ವೈದ್ಯ ಮಸೂದೆ: ನ.3ರಂದು ಖಾಸಗಿ ಆಸ್ಪತ್ರೆಗಳ ಬಂದ್'ಗೆ ಐಎಂಎ ಕರೆ

ರಾಜ್ಯ ಸರ್ಕಾರ ಜಾರಿಗೆ ತಲು ಉದ್ದೇಶಿಸಿರುವ ಕರ್ನಾಟಕ ಖಾಸಗಿ ವೈದ್ಯಕೀಯ ತಿದ್ದುಪಡಿ ಮಸೂದೆಯಲ್ಲಿರುವ ಕರಾಳ ಅಂಶಗಳನ್ನು ಕೈಬಿಡುವಂತೆ ಆಗ್ರಹಿಸಿ ನ.3 ರಂದು ರಾಜ್ಯಾದ್ಯಂತ ವೈದ್ಯಕೀಯ ಸೇವೆ ಸ್ಥಗಿತಗೊಳಿಸಲು ಭಾರತೀಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಲು ಉದ್ದೇಶಿಸಿರುವ ಕರ್ನಾಟಕ ಖಾಸಗಿ ವೈದ್ಯಕೀಯ ತಿದ್ದುಪಡಿ ಮಸೂದೆಯಲ್ಲಿರುವ ಕರಾಳ ಅಂಶಗಳನ್ನು ಕೈಬಿಡುವಂತೆ ಆಗ್ರಹಿಸಿ ನ.3 ರಂದು ರಾಜ್ಯಾದ್ಯಂತ ವೈದ್ಯಕೀಯ ಸೇವೆ ಸ್ಥಗಿತಗೊಳಿಸಲು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮಂಗಳವಾರ ನಿರ್ಧರಿಸಿದೆ. 

ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಸ್ಥಗಿತಗೊಳಿಸುವುದಕ್ಕೂ ಮುನ್ನ ಭಾರತೀಯ ವೈದ್ಯಕೀಯ ಸಂಘದ ಪದಾಧಿಖಾರಿಗಳು ನ.2 ರಂದು ಬೆಳಿಗ್ಗೆ ಅನೌಪಚಾರಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆಂದು ಹೇಳಲಾಗುತ್ತಿದೆ. ಐಎಂಎ ನೀಡಿರುವ ಬಂದ್ ಕರೆ ಎಷ್ಟು ಆಸ್ಪತ್ರೆಗಳು ಹಾಗೂ ಕ್ಲಿನಿಕ್ ಗಳು ಬೆಂಬಲ ನೀಡಲಿವೆ ಎಂಬುದರ ಬಗ್ಗೆ ಈ ವರೆಗೂ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ. 

ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಅವರು ಮಾತನಾಡಿ, ಇದು ಪ್ರಜಾಪ್ರಭುತ್ವವಾಗಿದ್ದು, ಪ್ರತಿಭಟನೆ ಮಾಡಲು ಪ್ರತೀಯೊಬ್ಬರೂ ಸ್ವತಂತ್ರರಾಗಿದ್ದಾರೆ. ವಿಧಾನಮಂಡಲದಲ್ಲಿ ನಾನು ನನ್ನನ್ನು ಸಮರ್ಥಿಸಿಕೊಳ್ಳುವೆ. ಪ್ರತಿಭಟನೆ ಕುರಿತು ಪ್ರಸ್ತುತ ನಾನು ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ ಎಂದು ಹೇಳಿದ್ದಾರೆ. 

ದುಬಾರಿ ಶುಲ್ಕ ವಿಧಿಸುವ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ, ಕರ್ನಾಟಕ ಖಾಸಗಿ ವೈದ್ಯಕ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ -2017'ನ್ನು ಜಾರಿಗೆ ತರಲು ನಿರ್ಧರಿಸಿದೆ. ಸರ್ಕಾರ ನಗದಿ ಮಾಡಿದ್ದಕ್ಕಿಂತ ಹೆಚ್ಚಿನ ಶುಲ್ಕ ತೆಗೆದುಕೊಳ್ಳುವ ಆಸ್ಪತ್ರೆಗಳಿಗೆ ದಂಡ ಹಾಕುವುದು ಹಾಗೂ ಜೈಲು ಶಿಕ್ಷೆಗೆ ಗುರಿ ಮಾಡುವುದು ಈ ವಿಧೇಯಕದಲ್ಲಿ ಪ್ರಮುಖವಾಗಿದೆ. 

ವಿಧೇಯಕ ಸಂಬಂಧ ರಾಜ್ಯ ಸರ್ಕಾರ ಜಂಟಿ ಆಯ್ಕೆ ಸಮಿತಿಯನ್ನು ನೇಮಕ ಮಾಡಿತ್ತು. ಸಮಿತಿಯು ಅಕ್ಟೋಬರ್ ಮೊದಲ ವಾರದಲ್ಲಿ ವರದಿಯನ್ನು ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರಿಗೆ ವರದಿಯನ್ನು ಸಲ್ಲಿಕೆ ಮಾಡಿತ್ತು. 

ವಿಧೇಯಕತ ಪ್ರಕಾಸ, ಸಮಿತಿಯ ತಜ್ಞರು ವೈದ್ಯಕೀಯ ಸೇವೆ ಹಾಗೂ ಚಿಕಿತ್ಸೆ ವೆಚ್ಚಗಳನ್ನು ನಿರ್ಧರಿಸಲಿದ್ದು, ವೆಚ್ಚಗಳು ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲೂ ಏಕರೂಪದಲ್ಲಿ ಇರಲಿದೆ. ರೋಗಿಗಳಿಗೆ ನೀಡಲಾಗುವ ಮೂಲಭೂತ ಸೌಕರ್ಯಗಳು ಹಾಗೂ ಸ್ಥಳದ ವೆಚ್ಚಗಳ ಮಾತ್ರ ಆಯಾ ಆಸ್ಪತ್ರೆಗಳು ನಿರ್ಧರಿಸಲಿವೆ. ತಿದ್ದುಪಡಿಯಾಗಿರುವ ಈ ವಿಧೇಯಕವು ನ.13 ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆಯಾಗಲಿದೆ. 

ತಿದ್ದುಪಡಿಯಾಗಿರುವ ವಿಧೇಯಕ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ರಾಜಶೇಖರ್ ಬೆಳ್ಳಾರಿಯವರು, ರಾಜ್ಯ ಆರೋಗ್ಯ ಇಲಾಖೆ ತನ್ನ ನಿರ್ಧಾರಗಳನ್ನು ಬದಲಿಸದೇ ಹೋದಲ್ಲಿ, ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳು ಶುಕ್ರವಾರ ಬಂದ್ ಆಗಲಿವೆ ಎಂದು ಹೇಳಿದ್ದಾರೆ. 

ಪ್ರೈವೇಟ್ ಹಾಸ್ಪಿಟಲ್ಸ್ ಆ್ಯಂಡ್ ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ (ಪಿಹಚ್ಎಎನ್ಎ) ಉಪಾಧ್ಯಕ್ಷ ಡಾ.ಮದನ್ ಗಾಯಕ್ವಾಡ್ ಮಾತನಾಡಿ, ಆಸ್ಪತ್ರೆಗಳನ್ನು ಬಂದ್ ಮಾಡಬೇಕೋ...ಇಲ್ಲವೋ ಎಂಬುದರ ಬಗ್ಗೆ ಈವರೆಗು ನಿರ್ಧಾರ ಕೈಗೊಂಡಿಲ್ಲ. ಬುಧವಾರ ಸಭೆ ಕರೆಯಲಾಗಿದ್ದು, ಎಲ್ಲಾ ಸದಸ್ಯರೂ ಕುಳಿತು ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದೇವೆಂದು ತಿಳಿಸಿದ್ದಾರೆ. 

ಪ್ರತಿಭಟನೆ ಕುರಿತಂತ ಐಎಂಎ ಪ್ರತಿಕಾ ಪ್ರಕಟಣೆಯನ್ನು ಬಿಡುಗಡೆಗೊಳಿಸಿದ್ದು, ಪ್ರಕಟಣೆಯಲ್ಲಿ, ಜಿಲ್ಲಾ ಮಟ್ಟದಲ್ಲಿ ಕುಂದುಕೊರತೆ ಸಮಿತಿ ಬೇಡ. ಈಗಾಗಲೇ ದೂರುಗಳ ಸಲ್ಲಿಕೆಗೆ ಗ್ರಾಹಕ ನ್ಯಾಯಾಲಯ, ಮೆಡಿಕಲ್ ಕೌನ್ಸಿಲ್ ಇದೆ. ಮತ್ತೊಂದು ಸಮಿತಿ ಬಂದರೆ ವಿಚಾರಣೆಗೆ ಅಲೆಯುವುದರಲ್ಲೇ ಸಮಯ ವ್ಯರ್ಥವಾಗುತ್ತದೆ. ಚಿಕಿತ್ಸಾ ವೈಫಲ್ಯಕ್ಕೆ ರೋಗಿ ಮೃತಪಟ್ಟರೆ ಜೈಲು ಶಿಕ್ಷೆ/ದಂಡ ವಿಧಿಸುವುದು ಸರಿಯಲ್ಲ ಇದು ಜಾರಿಯಾದರೆ ತುರ್ತು ಸಂದರ್ಭದಲ್ಲಿ ರೋಗಿಗೆ ಚಿಕಿತ್ಸೆ ನೀಡಲು ವೈದ್ಯರು ಹಿಂದೇಟು ಹಾಕುತ್ತಾರೆ. 

ತಿದ್ದುಪಡಿ ಕಾಯ್ದೆಯಿಂದ ಇಡೀ ವೈದ್ಯ ಸಮುದಾಯವನ್ನು ಆರೋಪಿಗಳ ರೀತಿಯಲ್ಲಿ ಕಾಣುವಂತೆ ಮಾಡಿದಂತಾಗುತ್ತದೆ. ಚಿಕಿತ್ಸಾ ವೆಚ್ಚ ದರಗಳನ್ನು ಬೇರೆಯವುರು ನಿಗದಿಪಡಿಸುವುದು ಸರಿಯಲ್ಲ. ದರ ನಿಗದಿಪಡಿಸುವ ಸ್ವಾತಂತ್ರ್ಯ ಆಸ್ಪತ್ರೆಗಳಿಗೆ ಸೇರಿದ್ದು, ವಕೀಲರು, ಚಾರ್ಟರ್ಡ್ ಅಕೌಂಟೆಂಡ್ ಗಳು, ಸಿನಿಮಾ ನಟರಿಗೆ ಇಲ್ಲದ ಕಟ್ಟಪಾಡುಗಳು ವೈದ್ಯರ ಮೇಲೇಕೆ? ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಬದಲು ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಿ. ಹಿಂದಿನ ಯುಪಿಎ ಸರ್ಕಾರ ಜಾರಿಗೆ ತಂದಿರುವ ಕ್ಲಿನಿಕಲ್ ಎಸ್ಟಾಬ್ಲಿಷ್ ಮೆಂಟ್ ಆ್ಯಕ್ಟ್ ನ್ನು ಜಾರಿಗೆ ತನ್ನ. ಕೇರಳ ರಾಜ್ಯದಲ್ಲಿ ಈ ಕಾಯ್ದೆ ಜಾರಿಯಾಗಿದೆ ಎಂದು ತಿಳಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com