ನೀಲಮಣಿ ರಾಜು ಅವರು ರಾಜ್ಯ ಪೊಲೀಸ್ ಕೇಂದ್ರ ಕಚೇರಿಯಲ್ಲಿ ನಿರ್ಗಮಿತ ಡಿಜಿ-ಐಜಿ ರೂಪಕ್ ಕುಮಾರ್ ದತ್ತಾ ಅವರಿಂದ ನಿನ್ನೆ ಸಂಜೆ ಸರಳ ರೀತಿಯಲ್ಲಿ ಬ್ಯಾಟನ್ ಪಡೆದು ಅಧಿಕಾರ ಸ್ವೀಕಾರ ಮಾಡಿದರು.
ಉತ್ತರಪ್ರದೇಶದ ರೂರ್ಕಿ ಮೂಲದವರಾಗಿರುವ ನೀಲಮಣಿ ರಾಜು ಅವರು 1960ರ ಜ.17ರಂದು ಜನಿಸಿದ್ದರು, 1983ನೇ ಸಾಲಿನ ಕೇಡರ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ, ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತ ನರಸಿಂಹರಾಜು ಅವರ ಪತ್ನಿಯಾಗಿರುವ ಅವರು ಒಂದಷ್ಟು ಕಾಲ ಬೆಂಗಳೂರು ಗ್ರಾಮಾಂತರ ಎಸ್ಪಿ ಯಾಗಿ ಕಾರ್ಯನಿರ್ವಹಿಸಿದ್ದರು. ನಂತರ 1993ರಲ್ಲಿ ಕೇಂದ್ರ ಸೇವೆಗೆ ತೆರಳಿದ್ದರು. 23ಕ್ಕೂ ಹೆಚ್ಚು ವರ್ಷಗಳ ಕಾಲ ರಾಜ್ಯದಿಂದ ಹೊರದಿದ್ದ ನೀಲಮಣಿಯವರು 2016ರಲ್ಲಿ ರಾಜ್ಯ ಸೇವೆಗೆ ವಾಪಸಾಗಿದ್ದರು.
2016ರಲ್ಲಿ ರಾಜ್ಯ ಸೇವೆಗೆ ವಾಪಸಾಗಿದ್ದ ನೀಲಮಣಿಯವರು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾ ನಿರ್ದೇಶಕಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅವರಿಗಾಗಿ ಈ ವಿಶೇಷ ಹುದ್ದೆಯನ್ನು ಸೃಷ್ಟಿಮಾಡಲಾಗಿತ್ತು. ಕರಾವಳಿ ರಕ್ಷಣಾ ಪಡೆ, ನಕ್ಸಲ್ ನಿಗ್ರಹ ದಳ, ಉಗ್ರ ನಿಗ್ರಹ ದಳ, ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಹಾಗೂ ಖಾಸಗಿ ಭದ್ರತಾ ಪಡೆಗಳ ನಿಯಂತ್ರಣ ಇವರ ಕೆಳಗೆ ಬರುತ್ತಿತ್ತು. ಬಳಿಕ ಅಗ್ನಿಶಾಮಕ ದಳ ಡಿಜಿಪಿಯಾಗಿಯೂ ಸೇವೆ ಸಲ್ಲಿಸಿದ್ದರು. ಈ ಮೂಲಕ ರಾಜ್ಯದಲ್ಲಿ ಡಿಜಿಪಿ ಪದವಿಗೇರಿದ ಮೊದಲ ಮಹಿಳಾ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ನೀಲಮಣಿ ರಾಜು ಅವರು 2020ರ ಜನವರಿಯಲ್ಲಿ ಸೇವೆಯಿಂದ ನಿವೃತ್ತರಾಗಲಿದ್ದು, 2 ವರ್ಷ 3 ತಿಂಗಳ ಅವಧಿಗೆ ಡಿಜಿ-ಐಡಿಪಿ ಹುದ್ದೆಯಲ್ಲಿ ಇರಲಿದ್ದಾರೆ.
24 ಗಂಟೆ ಕೆಲಸ ಮಾಡಲು ಸಿದ್ಧ
ರಾಜ್ಯ ಸರ್ಕಾರ ನನಗೆ ಬಹುದೊಡ್ಡ ಹೊಣೆಗಾರಿಕೆಯನ್ನು ನೀಡಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ನನಗೆ ರಾಜ್ಯದ ಪರಿಚಯವಿದೆ. ದಿನದ 24 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧಳಿದ್ದೇನೆಂದು ನೀಲಮಣಿ ರಾಜು ಅವರು ಹೇಳಿದ್ದಾರೆ.
ಇದೇ ವೇಳೆ ಗುಸ್ತು ವಾಹನ ವ್ಯವಸ್ಥೆ ಹಾಗೂ ಪೊಲೀಸ್ ಇಲಾಖೆಯಲ್ಲಿ ಆರ್.ಕೆ. ದತ್ತಾ ಅವರು ತಂದಿರುವ ಸುಧಾರಣೆಗಳನ್ನು ನೀಲಮಣಿಯವವರು ಕೊಂಡಾಡಿದ್ದಾರೆ.
ಸೇವಾ ಹಿರಿತನದ ಆಧಾರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಲಮಣಿ ರಾಜು ಅವರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕ ಮಾಡಿದ್ದು, ಕಿಶೋರ್ ಚಂದ್ರ ಅವರನ್ನು ಸಿಐಡಿ ಡಿಜಿ ಹುದ್ದೆಯಿಂದ ವರ್ಗಾವಣೆ ಮಾಡಿ ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿಗಮದ ಅಧ್ಯಕ್ಷ ಹುದ್ದೆಗೆ ನೇಮಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳದ ಡಿಜಿ ಎಂ.ಎನ್ ರೆಡ್ಡಿ ಅವರನ್ನು ಗೃಹ ರಕ್ಷಕ ದಳ, ಅಗ್ನಿಶಾಮಕದಳದ ಕಮಾಂಡೆಂಟ್ ಆಗಿ ನೇಮಕಗೊಳಿಸಿದ್ದಾರೆ.