ಬಾಡಿಗೆ ವಿವಾದ: 3 ತಿಂಗಳಲ್ಲಿ ಮನೆ ಖಾಲಿ ಮಾಡುವಂತೆ ನಟ ಯಶ್ ಗೆ ಕೋರ್ಟ್ ಆದೇಶ

ಮನೆ ಬಾಡಿಗೆ ನೀಡದೆ, ಮನೆ ಮಾಲೀಕನಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದ ಖ್ಯಾತ ನಟ ಯಶ್ ಅವರಿಗೆ....
ನಟ ಯಶ್
ನಟ ಯಶ್
ಬೆಂಗಳೂರು: ಮನೆ ಬಾಡಿಗೆ ನೀಡದೆ, ಮನೆ ಮಾಲೀಕನಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದ ಖ್ಯಾತ ನಟ ಯಶ್ ಅವರಿಗೆ ಮೂರು ತಿಂಗಳಲ್ಲಿ ಮನೆ ಖಾಲಿ ಮಾಡುವಂತೆ 42ಸಿಟಿ ಸಿವಿಲ್ ಕೋರ್ಟ್ ಮಂಗಳವಾರ ಆದೇಶಿಸಿದೆ.
2010ರ ಅಕ್ಟೋಬರ್ 16 ರಿಂದ ಕತ್ರಿಗುಪ್ಪೆಯಲ್ಲಿರುವ ತಮ್ಮ ನಿವಾಸ ವಾಸವಿರುವ ಯಶ್ ಮತ್ತು ಅವರ ಕುಟುಂಬ ಸಮಯಕ್ಕೆ ಸರಿಯಾಗಿ ಬಾಡಿಗೆ ಕಟ್ಟದೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಮನೆ ಮಾಲೀಕ ಮುನಿಪ್ರಸಾದ್ ಅವರು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಸಿಟಿ ಸಿವಿಲ್ ಕೋರ್ಟ್, ನಟ ಯಶ್ ಅವರ ತಾಯಿ ಪುಷ್ಪಾ ಅವರಿಗೆ ಮೂರು ತಿಂಗಳಲ್ಲಿ ಮನೆ ಖಾಲಿ ಮಾಡುವಂತೆ ಮತ್ತು ಮನೆ ಬಾಡಿಗೆ ಬಾಕಿ 9 ಲಕ್ಷ 60 ಸಾವಿರ ಮನೆ ಮಾಲೀಕರಿಗೆ ಪಾವತಿಸುವಂತೆ ಹಾಗೂ ಮುಂಗಡವಾಗಿ ಪಡೆದಿದ್ದ ನಾಲ್ಕು ಲಕ್ಷ ರುಪಾಯಿಯನ್ನು ಬಾಡಿಗೆದಾರರಿಗೆ ಮರಳಿಸುವಂತೆ ಮನೆ ಮಾಲೀಕರಿಗೆ ಕೋರ್ಟ್ ಆದೇಶಿಸಿದೆ.
ಯಶ್ ತಾಯಿಯಿಂದ ನಮಗೆ 21.37 ಲಕ್ಷ ರು ಬಾಡಿಗೆ ಹಣ ಬರಬೇಕಿದೆ ಎಂದು ಮನೆ ಮಾಲೀಕರು ತಮ್ಮ ದೂರಿನಲ್ಲಿ ತಿಳಿಸಿದ್ದರು.
2010ರ ಅಕ್ಟೋಬರ್‌ನಲ್ಲಿ ಯಶ್ ಅವರ ಕುಟುಂಬಕ್ಕೆ ಮನೆಯನ್ನು 11 ತಿಂಗಳ ಅವಧಿಗೆಂದು ಭೋಗ್ಯಕ್ಕೆ ನೀಡಲಾಗಿತ್ತು. 2011ರಲ್ಲಿ ಭೋಗ್ಯದ ಅವಧಿ ಮುಗಿದ ನಂತರ ಬಾಡಿಗೆ ನೀಡಬೇಕಿತ್ತು. ಕೆಲವು ತಿಂಗಳುಗಳ ಕಾಲ ಮಾತ್ರ ಅಲ್ಪಸ್ವಲ್ಪ ಬಾಡಿಗೆ ನೀಡಿ ಆನಂತರ ಬಾಡಿಗೆಯನ್ನೂ ನಿಲ್ಲಿಸಿಬಿಟ್ಟಿದ್ದಾರೆ. ಮನೆಯನ್ನೂ ಖಾಲಿ ಮಾಡದೆ 21.37 ಲಕ್ಷ ರು. ಬಾಡಿಗೆ ಉಳಿಸಿಕೊಂಡಿದ್ದಾರೆ. ಬಾಡಿಗೆ ಕೊಡಿ ಎಂದು ಕೇಳಿದರೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಮುನಿಪ್ರಸಾದ್ ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com