ಮೇಕೆದಾಟು ಯೋಜನೆಗೆ ಕರ್ನಾಟಕ, ತಮಿಳುನಾಡು ಭಾಗದ ರೈತರ ಒತ್ತಾಯ
ಮೈಸೂರು: ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಮತ್ತು ತಮಿಳು ನಾಡು ಸರ್ಕಾರಗಳು ಇನ್ನೂ ನಿಯಮ ರೂಪಿಸಿಲ್ಲ. ಯೋಜನೆ ಜಾರಿಗೆ ಬರುವ ಬಗ್ಗೆ ಗೊಂದಲದಲ್ಲಿದೆ. ಆದರೆ ಕಾವೇರಿ ನದಿ ತೀರದಲ್ಲಿರುವ ಗ್ರಾಮಸ್ಥರು ಮತ್ತು ರೈತರು ನೀರು ನಿಷ್ಪ್ರಯೋಜಕವಾಗುತ್ತಿದ್ದು, ಜಲಾಶಯ ನಿರ್ಮಿಸಿದರೆ ಒಳ್ಳೆಯದು ಎಂದು ಹೇಳುತ್ತಿದ್ದಾರೆ.
ಮೆಟ್ಟೂರು ಜಲಾಶಯದಿಂದ ಹೊರಬರುವ ನೀರು ನಿರುಪಯೋಗವಾಗಿ ಸಮುದ್ರ ಸೇರುತ್ತಿರುವುದು ನೋಡಿದರೆ ತೀರದ ರೈತರಿಗೆ ತೀವ್ರ ಬೇಸರ ತರುತ್ತದೆ. ಒಂದೆಡೆ ನೀರು ನಿಷ್ಪ್ರಯೋಜಕವಾಗಿ ಸಮುದ್ರ ಸೇರುತ್ತಿದ್ದರೆ ಕಾವೇರಿ ಜಲಾನಯನ ಪ್ರದೇಶದ ರೈತರು ನೀರಿಲ್ಲದೆ ಸರಿಯಾಗಿ ಬೆಳೆ ಬೆಳೆಯಲು ಆಗದೆ ಕಷ್ಟಪಡುತ್ತಿದ್ದಾರೆ.
ಕಬಿನಿ ಮತ್ತು ಕೆಆರ್ ಎಸ್ ಜಲಾಶಯಗಳಿಂದ ಕಳೆದ ಕೆಲ ವಾರಗಳಲ್ಲಿ ತಮಿಳುನಾಡಿಗೆ 155 ಟಿಎಂಸಿ ನೀರನ್ನು ಬಿಡಲಾಗಿದ್ದು ಕೊಡಗು ಮತ್ತು ಕೇರಳದ ವಯನಾಡಿನಲ್ಲಿ ಸತತ ಮಳೆಯಿಂದಾಗಿ ಜಲಾಶಯಗಳಿಂದ 1 ಲಕ್ಷ ಕ್ಯೂಸೆಕ್ಸ್ ನೀರು ಹೊರಹಾಕಲಾಗಿದೆ.
ಮೆಟ್ಟೂರು ಜಲಾಶಯದಲ್ಲಿ 93.47 ಟಿಎಂಸಿ ನೀರು ಸಂಗ್ರಹವಾಗಿದ್ದು, ಅದು ಕೆಆರ್ ಎಸ್ ಜಲಾಶಯದ ಸಾಮರ್ಥ್ಯಕ್ಕಿಂತ ದುಪ್ಪಟ್ಟಾಗಿದೆ. ನೀರಿನ ಒಳಹರಿವು ಅಧಿಕವಾಗಿರುವುದರಿಂದ ತಮಿಳುನಾಡು ರಾಜ್ಯದ ಅಧಿಕಾರಿಗಳು ಜುಲೈ 15ರಂದು ನೀರಿನ ಮಟ್ಟವನ್ನು ನಿಯಂತ್ರಿಸುವ ಬಾಗಿಲನ್ನು ತೆರೆದಿದ್ದರು. ಧಾರಾಕಾರ ಮಳೆಯಿಂದಾಗಿ ಜಲಾಶಯ ತುಂಬಿದ್ದರಿಂದ ಶ್ರೀರಂಗಪಟ್ಟಣ ಪಕ್ಷಿಧಾಮ ಮತ್ತು ಹೊಗೆನೆಕಲ್ ಜಲಪಾತವನ್ನು ಪ್ರವಾಸಿಗರಿಗೆ ಮುಚ್ಚಲಾಗಿತ್ತು.
ಎರಡೂ ರಾಜ್ಯಗಳ ಸುಮಾರು 20 ಗ್ರಾಮಗಳ ರೈತರು ಕಾವೇರಿ ನದಿಗೆ ಆದಿ ಪೆರುಕ್ಕು ಪೂಜೆ ಸಲ್ಲಿಸಿದ್ದರು. 5 ವರ್ಷಗಳ ನಂತರ ಕಾವೇರಿ ನದಿ ತುಂಬಿ ಹರಿಯುತ್ತಿರುವುದು ನೋಡಿದರೆ ಖುಷಿಯಾಗುತ್ತಿದೆ. ನದಿ ನೀರನ್ನು ನಂಬಿರುವ ಲಕ್ಷಾಂತರ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ತಮಿಳುನಾಡು ಭಾಗದ ರೈತ ವೆಲ್ಲಿ ಹೇಳುತ್ತಾರೆ.
ಕೇಂದ್ರ ಸಚಿವ ಗಡ್ಕರಿ ಭೇಟಿ ಮಾಡಿದ ಶಿವಕುಮಾರ್: ಮೇಕೆದಾಟು ಕುಡಿಯುವ ನೀರು ಮತ್ತು ಜಲ ವಿದ್ಯುತ್ ಯೋಜನೆಯನ್ನು ಕಾವೇರಿ ಜಲಾನಯನ ಪ್ರದೇಶದಲ್ಲಿ ಜಾರಿಗೆ ತರಲು ಕರ್ನಾಟಕ ಸರ್ಕಾರ ಮತ್ತೆ ಪ್ರಯತ್ನಿಸುತ್ತಿದೆ. ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಕೇಂದ್ರ ನೀರಾವರಿ ಖಾತೆ ಸಚಿವ ನಿತಿನ್ ಗಡ್ಕರಿಯನ್ನು ಭೇಟಿ ಮಾಡಿ ಯೋಜನೆಯ ಸಾಧ್ಯತಾ ವರದಿಯನ್ನು ತ್ವರಿತವಾಗಿ ಅನುಮೋದನೆ ಮಾಡಬೇಕೆಂದು ಹೇಳಿದ್ದಾರೆ.
5,912 ಕೋಟಿ ರೂಪಾಯಿಗಳ ಯೋಜನೆ ಇದಾಗಿದ್ದು, ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮೇಕೆದಾಟುವಿನಲ್ಲಿ 65 ಟಿಎಂಸಿ ನೀರು ಸಂಗ್ರಹಣೆ ಸಾಮರ್ಥ್ಯದ ಸಮಾನಾಂತರ ಜಲಾಶಯವನ್ನು ನಿರ್ಮಿಸುವುದು ಕೂಡ ಇದರಲ್ಲಿ ಸೇರಿದೆ. ಇದರಿಂದ ಬೆಂಗಳೂರು ಮತ್ತು ಸುತ್ತಮುತ್ತಲ ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸುವುದು ಮಾತ್ರವಲ್ಲದೆ 400 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ನ್ನು ಉತ್ಪಾದಿಸಬಲ್ಲುದು. ತನ್ನ ಪಾಲಿನ ನೀರನ್ನು ಮಾತ್ರ ಇದಕ್ಕೆ ಬಳಸುವುದಾಗಿ ಕರ್ನಾಟಕ ಹೇಳುತ್ತಿದ್ದರೂ ತಮಿಳುನಾಡು ಸರ್ಕಾರ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಯೋಜನೆಗೆ ಅನುಮೋದನೆ ನೀಡಬಾರದೆಂದು ಹೇಳುತ್ತಿದೆ.


