ಕೊಡಗು ಜಿಲ್ಲೆಯಲ್ಲಿ ಶಾಲೆ ಪುನರಾರಂಭ; ಆರಂಭ ದಿನ ಕಡಿಮೆ ಹಾಜರಾತಿ
ಮಡಿಕೇರಿ: ಭಾರೀ ಪ್ರವಾಹದಿಂದ ತತ್ತರಿಸಿ ಹೋಗಿದ್ದ ಕೊಡಗು ಜಿಲ್ಲೆಯಲ್ಲಿ ಅಲ್ಪಸ್ವಲ್ಪ ಹಾನಿಗೀಡಾಗಿದ್ದ ಶಾಲೆ ಪುನರಾರಂಭವಾಗಿದೆ. ದಕ್ಷಿಣ ಕೊಡಗಿನಲ್ಲಿ ಭೂಕುಸಿತ, ಪ್ರವಾಹಕ್ಕೆ ಹಾನಿಗೀಡಾದ ಶಾಲೆಗಳು ಪುನರಾರಂಭವಾಗಿದ್ದು ಮಕ್ಕಳು ಹುರಿಪಿನಿಂದ ಶಾಲೆಗೆ ಬರುತ್ತಿರುವುದು ಕಂಡುಬಂತು.
ನಿನ್ನೆ ಶೇಕಡಾ 60ರಿಂದ 70ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ಕಳೆದ 8-10 ದಿನಗಳಿಂದ ಮಕ್ಕಳು ಶಾಲೆಗಳಿಗೆ ಹೋಗಿರಲಿಲ್ಲ. ಈ ವರ್ಷ ಮಳೆ ಆರಂಭಗೊಂಡಲ್ಲಿಂದ ಸುಮಾರು 21 ತರಗತಿಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಅದಕ್ಕೆ ಪರ್ಯಾಯವಾಗಿ ಶನಿವಾರಗಳಂದು ಮತ್ತು ರಜಾ ದಿನಗಳಲ್ಲಿ ತರಗತಿಗಳನ್ನು ಮಾಡಲಾಗುವುದು.
ಅಕ್ಟೋಬರ್ ರಜೆಯಲ್ಲಿ ತರಗತಿಗಳನ್ನು ನಡೆಸಲಾಗುವುದು ಆದರೆ ದಸರಾ ಹಬ್ಬಗಳ ಸಮಯದಲ್ಲಿ ರಜೆ ನೀಡಲಾಗುವುದು ಎಂದು ಕೊಡಗು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಾಲ್ಟರ್ ಡಿ ಮೆಲ್ಲೊ ತಿಳಿಸಿದ್ದಾರೆ.
ಮಕ್ಕಳು ಮತ್ತೆ ಶಾಲೆಗೆ ಬರುತ್ತಿರುವುದು ನೋಡಿ ಖುಷಿಯಾಗುತ್ತಿದೆ. ಇಂದು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ, ಮುಂದಿನ ದಿನಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ಬರುತ್ತಾರೆ ಎಂದುಕೊಂಡಿದ್ದೇವೆ ಎಂದರು ಮೂರ್ನಾಡು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯನಿ ದೇಚಮ್ಮ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ