ಪ್ರವಾಹ ಪೀಡಿತ ಕೊಡಗಿನಲ್ಲಿ ಕೈಗೊಳ್ಳಬೇಕಾದ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗೆ ಹೆಚ್ಚುವರಿ ಸೇನಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಡಿದ ಮನವಿಗೆ ಸ್ಪಂದಿಸಿದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಗತ್ಯ ಸವಲತ್ತು ಒದಗಿಸಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಚಿವರನ್ನು ಅಭಿನಂದಿಸಿದ್ದಾರೆ. ಜತೆಗೆ, ಜಿಲ್ಲೆಯ ಪರಿಸ್ಥಿತಿಯನ್ನು ಅವಲೋಕಿಸಲು, ವೈಮಾನಿಕ ಸಮೀಕ್ಷೆ ನಡೆಸಲು ವಾಯುಪಡೆಯ ಹೆಲಿಕಾಪ್ಟರ್ ಒದಗಿಸುವಂತೆಯೂ ಅವರು ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಕೇಂದ್ರ ಸುಮಾರು 200ಕ್ಕೂ ಅಧಿಕ ಮಂದಿಯ ಎನ್ ಡಿಆರ್ ಎಫ್ ತಂಡವನ್ನು ರಾಜ್ಯಕ್ಕೆ ರವಾನೆ ಮಾಡಿದೆ. ಅಲ್ಲದೆ ಇಂದು ಬೆಳಗ್ಗೆ ಸೇನೆಯ ಒಂದು ಹೆಲಿಕಾಪ್ಟರ್ ಬಂದಿಳಿದಿದ್ದು, ಪ್ರಸ್ತುತ ಪ್ರತೀಕೂಲ ಹವಾಮಾನ ಇರುವುದರಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಲ್ಲ. ಹವಾಮಾನ ಬದಲಾಗುತ್ತಿದ್ದಂತೆಯೇ ಕಾಪ್ಚರ್ ಕಾರ್ಯಾಚರಣೆಗೆಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.