ವಾರದೊಳಗೆ ಹಾಸನ ಜಿಲ್ಲಾಧಿಕಾರಿ ಮತ್ತೆ ವರ್ಗಾವಣೆ, ನೂತನ ಜಿಲ್ಲಾಧಿಕಾರಿಯಾಗಿ ಜಾಫರ್ ನೇಮಕ!

ಹಾಸನ ಜಿಲ್ಲಾಧಿಕಾರಿಗಳನ್ನು ಮತ್ತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ನೂತನ ಜಿಲ್ಲಾಧಿಕಾರಿಗಳಾಗಿ ಪಿಸಿ ಜಾಫರ್ ನೇಮಕವಾಗಿದ್ದಾರೆ.
ವಾರದ ಹಿಂದೆ ಡಿಸಿಯಾಗಿ ಅಧಿಕಾರ ಸ್ವೀಕರಿಸಿದ್ದ ರಂದೀಪ್ (ಸಂಗ್ರಹ ಚಿತ್ರ)
ವಾರದ ಹಿಂದೆ ಡಿಸಿಯಾಗಿ ಅಧಿಕಾರ ಸ್ವೀಕರಿಸಿದ್ದ ರಂದೀಪ್ (ಸಂಗ್ರಹ ಚಿತ್ರ)
ಬೆಂಗಳೂರು: ಹಾಸನ ಜಿಲ್ಲಾಧಿಕಾರಿಗಳನ್ನು ಮತ್ತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ನೂತನ ಜಿಲ್ಲಾಧಿಕಾರಿಗಳಾಗಿ ಪಿಸಿ ಜಾಫರ್ ನೇಮಕವಾಗಿದ್ದಾರೆ.
ಈ ಹಿಂದೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಬಳಿಕ ಜಿಲ್ಲಾಧಿಕಾರಿಯಾಗಿದ್ದ ಡಿ.ರಂದೀಪ್‌ ಅವರನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಬದಲಾಯಿಸಿರುವ ರಾಜ್ಯ ಸರ್ಕಾರ ಇದೀಗ ಡಾ.ಪಿ.ಸಿ.ಜಾಫ‌ರ್‌ ಅವರನ್ನು ನೇಮಿಸಿದೆ. ಇದರೊಂದಿಗೆ ಹಾಸನ ಜಿಲ್ಲಾಧಿಕಾರಿ ವಿವಾದಕ್ಕೆ ತಾತ್ಕಾಲಿಕ ತೆರೆ ಬಿದ್ದಂತಾಗಿದ್ದು, ತಮ್ಮ ವರ್ಗಾವಣೆ ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿ ಸಿದಂತೆ ಹೈಕೋರ್ಟ್‌ ನೀಡುವ ಆದೇಶದ ಮೇಲೆ ಮುಂದಿನ ಬೆಳವಣಿಗೆಗಳು ನಡೆಯಲಿವೆ ಎನ್ನಲಾಗಿದೆ.
ಈ ಹಿಂದೆ ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಜನವರಿ 22ರಂದು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ವರ್ಗಾವಣೆ ಮಾಡಿದ್ದರಿಂದ ಚುನಾವಣಾ ಆಯೋಗ ಈ ವರ್ಗಾವಣೆ ತಡೆಹಿಡಿದಿತ್ತು. ಹೀಗಾಗಿ ಸರ್ಕಾರ ವರ್ಗಾವಣೆ ಆದೇಶವನ್ನು ಹಿಂಪಡೆದಿತ್ತು. ಅನಂತರ ಮಾರ್ಚ್ 8ರಂದು ಮತ್ತೆ ಅವರನ್ನು ವರ್ಗಾವಣೆಗೊಳಿಸಿ ಆ ಜಾಗಕ್ಕೆ ರಂದೀಪ್‌ ಅವರನ್ನು ನೇಮಿಸಲಾಗಿತ್ತು. ಇದೀಗ ಚುನಾವಣಾ ಆಯೋಗದ ನಿರ್ದೇಶನದಂತೆ ರಂದೀಪ್ ಅವರನ್ನು ಕೂಡ ವರ್ಗಾವಣೆ ಮಾಡಲಾಗಿದೆ.
ರಂದೀಪ್‌ ವರ್ಗಾವಣೆ ಸಮರ್ಥನೆ ನೀಡಿದ ಆಯೋಗ
ಕೇವಲ 8 ದಿನದಲ್ಲಿ ಜಿಲ್ಲಾಧಿಕಾರಿ ರಂದೀಪ್ ಅವರ ವರ್ಗಾವಣೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಆಯೋಗ ಸಮರ್ಥನೆ ನೀಡಿದ್ದು, ಚುನಾವಣಾ ಕರ್ತವ್ಯಕ್ಕೆ ಚ್ಯುತಿ ಬರುವ ರೀತಿಯಲ್ಲಿ ನಡೆದುಕೊಂಡಿದ್ದರಿಂದ ಹಾಸನ ಜಿಲ್ಲಾಧಿಕಾರಿ ರಂದೀಪ್‌ ಅವರನ್ನು ವರ್ಗಾವಣೆಗೊಳಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌ ಹೇಳಿದ್ದಾರೆ. ಕೆಲವು ಆಡಳಿತಾತ್ಮಕ ಸೂಕ್ಷ್ಮ ವಿಚಾರಗಳನ್ನು ಬಹಿರಂಗವಾಗಿ ಹೇಳಿಕೊಂಡಿರುವ ಹಾಸನ ಜಿಲ್ಲಾಧಿಕಾರಿ ನಡವಳಿಕೆ ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com