ಐಟಿ ದಾಳಿ ನಡೆದಿಲ್ಲ: ಹೆಚ್‏ಸಿ ಮಹದೇವಪ್ಪ ಹೇಳಿಕೆ; ಕೇಂದ್ರದಿಂದ ಐಟಿ ಇಲಾಖೆ ದುರ್ಬಳಕೆ: ಸಿಎಂ

ತಮ್ಮ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿಲ್ಲ ಎಂದು ಸಚಿವ ಹೆಚ್ ಸಿ ಮಹದೇವಪ್ಪ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹುಬ್ಬಳ್ಳಿ: ತಮ್ಮ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿಲ್ಲ ಎಂದು ಸಚಿವ ಹೆಚ್ ಸಿ ಮಹದೇವಪ್ಪ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಇಂದು ಬೆಳಗ್ಗೆ ಮಹದೇವಪ್ಪ ಅವರ ಮೈಸೂರು ನಿವಾಸದ ಮೇಲೆ ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ಈ ಹಿನ್ನಲೆಯಲ್ಲಿ ಇಂದು ಸ್ಪಷ್ಟನೆ ನೀಡಿರುವ ಮಹದೇವಪ್ಪ ಅವರು, ತಮ್ಮ ನಿವಾಸದ ಮೇಲೆ ಯಾವುದೇ ರೀತಿಯ ಐಟಿ ದಾಳಿಯಾಗಿಲ್ಲ. ಆದರೆ ಕೆಲ ಕಂಟ್ರಾಕ್ಟರ್ ಗಳ ನಿವಾಸದ ಮೇಲೆ ಐಟಿ ದಾಳಿಯಾಗಿದೆ. ಇದನ್ನೇ ಮಾಧ್ಯಮಗಳಲ್ಲಿ ತಪ್ಪಾಗಿ ಸುದ್ದಿ ಪ್ರಕಟ ಮಾಡಲಾಗಿದೆ ಎಂದು ಮಹದೇವಪ್ಪ ಹೇಳಿದರು.
ಇದೇ ವೇಳೆ ತಾವು ಪ್ರಸ್ತುತ ಬಾದಾಮಿಗೆ ತೆರಳುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ಹೀಗಾಗಿ ನಾನು ಕೂಡ ಅವರೊಂದಿಗೆ ತೆರಳುತ್ತಿದ್ದೇನೆ. ಅವರ ಪರ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸುತ್ತೇನೆ ಎಂದು ಮಹದೇವಪ್ಪ ಸ್ಪಷ್ಟಪಡಿಸಿದ್ದಾರೆ. 
ಕೇಂದ್ರದಿಂದ ಆದಾಯ ತೆರಿಗೆ ಇಲಾಖೆಯ ದುರ್ಬಳಕೆ: ಸಿಎಂ ಸಿದ್ದರಾಮಯ್ಯ
ಅತ್ತ ಹುಬ್ಬಳ್ಳಿಯಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಆದಾಯ ತೆರಿಗೆ ದಾಳಿ ಮೂಲಕ ಕಾಂಗ್ರೆಸ್ ಮುಖಂಡರನ್ನು ಬೆದರಿಸುವ ಪ್ರಯತ್ನ ನಡೆಸಿದೆ ಎಂದು ಹೇಳಿದರು. ಐಟಿ ದಾಳಿ ಕುರಿತು ಮಾಧ್ಯಮಗಳ ವರದಿ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದು, ಆದಾಯ ತೆರಿಗೆ ಇಲಾಖೆಯನ್ನು ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಕೇವಲ ಕಾಂಗ್ರೆಸ್ ಮುಖಂಡರ ಮೇಲೆ ಮಾತ್ರ ಐಟಿ ದಾಳಿ ನಡೆಯುತ್ತಿದೆ. ಜಗದೀಶ್ ಶೆಟ್ಟರ್, ಯಡಿಯೂರಪ್ಪ ಅವರ ಮನೆ ಮೇಲೇಕೆ ಐಟಿ ದಾಳಿಯಾಗುತ್ತಿಲ್ಲ. ಆದಾಯ ತೆರಿಗೆ ದಾಳಿ ಮೂಲಕ ಕಾಂಗ್ರೆಸ್ ಮುಖಂಡರ ದೃತಿಗೆಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಇಂತಹ ತಂತ್ರಗಾರಿಕೆ ಫಲಿಸದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com