ಗುಂಡಿಗಳ ನಗರವಾದ ಬೆಂಗಳೂರು: ರಸ್ತೆಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅಪಾಯ ಕಟ್ಟಿಟ್ಟ ಬುತ್ತಿ!

ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳು ಅಕ್ಷರಶಃ ಗುಂಡಿಗಳಲ್ಲಿ ಮುಳುಗಿ ಹೋಗಿವೆ, ಗುಂಡಿಯಲ್ಲದ ಒಂದೇ ಒಂದು ರಸ್ತೆಯೂ ನಿಮಗೆ ನಗರದಲ್ಲಿ ಕಾಣ ಸಿಗುವುದಿಲ್ಲ...
ಬೆಂಗಳೂರಿನ ರಸ್ತೆಯೊಂದರ ದುಸ್ಥಿತಿ
ಬೆಂಗಳೂರಿನ ರಸ್ತೆಯೊಂದರ ದುಸ್ಥಿತಿ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳು ಅಕ್ಷರಶಃ ಗುಂಡಿಗಳಲ್ಲಿ ಮುಳುಗಿ ಹೋಗಿವೆ, ಗುಂಡಿಯಲ್ಲದ ಒಂದೇ ಒಂದು ರಸ್ತೆಯೂ ನಿಮಗೆ ನಗರದಲ್ಲಿ ಕಾಣ ಸಿಗುವುದಿಲ್ಲ.
ಐಟಿ ಸಿಟಿ ಎಂದೇ ಪ್ರಸಿದ್ದವಾಗಿರುವ ಬೆಂಗಳೂರು ರಸ್ತೆಗಳಲ್ಲಿ ಸಂಚರಿಸುವ ಪ್ರಯಾಣಿಕರು ಪ್ರತಿದಿನ ಜೀವ ಭಯದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 
ಕಳೆದ ತಿಂಗಳು ಬಿಬಿಎಂಪಿ 5 ಸಾವಿರ ಗುಂಡಿಗಳಿವೆ ಎಂದು ಲೆಕ್ಕ ಮಾಡಿತ್ತು, ಆದರೆ ಗುಂಡಿಗಳ ಸಂಖ್ಯೆ ಕಡಿಮೆಯಿರಬಹುದು. ರಸ್ತೆಗಳ ದುಸ್ಥಿತಿಗೆ ಸತತವಾಗಿ ಸುರಿಯುತ್ತಿರುವ ಮಳೆ ಕಾರಣ ಎಂದು ಬಿಬಿಎಂಪಿ ಆರೋಪಿಸಿದೆ,  ಆದರೆ ಸರಿಯಾದ ನಿರ್ವಹಣೆಯಿಲ್ಲದಿರುವುದು ಮತ್ತು ಉದಾಸೀನತೆ ಹಾಗೂ ನಿರ್ಲಕ್ಷ್ಯವೇ ರಸ್ತೆಗಳ ಈ  ಕೆಟ್ಟ ಸ್ಥಿತಿಗೆ ಕಾರಣ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ನಗರದ ರಸ್ತೆಗಳ ಪರಿಸ್ಥಿತಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹದಗೆಟ್ಟಿದ್ದರೂ ಸರ್ಕಾರ ಇನ್ನೂ ನಿದ್ದೆಯಿಂದ ಎದ್ದಿಲ್ಲ,  ರಸ್ತೆಗಳ ಬಗ್ಗೆ ನಿಜವಾಗಿಯೂ ಕಾಳಜಿಯಿದ್ದರೇ ಜನವರಿಯಿಂದ ಮಾರ್ಚ್ ತಿಂಗಳವರೆಗೆ ಸರ್ಕಾರ ದುರಸ್ತಿ ಕಾರ್ಯ ಕೈಗೊಳ್ಳಬಹುದಿತ್ತು.  ಆದರೆ ಉದಾಸೀನ ಮಾಡಲಾಗಿದೆ ಎಂದು ಸಂಚಾರಿ ತಜ್ಞ ಎಂಎನ್ ಶ್ರೀಹರಿ ಹೇಳಿದ್ದಾರೆ.
ಈ ಸಮಸ್ಯೆಗೆ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ರಸ್ತೆಗಳ ಮಧ್ಯೆ ಉಂಟಾಗಿರುವ ಗುಂಡಿಗಳನ್ನು ವೈಜ್ಞಾನಿಕವಾದ ರೀತಿಯಲ್ಲಿ ಮುಚ್ಚಿಲ್ಲ ಎಂದು ನಗರ ತಜ್ಞ ಎನ್. ರವಿಚಂದರ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಎಲ್ಲಾ ಗುಂಡಿಗಳನ್ನು ಮುಚ್ಚುವಂತೆ ಬಿಬಿಂಪಿಗೆ ನಿರ್ದೇಶನ ನೀಡಿದ್ದಾರೆ, ಆದರೆ ಅಕ್ಟೋಬರ್ ಅಂತ್ಯದವರೆಗೂ ಕಾಮಗಾರಿ ಮುಗಿಯುವುದಿಲ್ಲ,  ಮಳೆ ನಿಲ್ಲುವವರೆಗೂ ಕೆಲಸ ಆರಂಭಿಸಲು ಸಾಧ್ಯವಿಲ್ಲ ಎಂದು ಮೇಯರ್ ಪದ್ಮಾವತಿ ಹೇಳಿದ್ದಾರೆ.
ನಾಲ್ಕು ದಿನ ಮಳೆಯಿಲ್ಲದೇ ಶುಷ್ಕ ವಾತಾವರಣ ಇದ್ದರೇ ಮಾತ್ರ ಈ ಗುಂಡಿಗಳ ಮುಚ್ಚುವಿಕೆ ಹಾಗೂ ರಸ್ತೆ ದುರಸ್ತಿ ಕಾರ್ಯ ಸಾಧ್ಯ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. ಒಟ್ಟಿನಲ್ಲಿ ಸದ್ಯ ಮಳೆ ನಿಲ್ಲುವ ಆಗಿಲ್ಲ, ರಸ್ತೆ ರಿಪೇರಿ ಸಾಧ್ಯವಿಲ್ಲ, ಸಾರ್ವಜನಿಕರ ಪರದಾಟಕ್ಕೆ ಅಂತ್ಯವಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com