ಕೊಡಗು ಪ್ರವಾಹ: ಪ್ರಕೃತಿ ವಿಕೋಪವಲ್ಲ, ಮನುಷ್ಯನ ಸ್ವಯಂಕೃತ ಅಪರಾಧ: ಪರಿಸರ ತಜ್ಞರು

ದಕ್ಷಿಣದ ಕಾಶ್ಮೀರ, ಭೂಲೋಕದ ಪ್ರಕೃತಿ ಸ್ವರ್ಗ ಎಂದು ಹೆಸರಾಗಿರುವ ಕೊಡಗು ಇಂದು ಅಕ್ಷರಶಃ ನರಕದ ರಾಜಧಾನಿಯಾಗಿ ಮಾರ್ಪಟ್ಟಿದ್ದು, ಭಾಗಶಃ ಕೊಡಗು ಪ್ರವಾಹದಲ್ಲಿ ಮುಳುಗಿದೆ. ಆದರೆ ಕೊಡಗಿನ ಈ ಸ್ಥಿತಿಗೆ ಮನುಷ್ಯನ ಸ್ವಯಂಕೃತ ಅಪರಾಧವೇ ಕಾರಣ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಡಗು: ದಕ್ಷಿಣದ ಕಾಶ್ಮೀರ, ಭೂಲೋಕದ ಪ್ರಕೃತಿ ಸ್ವರ್ಗ ಎಂದು ಹೆಸರಾಗಿರುವ ಕೊಡಗು ಇಂದು ಅಕ್ಷರಶಃ ನರಕದ ರಾಜಧಾನಿಯಾಗಿ ಮಾರ್ಪಟ್ಟಿದ್ದು, ಭಾಗಶಃ ಕೊಡಗು ಪ್ರವಾಹದಲ್ಲಿ ಮುಳುಗಿದೆ. ಆದರೆ ಕೊಡಗಿನ ಈ ಸ್ಥಿತಿಗೆ ಮನುಷ್ಯನ ಸ್ವಯಂಕೃತ ಅಪರಾಧವೇ ಕಾರಣ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹೌದು..ಮಂಜಿನ ನಗರಿ ಮಡಿಕೇರಿಯಲ್ಲಿ ನರಕಸದೃಶ ವಾತಾವರಣ ಸೃಷ್ಟಿಯಾಗಿದ್ದು, ಎಲ್ಲಿ ನೋಡಿದರೂ ಕುಸಿದ ಗುಡ್ಡ, ಕಾಫಿ ತೋಟಗಳು, ಧರೆಗುರುಳಿದ ಮನೆಗಳು, ಭೂಮಂಡಲನ್ನೇ ಒಂದು ಮಾಡಿದ ಜಲರಾಶಿ, ಕುಸಿದ, ಬಿರುಕುಬಿಟ್ಟ ರಸ್ತೆಗಳು, ಅಡ್ಡಾದಿಡ್ಡಿ ನೆಲಕ್ಕುರಳಿದ ಮರಗಳು, ವಿದ್ಯುತ್ ಕಂಬಗಳು, ನೀರಿನಲ್ಲಿ ಮುಳುಗಡೆಯಾದ ವಸತಿ ಪ್ರದೇಶಗಳು, ಮುಗಿಲು ಮುಟ್ಟಿದ ಆಕ್ರಂದನ, ಒಂದೇ ಊರಲ್ಲಿ ಇದ್ದರೂ ತಮ್ಮವರನ್ನು ಸಂಪರ್ಕಿಸಲಾಗದೆ ಅಸಹಾಯಕತೆಯಿಂದ ಜನ ಕಣ್ಣೀರಿಡುತ್ತಿದ್ದಾರೆ. 
ಕೊಡಗಿಗೆ ಮಳೆ ಹೊಸತೇನಲ್ಲ. ಈ ಹಿಂದೆ ಭಾರಿ ಪ್ರಮಾಣದ ಕುಂಭದ್ರೋಣ ಮಳೆ ಕೊಡಗನ್ನು ತೊಯ್ದಿದೆ. ಆದರೆ ಆಗ ಇಷ್ಟರ ಮಟ್ಟಿಗೆ ತೊಂದೆರಯಾಗಿರಲಿಲ್ಲ. ಭೂಕುಸಿತದ ಆತಂಕವಿರಲಿಲ್ಲ. ಬೆಟ್ಟಗುಡ್ಡಗಳ ನಡುವೆ, ನದಿ ಬದಿಯಲ್ಲಿ ಯಾವುದೇ ಭಯವಿಲ್ಲದೆ ಒಂಟಿ ಮನೆಗಳನ್ನು ಕಟ್ಟಿಕೊಂಡು ಇಲ್ಲಿನ ಜನ ಬದುಕು ಸವೆಸಿದ್ದಾರೆ. ಆದರೆ ಇದು ಇದೇ ಜನ ತಾವು ಕಷ್ಟಪಟ್ಟು ಮಾಡಿದ ಮನೆ, ತೋಟ, ಚಿನ್ನಾಭರಣ ವಾಹನ ಎಲ್ಲವನ್ನೂ ಕಳೆದುಕೊಂಡು ಜೀವ ಉಳಿದರೆ ಸಾಕೆಂದು ಆಶ್ರಯ ಬೇಡಿ ಗಂಜಿಕೇಂದ್ರ ಸೇರಿದ್ದಾರೆ.  ಕಳೆದ ಕೆಲವು ದಶಕಗಳಿಂದ ಇಲ್ಲಿ ವಾಡಿಕೆಯ ಮಳೆ ಸುರಿಯುತ್ತಿರಲಿಲ್ಲ. ಹೀಗಾಗಿ ಇಲ್ಲಿನ ಜನ ಮಳೆಯ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ನದಿಗಳು ಉಕ್ಕಿ ಹರಿಯದೆ ಕೆಲವು ವರ್ಷಗಳೇ ಕಳೆದು ಹೋಗಿದ್ದವು. 
ವಾಣಿಜ್ಯೀಕರಣ ತಂದಿಟ್ಟ ಅಪಾಯ ಇದು
ಕಳೆದೊಂದು ದಶಕದಿಂದೀಚೆಗೆ ಕೊಡಗು ಆಧುನಿಕ, ವಾಣಿಜ್ಯೀಕರಣದ ಬದುಕು ತೆರೆದುಕೊಳ್ಳತೊಡಗಿತು. ಹಿಂದಿನವರು ಯಾವುದನ್ನು ಮಾಡಬೇಡಿ ಎಂದಿದ್ದರೋ ಅದನ್ನೇ ಮಾಡತೊಡಗಿದ್ದರು. ನದಿ ದಡಗಳು ಒತ್ತುವರಿಯಾಗಿ ಮನೆಗಳು ಮೇಲೆದ್ದವು. ಸದಾ ನೀರಿನಾಶ್ರಯವಿದ್ದ ಪ್ರದೇಶಗಳನ್ನು ಭತ್ತದ ಗದ್ದೆಯಾಗಿಸಿ ಬೆಳೆ ಬೆಳೆಯುವಲ್ಲಿ ಹಿರಿಯರು ಸಫಲರಾಗಿದ್ದರು. ಆದರೆ ಅವುಗಳನ್ನು ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡುವ ಕಾರ್ಯಗಳು ನಡೆದವು. ಹೊರಗಿನವರು ಬಂದು ಗುಡ್ಡಪ್ರದೇಶಗಳನ್ನು ಖರೀದಿಸಿ ಅಲ್ಲಿ ಜೆಸಿಬಿ ಬಳಸಿ ರಸ್ತೆಗಳನ್ನು ಮಾಡಿದರು, ಕಟ್ಟಡ ಕಟ್ಟಿ ಹೋಂಸ್ಟೇ, ರೆಸಾರ್ಟ್ ಮಾಡಿ ಹಣ ಸಂಪಾದಿಸುವ ದಾರಿ ಕಂಡುಕೊಂಡರು. ಬೆಟ್ಟಗುಡ್ಡವೆನ್ನದೆ ಮನೆಗಳು ತಲೆ ಎತ್ತಿದವು ಎಂದು ತಜ್ಞರು ಹೇಳಿದ್ದಾರೆ.
ಪರಿಣಾಮ ಅರಣ್ಯ ನಾಶವಾಯಿತು, ಕೃಷಿ ಮಾಯವಾಯಿತು. ಪಟ್ಟಣ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಮನೆಗಳಾದವು. ನೀರು ಹರಿದು ಹೋಗಲು ಅವಕಾಶವಿಲ್ಲದಂತೆ ಕಟ್ಟಡಗಳು ಎದ್ದು ನಿಂತ ಪರಿಣಾಮ ಒಂದಷ್ಟು ಪ್ರದೇಶಗಳು ಜಲಾವೃತವಾಗುವಂತಾಗಿದೆ. ಗುಡ್ಡಗಳನ್ನು ಅಗೆದು ಹಳ್ಳ, ಕಂದಕಗಳಿಗೆ ಮಣ್ಣು ಸುರಿದು ಮಾಡಿದ ರಸ್ತೆಗಳು ಇಲ್ಲಿ ತನಕ ಏನೂ ಆಗಿರಲಿಲ್ಲ. ಆದರೆ ಈ ಬಾರಿಯ ಕುಂಭದ್ರೋಣ ಮಳೆಗೆ ಗುಡ್ಡ ಕುಸಿಯುತ್ತಿದ್ದಂತೆಯೇ ರಸ್ತೆಗಳು ಕುಸಿದಿವೆ, ಬಿರುಕು ಬಿಟ್ಟಿವೆ. ಒಟ್ಟಾರೆ ಕೊಡಗಿಗೆ ಕೊಡಗೇ ನಲುಗಿ ಹೋಗಿದೆ ಎಂದು ಭೂವಿಜ್ಞಾನಿ ಜಿ ಸೀತಾರಾಮ್ ಹೇಳಿದ್ದಾರೆ. 
ಅರಣ್ಯ ನಾಶ, ಕೃಷಿ ಭೂಮಿಯನ್ನು ರೆಸಾರ್ಟ್, ಮನೆಗಳಿಗಾಗಿ ದುರ್ಬಳಕೆ ಮಾಡಿಕೊಂಡಿದ್ದರಿಂದ ಮಣ್ಣು ತನ್ನ ಶಕ್ತಿಕಳೆದುಕೊಂಡು ಮಣ್ಣಿನ ಸವಕಳಿ ಹೆಚ್ಚಾಗಿದೆ. ಗಿಡ ಮರಗಳು ತಮ್ಮ ಬೇರಿನ ಮೂಲಕ ಮಣ್ಣನ್ನು ಹಿಡಿದಿಟ್ಟುಕೊಳ್ಳುತ್ತವೆ. ಆದರೆ ಇಲ್ಲಿ ಆ ಮರಗಳನ್ನೇ ಕಡಿದು ನಾಶ ಮಾಡಲಾಗಿದೆ. ಇಂತಹುದೇ ರೀತಿಯ ಕಾರ್ಯಗಳು ಊಟಿಯಲ್ಲೂ ಮಾಡಲಾಗುತ್ತಿದೆ. ಇದು ನಿಜಕ್ಕೂ ಪ್ರಕೃತಿ ವಿಕೋಪವನ್ನು ಮಾನವ ಸ್ವಯಂಕೃತ ಅಪರಾಧ ಎಂದು ಮತ್ತೋರ್ವ ಹಿರಿಯ ಭೂ ವಿಜ್ಞಾನಿ ವಿಜಯಲಕ್ಷ್ಮಿ ಹೇಳಿದ್ದಾರೆ. ಅಂತೆಯೇ ಲೇಔಟ್, ರೆಸಾರ್ಟ್ ಮನೆಗಳ ಬದಲಿಗೆ ಇಲ್ಲಿನ ಭೂಮಿಯನ್ನು ಕಾಫಿ ಮತ್ತು ಟೀ ಎಸ್ಟೇಟ್ ನಂತಹ ಕೃಷಿಕ ಉಪಯೋಗಕ್ಕೆ ಬಳಕೆ ಮಾಡಿದಕೆ ಮಾಡಿದರೆ ಖಂಡಿತಾ ಹಳೆಯ ವೈಭವಕ್ಕೆ ಕೊಡಗು ಮರಳುತ್ತದೆ ಎಂದೂ ಅವರು ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com