ಮೈಸೂರು ರೇಷ್ಮೆ ಸೀರೆಗಾಗಿ ಬಂದ ಸ್ತ್ರೀಯರು ಬೇಸ್ತು: ನೀತಿ ಸಂಹಿತೆ ನೆಪ ಹೇಳಿದ ಸರ್ಕಾರ, ಪ್ರತಿಭಟನೆ

ಸ್ವಾತಂತ್ರ್ಯೋತ್ಸವದ ಅಂಗವಾಗಿ ರಿಯಾಯಿತಿ ದರದಲ್ಲಿ ಮೈಸೂರು ರೇಷ್ಮೆ ಸೀರಿ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದನ್ನು ನಂಬಿ ನಗರದ ಎಂ.ಜಿ. ರಸ್ತೆಯ ಕೆಎಸ್ಐಸಿ (ಮೈಸೂರು ಸಿಲ್ಕ್ ಎಂಪೋರಿಯಂ) ಕೇಂದ್ರಕ್ಕೆ ಲಗ್ಗೆ ಇಟ್ಟ ನೂರಾರು...
ಮೈಸೂರು ರೇಷ್ಮೆ ಸೀರೆಗಾಗಿ ಬಂದ ಸ್ತ್ರೀಯರು ಬೇಸ್ತು: ನೀತಿ ಸಂಹಿತೆ ನೆಪ ಹೇಳಿದ ಸರ್ಕಾರ, ಪ್ರತಿಭಟನೆ
ಮೈಸೂರು ರೇಷ್ಮೆ ಸೀರೆಗಾಗಿ ಬಂದ ಸ್ತ್ರೀಯರು ಬೇಸ್ತು: ನೀತಿ ಸಂಹಿತೆ ನೆಪ ಹೇಳಿದ ಸರ್ಕಾರ, ಪ್ರತಿಭಟನೆ
ಬೆಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ರಿಯಾಯಿತಿ ದರದಲ್ಲಿ ಮೈಸೂರು ರೇಷ್ಮೆ ಸೀರಿ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದನ್ನು ನಂಬಿ ನಗರದ ಎಂ.ಜಿ. ರಸ್ತೆಯ ಕೆಎಸ್ಐಸಿ (ಮೈಸೂರು ಸಿಲ್ಕ್ ಎಂಪೋರಿಯಂ) ಕೇಂದ್ರಕ್ಕೆ ಲಗ್ಗೆ ಇಟ್ಟ ನೂರಾರು ಮಹಿಳೆಯರು ವಿತರಣೆ ದಿನಾಂಕ ಮುಂದೂಡಿರುವ ವಿಚಾರದ ತಿಳಿದು ಬುಧವಾರ ಪ್ರತಿಭಟನೆ ನಡೆಸಿದರು. 
ನಗರದ ಮಹಾತ್ಮ ಗಾಂಧಿ ರಸ್ತೆ ಬಳಿಯ ಕರ್ನಾಟಕ ಸಿಲ್ಕ್ ಉತ್ಪಾದನಾ ಕೇಂದ್ರದಲ್ಲಿ ವರಲಕ್ಷ್ಮೀ ಹಬ್ಬ ಮತ್ತು ಸ್ವಾತಂತ್ರ್ಯೋತ್ಸವದ ಅಂಗವಾಗಿ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು. ಆ.15 ರಂದು ಸೀರೆಗಳ ಮಾರಾಟ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿತ್ತು. 
ಈ ಹಿನ್ನಲೆಯಲ್ಲಿ ನಿನ್ನೆ ಬೆಳಿಗ್ಗೆನಿಂದಲೇ ಕರ್ನಾಟಕ ಸಿಲ್ಕ್ ಉತ್ಪಾದನಾ ಕೇಂದ್ರಕ್ಕೆ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಧಾವಿಸಿದ್ದರು. ಪ್ರತಿಯೊಬ್ಬರು ರಿಯಾಯಿತಿ ದರದಲ್ಲಿ ಸೀರೆ ಖರೀದಿಸಲು ಕೈಯಲ್ಲಿ ಆಧಾರ್ ಕಾರ್ಡ್ ಹಿಡಿದುಕೊಕಂಡು ಬಂದಿದ್ದರು. ಆದರೆ, ಕೇಂದ್ರದ ಮುಂದೆ ರಿಯಾಯಿತಿ ದರದ ಸೀರೆ ಮಾರಾಟವನ್ನು ಮುಂದೂಡಲಾಗಿದೆ ಎಂಬ ಫಲಕ ತೂಗು ಹಾಕಿರುವುದನ್ನು ಕಂಡ ಮಹಿಳೆಯರು ಅಸಮಾಧಾನಗೊಂಡರು. 
ಸಿಲ್ಕ್ ಉತ್ಪಾದನಾ ಕೇಂದ್ರದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಕೆಎಸ್ಐಸಿ ವ್ಯವಸ್ಥಾಪಕ ಭಾನುಪ್ರಕಾಶ್, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನಲೆಯಲ್ಲಿ ರಿಯಾಯಿತಿ ದರದಲ್ಲಿ ಸೀರೆ ಮಾರಾಟ ಮಾಡುವುದನ್ನು ತಾತ್ಕಾಲಿಕವಾಗಿ ಮುಂದೂಡಿದ್ದೇವೆ. ನೀತಿ ಸಂಹಿತೆ ವಿಚಾರ ನಿನ್ನೆ ರಾತ್ರಿಯಷ್ಟೇ ನಮ್ಮ ಗಮನಕ್ಕೆ ಬಂದಿದೆ ಎಂದು ಸಮಜಾಯಿಷಿ ನೀಡಿದರೂ, ಜನರು ಸಮಾಧಾನಗೊಳ್ಳಲಿಲ್ಲ. 
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಚಿವ ಸಾ.ರಾ. ಮಹೇಶ್ ಅವರು, ಸ್ವಾತಂತ್ರ್ಯೋತ್ಸವ ಮತ್ತು ಮರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ರಿಯಾಯಿತಿ ದರದಲ್ಲಿ ಮೈಸೂರು ಸಿಲ್ಕ್ ಸೀರೆ ಮಾರಾಟ ಮಾಡುವುದಾಗಿ ಘೋಷಣೆ ಮಾಡಿದ್ದು ನಿಜ. ಆದರೆ, ದಿನಾಂಕವನ್ನು ಪ್ರಕಟಿಸಿರಲಿಲ್ಲ. ಮಹಿಳೆಯರು ತಪ್ಪಾಗಿ ಅರ್ಥೈಸಿಕೊಂಡು ಕೆಎಸ್ಐಸಿ ಕೇಂದ್ರದ ಬಳಿಗೆ ಹೋಗಿದ್ದಾರೆ. ಪ್ರಸ್ತುತ ಕೆಎಸ್ಐಸಿ ರಿಯಾಯಿತಿ ದರದಲ್ಲಿಯೇ ಸೀರೆಗಳನ್ನು ಮಾರಾಟ ಮಾಡುತ್ತಿದೆ. ಆದರೂ ಚುನಾವಮೆ ನೀತಿ ಸಂಹಿತೆ ಅಡ್ಡ ಬರುತ್ತದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸೂಚನೆ ನೀಡಿದ್ದೆವು. ಸ್ವಾತಂತ್ರ್ಯ ದಿನದ ಅಂಗವಾಗಿ ಆ.20ರಂದು ಹಾಗೂ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಆ.21 ರಂದು ರಿಯಾಯಿತಿ ದರದಲ್ಲಿ ಸೀರೆ ಮಾರಾಟವಿದ್ದು. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಧಿಕೃತವಾಗಿ ಉದ್ಘಾಟನೆ ಮಾಡಲಿದ್ದಾರೆ. ಅಲ್ಲಿಯವರೆಗೂ ಸಾರ್ವಜನಿಕರು ಕಾಯಬೇಕು. ರೂ.7 ರಿಂದ 9 ಸಾವಿರ ಮೊತ್ತದ ಸೀರೆಯನ್ನು ಕೇವಲ ರೂ.4,500ಕ್ಕೆ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com