ದ್ವೇಷದಿಂದ ಹತ್ಯೆ ಮಾಡುತ್ತಾರೆಂದುಕೊಂಡಿರಲಿಲ್ಲ, ನಮಗೆ ನ್ಯಾಯ ಕೊಡಿ: ಕವಿತಾ ಲಂಕೇಶ್

ನಮ್ಮ ಅಕ್ಕ ಗೌರಿ ಲಂಕೇಶ್ ಹೇಡಿಯಾಗಿರಲಿಲ್ಲ. ಆಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಗಳು ಬರುತ್ತಿತ್ತು. ಆದರೆ, ಅದಕ್ಕೆ ಅವರು ತಲೆ ಕೆಡಿಸಿಕೊಂಡಿರಲಿಲ್ಲ. ದ್ವೇಷದಿಂದ ಈ ರೀತಿ ಹತ್ಯೆ ಮಾಡುತ್ತಾರೆಂದುಕೊಂಡಿರಲಿಲ್ಲ...
ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ಹಾಗೂ ಸಹೋದರಿ ಕವಿತಾ ಲಂಕೇಶ್ (ಸಂಗ್ರಹ ಚಿತ್ರ)
ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ಹಾಗೂ ಸಹೋದರಿ ಕವಿತಾ ಲಂಕೇಶ್ (ಸಂಗ್ರಹ ಚಿತ್ರ)
ಬೆಂಗಳೂರು: ನಮ್ಮ ಅಕ್ಕ ಗೌರಿ ಲಂಕೇಶ್ ಹೇಡಿಯಾಗಿರಲಿಲ್ಲ. ಆಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಗಳು ಬರುತ್ತಿತ್ತು. ಆದರೆ, ಅದಕ್ಕೆ ಅವರು ತಲೆ ಕೆಡಿಸಿಕೊಂಡಿರಲಿಲ್ಲ. ದ್ವೇಷದಿಂದ ಈ ರೀತಿ ಹತ್ಯೆ ಮಾಡುತ್ತಾರೆಂದುಕೊಂಡಿರಲಿಲ್ಲ. ನಮಗೆ ನ್ಯಾಯ ಕೊಡಿ ಎಂದು ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಅವರು ಗುರುವಾರ ಹೇಳಿದ್ದಾರೆ. 
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರ ಇಂದ್ರಜಿತ್ ಲಂಕೇಶ್ ಹಾಗೂ ಸಹೋದರಿ ಕವಿತಾ ಲಂಕೇಶ್ ಅವರು ಜಂಟಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ್ದು, ಸಹೋದರಿಯ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ಒಪ್ಪಿಸಿದೆ. ತನಿಖೆಯಿಂದ ನಮಗೆ ನ್ಯಾಯ ದೊರಕಿದೇ ಹೋದಲ್ಲಿ ನಾವು ಸಿಬಿಐ ತನಿಖೆಗೆ ಕೋರುತ್ತೇವೆಂದು ಹೇಳಿದ್ದಾರೆ. 
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕವಿತಾ ಲಂಕೇಶ್ ಅವರು, ತಮ್ಮ ವಿಚಾರಧಾರೆಗಳಿಂದಲೇ ಗೌರಿಯವರು ಹತ್ಯೆಯಾಗಿರುವ ಸಾಧ್ಯಗಳಿವೆ. ಈ ರೀತಿಯ ಕೃತ್ಯಗಳು ಇನ್ನೆಲ್ಲೂ ನಡೆಯಬಾರದು. ಕಲಬುರ್ಗಿ ಕುಟುಂಬ ಕೂಡ ನ್ಯಾಯಕ್ಕಾಗಿ ಕಾಯುತ್ತಿದೆ. ನಮಗೆ ಇಂತಹ ಸ್ಥಿತಿ ಬರಬಾರದು. ಪತ್ರಕರ್ತರ ಜೀವಕ್ಕೆ ಅಪಾಯ ಎದುರಾಗಬಾರದು, ಗೌರಿ ಹತ್ಯೆ ಪ್ರಕರಣದಲ್ಲಿ ಸರ್ಕಾರ ನಮಗೆ ನ್ಯಾಯ ಒದಗಿಸಬೇಕೆಂದು ಹೇಳಿದ್ದಾರೆ. 
ಸಹೋದರಿಯ ಹತ್ಯೆ ನಮ್ಮ ಕುಟುಂಬಕ್ಕೆ ಬಹಳ ನೋವುಂಟು ಮಾಡಿದೆ. ಗೌರಿ ಲಂಕೇಶ್ ಗೆ ಯಾವುದೇ ಬೆದರಿಕೆಗಳಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಗಳು ಬಂದಿದ್ದವು. ಆದರೆ, ಅದಾವುದಕ್ಕೂ ಅವರು ತಲೆ ಕೆಡಿಸಿಕೊಂಡಿರಲಿಲ್ಲ. ತಮಗೆ ಜೀವ ಬೆದರಿಕೆ ಕರೆ ಬರುತ್ತಿವೆ ಎಂಬುದರ ಬಗ್ಗೆಯೂ ಅವರು ಎಂದಿಗೂ ನಮ್ಮೊಂದಿಗೆ ಹೇಳಿರಲಿಲ್ಲ. ಯಾರನ್ನೂ ನಿಂದಿಸುತ್ತಿರಲಿಲ್ಲ. ಕೇವಲ ಅವರ ವಿಚಾರಧಾರೆಗಳನ್ನು ಮಾತ್ರ ಹಂಚಿಕೊಳ್ಳುತ್ತಿದ್ದರು. ದ್ವೇಷದಿಂದ ಈ ರೀತಿ ಹತ್ಯೆ ಮಾಡುತ್ತಾರೆಂದು ತಿಳಿದಿರಲಿಲ್ಲ. ನಮಗೆ ನ್ಯಾಯ ಕೊಡಿ ಎಂದು ಕೇಳಿಕೊಂಡಿದ್ದಾರೆ. 
ನಂತರ ಮಾತನಾಡಿರುವ ಇಂದ್ರಜಿತ್ ಲಂಕೇಶ್ ಅವರು, ಕಲಬುರ್ಗಿ ಹತ್ಯೆಗೂ, ಗೌರಿ ಲಂಕೇಶ್ ಹತ್ಯೆಗೂ ಸಾಮ್ಯತೆಗಳಿರಬಹುದು. ಆದರೆ, ಈಗಲೇ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 
ಸಹೋದರಿಯ ಸಾವಿನ ವಿಚಾರದಲ್ಲಿ ರಾಜಕೀಯ ಆಟವಾಡಬಾರದು. ಕೆಲ ವಿಚಾರಗಳ ಸಂಬಂಧ ನನಗೂ ಆಕೆಯ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಆದರೆ, ಆವರ ಸಿದ್ಧಾಂತಗಳನ್ನು ನಾನು ಗೌರವಿಸುತ್ತೇನೆ. ಹೆಲ್ಮೆಟ್ ಧರಿಸಿಕೊಂಡು ಬಂದಿದ್ದ ದುಷ್ಕರ್ಮಿಗಳ ತಂಡ ಗೌರಿಯವರನ್ನು ಹತ್ಯೆ ಮಾಡಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಮನೆಯಲ್ಲಿ 2 ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯಾವಳಿಗಳು ಸೆರೆಯಾಗಿವೆ. ತನಿಖೆ ವೇಳೆ ಈ ದೃಶ್ಯಾವಳಿಗಳನ್ನು ಕುಟುಂಬದ ಎದುರೇ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com