ಪೌರ ಕಾರ್ಮಿಕರ ಬೆಲೆ ನಮಗೆ ಗೊತ್ತು: ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ಪೌರ ಕಾರ್ಮಿಕರ ಶ್ರಮ ಹಾಗೂ ಅವರ ಬೆಲೆ ನಮಗೆ ಗೊತ್ತಿದೆ. ಪೌರ ಕಾರ್ಮಿಕರಿದೆ ಅತೀ ಹೆಚ್ಚು ಪಾವತಿ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಹೇಳಿದ್ದಾರೆ...
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್
Updated on
ಬೆಂಗಳೂರು: ಪೌರ ಕಾರ್ಮಿಕರ ಶ್ರಮ ಹಾಗೂ ಅವರ ಬೆಲೆ ನಮಗೆ ಗೊತ್ತಿದೆ. ಪೌರ ಕಾರ್ಮಿಕರಿದೆ ಅತೀ ಹೆಚ್ಚು ಪಾವತಿ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಹೇಳಿದ್ದಾರೆ. 
'ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್' ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ರಾಜ್ಯದಲ್ಲಿರುವ ಪೌರ ಕಾರ್ಮಿಕರ ಸ್ಥಿತಿಗತಿ ಹಾಗೂ ಅವರ ಸಮಸ್ಯೆಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. 
ವೇತನ ಪಡೆಯುವುದರಲ್ಲಿ ಪೌರ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಿಮಗೆ ತಿಳಿದಿದೆಯೇ?
ಪೌರ ಕಾರ್ಮಿಕರು ಗುತ್ತಿಗೆ ವ್ಯವಸ್ಥೆಯ ಭಾಗವಾಗಿದ್ದು, ವೇತನ ಪಾವತಿ ಕುರಿತು ಈ ಹಿಂದೆ ಕೂಡ ಸಮಸ್ಯೆಗಳಿದ್ದವು. ಕಳೆದ 30 ವರ್ಷಗಳಿಂದಲೂ ಈ ಸಮಸ್ಯೆಗಳಿವೆ. ಆದರೆ, 2017 ಡಿಸೆಂಬರ್ ತಿಂಗಳಿನಲ್ಲಿ ನಾವು ದೊಡ್ಡ ನಿರ್ಧಾರವನ್ನು ಕೈಗೊಂಡಿದ್ದೆವು. ಗುತ್ತಿಗೆ ಪೌರಕಾರ್ಮಿಕರನ್ನು ಬಿಬಿಎಂಪಿ ನೋಡಿಕೊಳ್ಳುತ್ತಿದೆ. ಪೌರ ಕಾರ್ಮಿಕರಿಗೆ ಬಿಬಿಎಂಪಿ ನೇರವಾಗಿ ವೇತನವನ್ನು ಅವರವರ ಖಾತೆಗಳಿಗೇ ಹಾಕುತ್ತಿದೆ. 
ಆದರೂ ವೇತನ ಪಾವತಿಯಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ? 
ಪ್ರತೀ ನೂತನ ವ್ಯವಸ್ಥೆಯಲ್ಲಿಯೂ ಒಂದೊಂದು ಸಮಸ್ಯೆಗಳಿದ್ದೇ ಇರುತ್ತವೆ. ನಮ್ಮಲ್ಲೂ ಸಮಸ್ಯೆಗಳಿವೆ. ಸಮಸ್ಯೆಗಳನ್ನು ಶೀಘ್ರದಲ್ಲಿಯೇ ಪರಿಹರಿಸಲಾಗುತ್ತದೆ. ಬಿಬಿಎಂಪಿಯ ಎಲ್ಲಾ ಪೌರ ಕಾರ್ಮಿಕರಿಗೂ ಸೂಕ್ತ ಸಮಯಕ್ಕೆ ವೇತನವನ್ನು ಪಾವತಿ ಮಾಡಲಾಗುತ್ತದೆ. 
ಸಮಸ್ಯೆಗಳಿಗೆ ನಿಮ್ಮ ಪರಿಹಾರಗಳೇನು? 
ಪ್ರತೀ ಪೌರ ಕಾರ್ಮಿಕರನ ವೇತನ ಪಾವತಿ ಕುರಿತ ಮಾಹಿತಿಯನ್ನು ಬಿಬಿಎಂಪಿ ವೆಬ್'ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ. ಇನ್ನು 2-3 ದಿಗಳಲ್ಲಿ ವಾರ್ಡ್ ಮ್ಯಾಪಿಂಗ್ ಮಾಡಲಾಗುತ್ತದೆ. ಮ್ಯಾಪ್ ನಲ್ಲಿ ಯಾವುದೇ ರಸ್ತೆಯ ಮೇಲೆ ಕ್ಲಿಕ್ ಮಾಡಿದರೂ ಅಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕನ ಹೆಸರು ನಿಮಗೆ ತಿಳಿಯುತ್ತದೆ. ಈ ಮಾಹಿತಿ ಸಾರ್ವಜನಿಕರಿಗೂ ಕೂಡ ಲಭ್ಯವಾಗಲಿದೆ. 
ಉದ್ಯೋಗ ಕಳೆದುಕೊಂಡ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುತ್ತೀರಾ? 
ಈ ಬಗ್ಗೆ ಈಗಾಗಲೇ ನಾವು ಸ್ಪಷ್ಟನೆ ನೀಡಿದ್ದೇವೆ. ನಮ್ಮ ವ್ಯವಸ್ಥೆಯಲ್ಲಿ ಭಾಗವಾಗದೇ ಇರುವ 3,000 ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದಿಲ್ಲ. ಕೆಲವರು ಇಲ್ಲಸಲ್ಲದ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆ. ಒಬ್ಬ ಪೌರಕಾರ್ಮಿಕನ ಹೆಸರಿನಲ್ಲಿ 2ರಿಂದ ಹೆಚ್ಚು ಬ್ಯಾಂಕ್ ಖಾತೆಗಳಿವೆ. ಅಂತಹವರಿಗೆ ನಾವು ವೇತನ ನೀಡುವುದಿಲ್ಲ. 
1 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಬೆಂಗಳೂರಿನಂತಹ ನಗರದಲ್ಲಿ 18,000 ಪೌರಕಾರ್ಮಿಕರು ಸಾಕಾಗುತ್ತದೆಯೇ? 
ಪ್ರತೀ ರಸ್ತೆ ಕುರಿತು ಹಾಗೂ ಮನೆ ಮನೆಗಳಲ್ಲಿ ಸಂಗ್ರಹಿಸುತ್ತಿರುವ ಕಸದ ಕುರಿತು ನಮ್ಮ ಬಳಿ ಮಾಹಿತಿಗಳಿವೆ. ವೈಜ್ಞಾನಿಕ ವರದಿಗಳ ಬಳಿಕ ಪೌರಕಾರ್ಮಿಕರ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. ರಿಂಗ್ ರೋಡ್ ಹಾಗೂ ಇತರೆ ಪ್ರಮುಖ ರಸ್ತೆಗಳಲ್ಲಿ ಮೆಕಾನಿಕಲ್ ಸ್ವೀಪಿಂಗ್ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಸಂಚಾರ ದಟ್ಟಣೆ ಹೊಂದಿರುವ ಇಂತಹ ರಸ್ತೆಗಳಲ್ಲಿ ಪೌರ ಕಾರ್ಮಿಕರನ್ನು ನೇಮಿಸುವುದಿಲ್ಲ. 
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಸೂಕ್ತ ರೀತಿಯಲ್ಲಿ ವೇತನ ಪಾವತಿ ಮಾಡಲಾಗುತ್ತಿದೆಯೇ? 
ನನಗೆ ಅರಿವಿರುವಂತೆ ದೇಶದಲ್ಲಿಯೇ ಅತೀ ಹೆಚ್ಚು ರೂ.15,000 ಪೌರ ಕಾರ್ಮಿಕನಿಗೆ ಪಾವತಿ ಮಾಡಲಾಗುತ್ತಿದೆ. ಮೆಟ್ರೋದಲ್ಲಿಯೂ ಇಷ್ಟೊಂದು ವೇತನವನ್ನು ನೀಡುತ್ತಿಲ್ಲ. ಪೌರ ಕಾರ್ಮಿಕರ ಬೆಲೆ ನಮಗೆ ಗೊತ್ತಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com