ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆ ಆರಂಭ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದ ಕೇಂದ್ರಬಿಂದು ಜಂಬೂ ಸವಾರಿ ಮೆರವಣಿಗೆ ಆರಂಭವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಜಂಬೂ ಸವಾರಿಗೆ ಚಾಲನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಜಂಬೂ ಸವಾರಿಗೆ ಚಾಲನೆ
Updated on

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದ ಕೇಂದ್ರಬಿಂದು ಜಂಬೂ ಸವಾರಿ ಮೆರವಣಿಗೆ ಆರಂಭವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು.

ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.15ಕ್ಕೆ ಶುಭಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿ ಧ್ವಜಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು.  ನಂತರ ಸಂಜೆ 4.45ಕ್ಕೆ ಅರಮನೆಯ ಮುಖ್ಯದ್ವಾರದಲ್ಲಿ  ನಿರ್ಮಿಸಲಾಗಿದ್ದ ವಿಶೇಷ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಿನ್ನದ ಅಂಬಾರಿಯಲ್ಲಿ ವಿರಾಜಮಾನರಾಗಿದ್ದ ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ವಿಧ್ಯುಕ್ತ ಚಾಲನೆ  ನೀಡಲಿದ್ದಾರೆ.

ಈ ಸಂದರ್ಭದಲ್ಲಿ ನಗರ ಸಶಸ್ತ್ರ ಪಡೆಯ (ಸಿಎಆರ್) ಪೊಲೀಸರು, 21 ಕುಶಾಲತೋಪುಗಳನ್ನು ಹಾರಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ ಮಹದೇವಪ್ಪ, ಯದುವಂಶಸ್ಥ ರಾಜ ಯದುವೀರ್, ಮೇಯರ್  ರವಿಕುಮಾರ್, ಜಿಲ್ಲಾಧಿಕಾರಿ ಡಿ. ರಂದೀಪ್, ನಗರ ಪೊಲೀಸ್ ಆಯುಕ್ತ ಎ. ಸುಬ್ರಮಣ್ಯೇಶ್ವರ ರಾವ್ ಸೇರಿದಂತೆ ಸಂಸದರು, ಶಾಸಕರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ರಾಜವಂಶಸ್ಥ ಯದುವೀರ್ ಒಡೆಯರ್ ಅರಮನೆಯಲ್ಲಿ ವಿಜಯದಶಮಿ ಹಾಗೂ ಶಮಿಪೂಜೆ ನಡೆಸಿದರು.

ಮೆರವಣಿಗೆ ಆರಂಭ
ಇದೇ ವೇಳೆ ಅತ್ತ ಸಿಎಂ ಸಿದ್ದರಾಮಯ್ಯ ಅವರು ನಂದಿಧ್ವಜ ಪೂಜೆ ಸಲ್ಲಿಸುತ್ತಿದ್ದಂತೆಯೇ ಇತ್ತ ಅರಮನೆ ಮುಂಭಾಗದಲ್ಲಿ ಮೆರವಣಿಗೆ ಆರಂಭವಾಯಿತು. ಪೋಲಿಸ್ ಬ್ಯಾಂಡ್‌ಗಳ ಸುಶ್ರಾವ್ಯ ಸಂಗೀತ, ಅರಮನೆಯ ವಾದ್ಯವೃಂದ,  ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ, ಪೂಜಾಕುಣಿತ, ಕರಡಿ ಮಜಲು, ನಂದಿಕೋಲು, ಮರಗಾಲು, ಹುಲಿವೇಷಧಾರಿಗಳೂ ಸೇರಿದಂತೆ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ರಾಜ್ಯದ ಕಲಾ ತಂಡಗಳಲ್ಲದೆ, ಉತ್ತರ ಪ್ರದೇಶ, ಪಂಜಾಬ್, ತೆಲಂಗಾಣ, ಒಡಿಸ್ಸಾ, ಡಾರ್ಜಲಿಂಗ್, ಹರಿಯಾಣ ರಾಜ್ಯಗಳ ಸುಮಾರು 40 ತಂಡಗಳು ಅತ್ಯಾಕರ್ಷಕ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ. ನಾಡಿನ ಕಲೆ, ಸಾಹಿತ್ಯ,  ವಾಸ್ತುಶಿಲ್ಪ, ಪಾರಂಪರೆ, ಪರಿಸರ, ಐತಿಹಾಸಿಕ ತಾಣಗಳು, ಪುರಾಣ ಪ್ರಸಿದ್ಧ ತಾಣಗಳು, ದೇವಾಲಯಗಳು ಮುಂತಾದ ಸ್ತಬ್ಧ ಚಿತ್ರಗಳ ಮೆರವಣಿಗೆ ಸಾಲುಗಟ್ಟಿ ಸಾಗುತ್ತಿದೆ. ಎಲ್ಲ ಜಿಲ್ಲೆಗಳ ಪ್ರಮುಖ ಐತಿಹಾಸಿಕ ಮತ್ತು ಪುಣ್ಯ  ಕ್ಷೇತ್ರಗಳ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಇದ್ದವು. ವೀರರಾಣಿ ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ, ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಮುಂತಾದ ದಾರ್ಶನಿಕರ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು.

ಅರಮನೆ ಆವರಣದಿಂದ ಬನ್ನಿಮಂಟಪದವರೆಗೂ ಮೆರವಣಿಗೆ ನಡೆಯಲಿದ್ದು, ದೇಶ-ವಿದೇಶಗಳ ಪ್ರವಾಸಿಗರು ಮೆರವಣಿಗೆಯ ವೈಭವವನ್ನು ಕಣ್ತುಂಬಿಕೊಳ್ಳತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮೆರವಣಿಗೆಯುದ್ದಕ್ಕೂ ಬಿಗಿ ಪೊಲೀಸ್  ಬಂದೋಬಸ್ತ್ ಮಾಡಲಾಗಿದೆ.

ಮೆರವಣಿಗೆಯಲ್ಲಿ ಕೆಎಸ್‌ಆರ್‌ಪಿ, ಅಗ್ನಿಶಾಮಕ ಸೇವೆ, ಮೌಂಟ್ ಬಿಟಾಲಿಯನ್, ಕರ್ನಾಟಕ ಪೊಲೀಸ್ ಬ್ಯಾಂಡ್, ಸ್ಕೌಟ್ಸ್ ಅಂಡ್ ಗೈಡ್ಸ್, ಸೇವಾ ದಳ, ಮಹಿಳಾ ಪೊಲೀಸ್, ರಿಸರ್ವ್ ಪೊಲೀಸ್ ಸೇರಿದಂತೆ ಅರಮನೆಯ  ವಾದ್ಯವೃಂದ, ಫಿರಂಗಿ ಗಾಡಿಗಳು, ವಿಶೇಷ ವೇಷಧಾರಿಗಳ ತಂಡ, ಅಲೆಮಾರಿಗಳ ತಂಡ ಸೇರಿದಂತೆ 30 ತಂಡಗಳು ಪಾಲ್ಗೊಂಡಿವೆ.

ತಾಯಿ ಚಾಮುಂಡೇಶ್ವರಿಗೆ ಸಿಎಂ ಪತ್ನಿ ನೀಡಿದ ಹರಕೆಯ ಸೀರೆ
ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಕೋರಿಕೆ ಮೇರೆಗೆ ಅವರು ನೀಡಿದ ಹರಕೆಯ ಸೀರೆಯನ್ನೇ ತಾಯಿ ಚಾಮುಂಡೇಶ್ವರಿಗೆ ಉಡಿಸಲಾಗಿದೆ. ಗೆ ಉಡಿಸಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದರು. ಎಷ್ಟೇ ಆದರೂ ಸಿಎಂ ಪತ್ನಿ  ಅಲ್ಲವೇ ಆದ್ದರಿಂದ ಅವರ ಒತ್ತಾಯಕ್ಕೆ ಮಣಿದು ಇಂದು ಉತ್ಸವ ಮೂರ್ತಿ ದೇವಿ ಚಾಮುಂಡಿಗೆ ಅವರು ನೀಡಿರುವ ಸೀರೆಯನ್ನೇ ಉಡಿಸಿ ಅಲಂಕರಿಸಲಾಗಿದೆ. ಕೆಂಪು ಪಟ್ಟಿ ಉಳ್ಳ ನೀಲಿ ಬಣ್ಣದ ರೇಷ್ಮೆ ಸೀರೆಯನ್ನು ತಾಯಿ  ಚಾಮುಂಡೇಶ್ವರಿಗೆ ಉಡಿಸಲಾಗಿದ್ದು, ಕಳೆದ 15 ವರ್ಷಗಳಿಂದ ಈ ಉತ್ಸವ ಮೂರ್ತಿಗೆ ಬೆಂಗಳೂರಿನ ಬಳೇಪೇಟೆಯ ಉಧ್ಯಮಿ ಸೀರೆ ನೀಡುತ್ತಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com