ಕೊಡಗು ಪ್ರವಾಹ: ಅತಂತ್ರ ಸ್ಥಿತಿಯಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ ಕಾರ್ಮಿಕರು
ಭಾರೀ ಪ್ರವಾಹ, ಭೂ ಕುಸಿತದಿಂದಾಗಿ ಕೊಡಗು ಜಿಲ್ಲೆ ತತ್ತರಗೊಂಡಿದ್ದು, ಕಾಫಿ ಎಸ್ಟೇಟ್ ಗಳಲ್ಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸಿ ಬಂದ ಕೂಲಿಯಿಂದ ಜೀವನ ನಡೆಸುತ್ತಿದ್ದ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ಜನರ ಜೀವನ ಅತಂತ್ರ ಸ್ಥಿತಿಗೆ ತಲುಪಿಸಿದೆ...
ಕೊಡಗು ಪ್ರವಾಹ: ಅತಂತ್ರ ಸ್ಥಿತಿಯಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ ಕಾರ್ಮಿಕರು
ಮಡಿಕೇರಿ: ಭಾರೀ ಪ್ರವಾಹ, ಭೂ ಕುಸಿತದಿಂದಾಗಿ ಕೊಡಗು ಜಿಲ್ಲೆ ತತ್ತರಗೊಂಡಿದ್ದು, ಕಾಫಿ ಎಸ್ಟೇಟ್ ಗಳಲ್ಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸಿ ಬಂದ ಕೂಲಿಯಿಂದ ಜೀವನ ನಡೆಸುತ್ತಿದ್ದ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ಜನರ ಜೀವನ ಅತಂತ್ರ ಸ್ಥಿತಿಗೆ ತಲುಪಿಸಿದೆ.
ಮಾರಣಾತಿಂತ ಮಳೆ ಜಿಲ್ಲೆಯಲ್ಲಿದ್ದ ಪ್ರತಿಯೊಬ್ಬರ ಮೇಲೂ ಗಂಭೀರ ಪರಿಣಾಮ ಬೀರಿದೆ. ಮಳೆ ಆರ್ಭಟ ತಗ್ಗಿರುವ ಹಿನ್ನಲೆಯಲ್ಲಿ ಜನರು ಮತ್ತೆ ತಮ್ಮ ತಮ್ಮ ಜೀವನವನ್ನು ಪುನರ್ ನಿರ್ಮಾಣ ಮಾಡಿಕೊಳ್ಳುವತ್ತ ಮುಖ ಮಾಡಿದ್ದಾರೆ. ಆದರೆ, ಎಸ್ಟೇಟ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ರಾಜ್ಯದ ಜನರಿಗೆ ಮಾತ್ರ ದಿಕ್ಕೇ ತೋಚದಂತಾಗಿದೆ.
ಎಸ್ಟೇಟ್ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ಪ್ರಸ್ತುತ ನಿರಾಶ್ರಿತ ಶಿಬಿರಗಳಿದ್ದು, ಭವಿಷ್ಯದ ಕುರಿತು ತಬ್ಬಿಬ್ಬಾಗಿದ್ದಾರೆ. ಇತರೆ ರಾಜ್ಯಗಳ ಜನರಿಗೆ ಆಶ್ರಯ ಹಾಗೂ ಪರಿಹಾರ ಸಾಮಾಗ್ರಿಗಳನ್ನು ಕೊಡುವುದು ಬಿಟ್ಟರೆ ಬೇರಾವುದೇ ಹೊರೆ ಹೊತ್ತುಕೊಳ್ಳಲು ರಾಜ್ಯ ಸರ್ಕಾರ ಪ್ರಸ್ತುತ ಸ್ಥಿತಿಯಲ್ಲಿ ಸಿದ್ಧವಿಲ್ಲ. ಹೀಗಾಗಿ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ.
ಪ್ರಸ್ತುತ ನಾವು ನಿರಾಶ್ರಿತ ಶಿಬಿರದಲ್ಲಿದ್ದೇವೆ. ನಾಳೆ ಕೂಡ ಇಲ್ಲಿಯೇ ಸಮಯವನ್ನು ಕಳೆಯಬಹುದು. ಆದರೆ, ನಮ್ಮ ಎಸ್ಟೇಟ್ ನಿರ್ವಾಹಕರು ನಮ್ಮನ್ನು ಹಿಂದಕ್ಕೆ ಕರೆದುಕೊಂಡು ಹೋಗದೇ ಹೋದರೆ, ನಮ್ಮ ನಮ್ಮ ಮನೆಗಳಿಗೆ ಹೋಗಬೇಕಾಗುತ್ತದೆ ಎಂದು ಅಸ್ಸಾಂ ರಾಜ್ಯದ ಕಾರ್ಮಿಕ ಅಲಿ (50) ಹೇಳಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿರುವ ಮಡಪುರದಲ್ಲಿ ಸರ್ಕಾರಿ ಶಾಲೆಯಿದ್ದು, ಶಾಲೆಯನ್ನು ನಿರಾಶ್ರಿತ ಶಿಬಿರವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಶಿಬಿರದಲ್ಲಿ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ರಾಜ್ಯದ ಒಟ್ಟು 127 ಮಂದಿ ಜನರಿದ್ದಾರೆ.
ನಮ್ಮ ರಾಜ್ಯಗಳಿಗೆ ಹೋಗಲು ನಮ್ಮ ಬಳಿ ಹಣವಿಲ್ಲ. ನಮ್ಮ ನಮ್ಮ ರಾಜ್ಯಗಳಿಗೆ ಹಿಂತಿರುಗುವಂತೆ ಸರ್ಕಾರ ಸೂಚಿಸಿದರೆ, ನಮ್ಮ ಪರಿಸ್ಥಿತಿ ಏನಾಗುತ್ತದೆ ಎಂಬುದು ನಮಗೆ ತಿಳಿಯುತ್ತಿಲ್ಲ ಎಂದು ಮತ್ತೊಬ್ಬ ಕಾರ್ಮಿಕ ನೂರ್ ಹುಸೇನ್ (33) ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ಇತರೆ ರಾಜ್ಯಗಳಿಂದ ಬಂದಿರುವ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಹಿಂತಿರುಗಿಸುವ ಪ್ರಯತ್ನಗಳನ್ನು ನಡೆಯುತ್ತಿವೆ. ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸುವ ವೆಚ್ಚವನ್ನು ನಾವೇ ನೋಡಿಕೊಳ್ಳುತ್ತಿದ್ದೇವೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೇಳಿದ್ದಾರೆ.