡೆಸಿದ ಬಳಿಕ ಹಿಂತಿರುಗುವುದಕ್ಕೆ ನಿರ್ಧರಿಸಿದ್ದೆವು. 

ಬಳಿಕ ಅಜ್ಮೆರ್ ಬಳಿಯಿರವ ದರ್ಗಾಗೆ ಭೇಟಿ ನೀಡಿದ್ದೆವು. ಈ ವೇಳೆ ವ್ಯಕ್ತಿಯೊಬ್ಬ ದರ್ಗಾದ ಬಾಗಿಲಿಗೆ ಮುತ್ತು ಕೊಡುತ್ತಿದ್ದ. ವ್ಯಕ್ತಿಯ ಮುಖವನ್ನು ಗಮನಿಸಿದಾಗ ಅದು ತೆಲಗಿ ಮುಖವನ್ನು ಹೋಲುತ್ತಿತ್ತು. ದರ್ಗಾ ಪ್ರವೇಶ ಮಾಡಿದ ಆ ವ್ಯಕ್ತಿಯ ಹಿಂದೆಯೇ ನಾನು ಹೋಗಿದ್ದೆ. ಗುಂಪಿದ್ದ ಜನರ ಮಧ್ಯ ತೆಲಗಿ ಕುಳಿತು ಕೊಂಡಿದ್ದ. ಬಳಿಕ ನಿಧಾನವಾಗಿ ಆತನ ಬಳಿ ಹೋಗಿ ಹೆಗಲ ಮೇಲೆ ಕೈ ಹಾಕಿ ನನ್ನ ಜೊತೆಗೆ ಬರುವಂತೆ ತಿಳಿಸಿದೆ. ಹೊರಗೆ ಬಂದ ಬಳಿಕ ನಾವು ಪೊಲೀಸರು ಎಂಬುದು ತೆಲಗಿಗೆ ತಿಳಿಯಿತು. 

ಈ ವೇಳೆ ಸಾರ್ವಜನಿಕರ ಮುಂದೆ ತನ್ನನ್ನು ಬಂಧಿಸದಂತೆ ಆತ ಮನವಿ ಮಾಡಿಕೊಂಡ. ಬಳಿಕ ಆತನನ್ನು ಕಾರಿನಲ್ಲಿ ಕೂರಿಸಿಕೊಂಡು ವಿಚಾರಣೆಗಾಗಿ ಬಂಗಲೆಯೊಂದಕ್ಕೆ ಕರೆದುಕೊಂಡು ಹೋದೆವು. ಬಳಿಕ ಆತನ ರೂಮಿಗೆ ಕರೆತುಗೊಂಡು ಹೋಗಿ ಅಲ್ಲಿ ಪ್ರಮುಖ ದಾಖಲೆಗಳು ಹಾಗೂ ರೂ.35 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ಆತನನ್ನು ಕರೆದುಕೊಂಡು ಬಂದಿದ್ದೆವು ಎಂದು ಬಾವಾ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com