ಬೆಂಗಳೂರು: ಖಿನ್ನತೆಯಿಂದ 63 ವರ್ಷದ ನಿವೃತ್ತ ತಹಸೀಲ್ದಾರ್ ಆತ್ಮಹತ್ಯೆ
ಬೆಂಗಳೂರು: ಬಸವೇಶ್ವರನಗರದ ತಮ್ಮ ಫ್ಲಾಟ್ ನಲ್ಲಿ ಫ್ಯಾನಿಗೆ ನೇಣು ಬಿಗಿದು 63 ವರ್ಷದ ನಿವೃತ್ತ ತಹಸೀಲ್ದಾರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕಳೆದ ಶನಿವಾರ ರಾತ್ರಿ ಪ್ರಕರಣ ಬೆಳಕಿಗೆ ಬಂದಿದ್ದು ಮನೆಯಿಂದ ವಾಸನೆ ಬಂದದ್ದನ್ನು ಗ್ರಹಿಸಿದ ಪಕ್ಕದ ಮನೆಯವರು ಪೊಲೀಸರಿಗೆ ವಿಷಯ ತಲುಪಿಸಿದ್ದಾರೆ. ಮೃತ ನಿವೃತ್ತ ತಹಸೀಲ್ದಾರರನ್ನು ನಾಗರತ್ನ ಎಂದು ಗುರುತಿಸಲಾಗಿದ್ದು ಬಸವೇಶ್ವರನಗರ 4ನೇ ಬ್ಲಾಕ್ ನಿವಾಸಿಯಾಗಿದ್ದಾರೆ.
ಮದುವೆಯಾಗದಿದ್ದ ನಾಗರತ್ನ ಒಬ್ಬರೇ ವಾಸಿಸುತ್ತಿದ್ದರು. ನಿವೃತ್ತಿಗೆ ಮುನ್ನ ತಹಸೀಲ್ದಾರ್ ಆಗಿ ಬಡ್ತಿ ಪಡೆದಿದ್ದರು. ಕೆಲವು ದಿನಗಳ ಹಿಂದೆಯೇ ನಾಗರತ್ನ ಆತ್ಮಹತ್ಯೆ ಮಾಡಿಕೊಂಡಿರಬಹುದು. ಕಳೆದ ಗುರುವಾರವೇ ಅವರ ಮನೆಯಿಂದ ವಾಸನೆ ಬರುತ್ತಿತ್ತು ಮತ್ತು ಅವರು ಮನೆಯ ಸುತ್ತಮುತ್ತ ಎಲ್ಲಿಯೂ ಕಾಣಿಸುತ್ತಿರಲಿಲ್ಲ. ಆರಂಭದಲ್ಲಿ ಅಕ್ಕಪಕ್ಕದ ಮನೆಯವರು ಆಕೆ ಯಾತ್ರೆಗೆ ಹೋಗಿರಬಹುದು ಎಂದು ಭಾವಿಸಿದ್ದರಂತೆ.
ಆಕೆಯ ಕೆಲವು ಸಂಬಂಧಿಕರು ಕೂಡ ಸುತ್ತಮುತ್ತಲ ಸ್ಥಳದಲ್ಲಿಯೇ ವಾಸಿಸುತ್ತಿದ್ದಾರೆ ಆದರೆ ಅವರ ಜೊತೆ ನಾಗರತ್ನಗೆ ಸಂಪರ್ಕವಿರಲಿಲ್ಲ. ಪಕ್ಕದ ಮನೆಯವರು ವಿಷಯ ತಿಳಿಸಿದಾಗ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಮುರಿದು ನೋಡಿದಾಗ ಫ್ಯಾನಿಗೆ ನೇಣು ಹಾಕಿಕೊಂಡಿರುವುದು ಪತ್ತೆಯಾಯಿತು. ಶವವನ್ನು ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ನಾಗರತ್ನ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ. ಆದರೆ ಸಂಬಂಧಿಕರು ಹೇಳುವ ಪ್ರಕಾರ, ಆಕೆ ಮದುವೆಯಾಗದ್ದರಿಂದ ಖಿನ್ನತೆಗೆ ಒಳಗಾಗಿದ್ದಳು. ಆಕೆಯ ಆರೋಗ್ಯ ಸಮಸ್ಯೆ ಮತ್ತು ಖಾಸಗಿ ಸಮಸ್ಯೆಗಳ ಬಗ್ಗೆ ಸಂಬಂಧಿಕರ ಬಳಿ ಹೇಳಿಕೊಳ್ಳುತ್ತಿದ್ದರಂತೆ. ಆಕೆಯ ಹಿರಿಯ ಸೋದರಿ ಮೈಸೂರಿನಲ್ಲಿದ್ದವರು ತೀರಿಕೊಂಡಿದ್ದರಿಂದಲೂ ಖಿನ್ನತೆಗೊಳಗಾಗಿದ್ದರು. ನಾಗರತ್ನ ಸೋದರ ಜಯನಗರದಲ್ಲಿ ವಾಸಿಸುತ್ತಿದ್ದು ಯಾರ ಮೇಲೆಯೂ ದೂರು ನೀಡಿಲ್ಲ. ನಿನ್ನೆ ಅವರ ಅಂತಿಮ ವಿಧಿ ವಿಧಾನಗಳನ್ನು ಸೋದರ ನೆರವೇರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ