ಪದವಿ ವಿದ್ಯಾರ್ಥಿಗಳಿಗೆ ಈ ವರ್ಷವೂ ಸಿಗದ ಉಚಿತ ಲ್ಯಾಪ್ ಟಾಪ್; ಸರ್ಕಾರದಲ್ಲಿ ಹಣದ ಕೊರತೆ

ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾಜಿ ಮುಖ್ಯಮಂತ್ರಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದ ಉಚಿತ ಲ್ಯಾಪ್ ಟಾಪ್ ಯೋಜನೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ಬರಬೇಕಾಗಿದ್ದು ಹಣದ ಕೊರತೆಯಿಂದ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

ಈ ಹಿಂದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು ಮಾತ್ರ ಯೋಜನೆಗೆ ಅರ್ಹರಾಗಿದ್ದರು. ನಂತರ ಅದನ್ನು ಎಲ್ಲಾ ವಿದ್ಯಾರ್ಥಿಗಳಿಗೆ ವಿಸ್ತರಿಸಲಾಗಿತ್ತು. ಕಾಲೇಜು ಶಿಕ್ಷಣ ಆಯುಕ್ತ ಡಾ ಮಂಜುಳಾ ಎನ್ ಮಾತನಾಡಿ, ಹಣದ ಕೊರತೆಯಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಉಚಿತ ಲ್ಯಾಪ್ ಟಾಪ್ ಹಂಚಿಕೆಯನ್ನು ಸ್ಥಗಿತಗೊಳಿಸಲಾಗಿದೆ. ನಮ್ಮಲ್ಲಿ ಕೇವಲ 90 ಕೋಟಿ ರೂಪಾಯಿಗಳಿದ್ದು ಇದಕ್ಕೆ 280 ಕೋಟಿ ರೂಪಾಯಿಗಳಿಗೂ ಅಧಿಕ ಬೇಕಾಗಿದೆ ಎಂದರು.

ಉಚಿತ ಲ್ಯಾಪ್ ಟಾಪ್ ನ್ನು ಕಳೆದ ವರ್ಷ ಕೂಡ ನೀಡಿರಲಿಲ್ಲ. ಅಗತ್ಯ ಅನುದಾನ ಸಿಕ್ಕಿದರೂ ಕೂಡ ಶಿಕ್ಷಣ ಇಲಾಖೆ ಕರೆದ ಟೆಂಡರ್ ಗೆ ಯಾವ ಬಿಡ್ಡರ್ ಗಳು ಸಹ ಪ್ರತಿಕ್ರಿಯೆ ನೀಡಿರಲಿಲ್ಲ. ಟೆಂಡರ್ ಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಮುಂದೂಡಿದರೂ ಸಹ ಯಾವ ಕಂಪೆನಿ ಸಹ ಮುಂದೆ ಬರಲಿಲ್ಲ. ಹೀಗಾಗಿ ನಾವು ಕಳೆದ ವರ್ಷ ಟೆಂಡರ್ ನ್ನು ಮುಚ್ಚಬೇಕಾಯಿತು ಎಂದು ಮಂಜುಳಾ ತಿಳಿಸಿದರು.

ಈ ಮಧ್ಯೆ ಉನ್ನತ ಶಿಕ್ಷಣ ಸಚಿವ ಜಿ ಟಿ ದೇವೇಗೌಡ, ಈ ಶೈಕ್ಷಣಿಕ ಸಾಲಿನಲ್ಲಿ ಯೋಜನೆ ಜಾರಿಗೆ ಹಣವನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಕೇಳಿದ್ದೇವೆ. ಲ್ಯಾಪ್ ಟಾಪ್ ಗಳ ಪೂರೈಕೆಗೆ ಟೆಂಡರ್ ಗಳ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ ಎಂದರು. ಉಚಿತ ಲ್ಯಾಪ್ ಟಾಪ್ ಯೋಜನೆಯಡಿ ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ಒಳಗೊಳ್ಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com