

ಮಡಿಕೇರಿ: ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತರ ಪುನರ್ವಸತಿ ಕಾರ್ಯ ಕೈಗೊಳ್ಳಲು ಜಿಲ್ಲೆಗೆ ಆಗಮಿಸಿದ್ದ ಕೇಂದ್ರ ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಮೇಲೆ ಸಿಟ್ಚುಗೊಂಡದ್ದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಜನಪ್ರತಿನಿಧಿಗಳಾಗಿ ಈ ರೀತಿ ಅನುಚಿತ ವರ್ತನೆ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಮಿಲಿಟರಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಎದುರಿನಲ್ಲಿ ಸಚಿವೆಯಾಗಿ ಮತ್ತು ರಾಜ್ಯಸಭಾ ಸದಸ್ಯರಾಗಿ ಸಂಯಮ ಕಾಪಾಡಿಕೊಳ್ಳಬೇಕಾಗಿತ್ತು. ಇಂದು ಕೊಡಗು ಜಿಲ್ಲೆ ನೈಸರ್ಗಿಕ ವಿಕೋಪದಿಂದ ನಲುಗಿ ಹೋಗಿದ್ದು ಆ ನಿಟ್ಟಿನಲ್ಲಿ ಪರಿಹಾರ ಕಾರ್ಯಗಳನ್ನು ಮತ್ತು ಕೆಲಸಗಳನ್ನು ಮಾಡಬೇಕಾದ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸಚಿವೆಯ ಈ ವರ್ತನೆಯಿಂದ ವಿಷಯ ಬೇರೆಡೆಗೆ ತಿರುಗಿದೆ. ಚುನಾವಣೆ ಎದುರಿಸದೇ, ಜನರ ಜತೆ ಬೆರೆಯದೇ ನೇರವಾಗಿ ಮೇಲ್ಮನೆಯಿಂದ ಆಯ್ಕೆಯಾಗುವ ರಾಜಕಾರಣಿಗಳಿಗೆ ಸಹನೆ ಮತ್ತು ಸಂಯಮ ಇರುವುದಿಲ್ಲ ಎಂದು ಮಹೇಶ್ ಹೇಳಿದ್ದಾರೆ.
"ಜನರ ಸಮಸ್ಯೆ ಅವರಿಗೆ ಗೊತ್ತಿಲ್ಲ, ಬೆಳಗ್ಗೆಯಿಂದಲೂ ಅವಸರದಲ್ಲೇ ಇದ್ದರು. ಅವರು ಬಡತನದಲ್ಲಿ ಬೆಳೆದು ಬಂದಿಲ್ಲ. ಕೇರಳಕ್ಕೆ ಯಾವುದೇ ಸಮೀಕ್ಷೆ ಮಾಡದೇ ಕೇಂದ್ರದಿಂದ ಹಣ ಕೊಟ್ಟರು. ಕರ್ನಾಟಕಕ್ಕೆ ಯಾಕೆ ಮಲತಾಯಿ ಧೋರಣೆ ತೋರಿಸಲಾಗುತ್ತಿದೆ?ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದವರು, ಅವರಿಗೆ ತಾಳ್ಮೆ ಬೇಕು, ಚುನಾವಣೆ ಮೂಲಕ ಗೆದ್ದು ಬಂದಿದ್ದರೆ ಹೀಗೆ ವರ್ತಿಸುತ್ತಿರಲಿಲ್ಲ'' ಎಂದು ನಿರ್ಮಲಾ ಸೀತಾರಾಮನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೊಡಗು ಜಿಲ್ಲೆಗೆ ಪರಿಹಾರ ಘೋಷಿಸುವ ಮುನ್ನ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿ ಅದು ಅಧ್ಯಯನ ನಡೆಸಿದ ನಂತರ ಪರಿಹಾರ ಪ್ಯಾಕೇಜ್ ನ್ನು ಘೋಷಿಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮ್ ಹೇಳಿದ್ದಾರೆ. ಆದರೆ ಕೇರಳಕ್ಕೆ ಯಾವುದೇ ಸಮೀಕ್ಷೆ ಕೈಗೊಳ್ಳುವ ಮೊದಲೇ ಪರಿಹಾರ ಪ್ಯಾಕೇಜ್ ನ್ನು ಘೋಷಿಸಿದೆ, ಅಲ್ಲಿ ಯಾವ ಸಮೀಕ್ಷೆಯನ್ನೂ ಮಾಡಿಲ್ಲ. ನಮ್ಮ ಕರ್ನಾಟಕದ ಕೊಡಗಿಗೆ ಏಕೆ ಈ ತಾರತಮ್ಯ ಎಂದು ಪ್ರಶ್ನಿಸಿದ್ದಾರೆ.