ಕೊಡಗು ಪ್ರವಾಹ: ನಿರಾಶ್ರಿತ ಶಿಬಿರದಲ್ಲಿ ಯುವತಿಗೆ ಕೂಡಿ ಬಂದ ಕಂಕಣ ಭಾಗ್ಯ
ರಾಜ್ಯ
ಕೊಡಗು ಪ್ರವಾಹ: ನಿರಾಶ್ರಿತ ಶಿಬಿರದಲ್ಲಿ ಯುವತಿಗೆ ಕೂಡಿ ಬಂದ ಕಂಕಣ ಭಾಗ್ಯ
ಮಹಾಮಳೆ, ಪ್ರವಾಹ, ಭೂಕುಸಿತದಿಂದ ಅನಿಶ್ಚಿತತೆಯಲ್ಲಿದ್ದ ಮಕ್ಕಂದೂರು ನಿವಾಸಿ ಮಂಜುಳಾ ವಿವಾಹ ಈ ಹಿಂದೆ ನಿಶ್ಚಯಿಸಿದ್ದಂತೆಯೇ ಭಾನುವಾರ ನೆರವೇರಿತು...
ಮಡಿಕೇರಿ: ಮಹಾಮಳೆ, ಪ್ರವಾಹ, ಭೂಕುಸಿತದಿಂದ ಅನಿಶ್ಚಿತತೆಯಲ್ಲಿದ್ದ ಮಕ್ಕಂದೂರು ನಿವಾಸಿ ಮಂಜುಳಾ ವಿವಾಹ ಈ ಹಿಂದೆ ನಿಶ್ಚಯಿಸಿದ್ದಂತೆಯೇ ಭಾನುವಾರ ನೆರವೇರಿತು.
ಇಂದು ಬೆಳಿಗ್ಗೆ 10.30ರ ಮುಹೂರ್ತದಲ್ಲಿ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ನಡೆದ ವಿವಾಹದಲ್ಲಿ ನಿರಾಶ್ರಿರೆಲ್ಲರೂ ಮಂಜುಳಾ ಅವರ ಬಂಧುಗಳಾಗಿ ಭಾಗವಹಿಸಿ ಆಶೀರ್ವದಿಸಿದರು.
ನಿರಾಶ್ರಿತರು ತಂಗಿರುವ ಓಂಕಾರ ಸದನದ ಮುಂಭಾಗದಲ್ಲಿ ಶನಿವಾರ ಚಪ್ಪರ ಹಾಕುವ ಕಾರ್ಯಕ್ರಮ ಮತ್ತು ಮೆಹಂದಿ ಶಾಸ್ತ್ರ, ಆರತಕ್ಷತೆ ಕಾರ್ಯಕ್ರಮವೂ ನೆರವೇರಿತ್ತು.
ಎಲ್ಲವೂ ಅಂದುಕೊಂಡಂತೆ ಆಗಿದ್ದಲ್ಲಿ ಇಂದು ಮಕ್ಕಂದೂರಿನಲ್ಲಿ ಕಲ್ಯಾಣ ಮಂಟಪದಲ್ಲಿ ಇವರ ಮದುವೆ ಅದ್ದೂರಿಯಾಗಿ ನಡೆಸಬೇಕಿತ್ತು. ಬಂಧುಗಳಿಗೆ ಆಹ್ವಾನ ಪತ್ರಿಕೆ ಹಂಚಲಾಗಿತ್ತು. ವಧುವಿಗೆ ಬೇಕಾದ ಆಭರಣ, ಬಚ್ಚೆ, ಖರ್ಚಿಗೆ ಹಣವನ್ನೂ ಮನೆಯಲ್ಲಿಟ್ಟಿದ್ದರು. ಆದರೆ, ಆ.12ರ ಮಹಾಮಳೆ ಹಾಗೂ ಭೂಕುಸಿತಕ್ಕೆ ಇಡೀ ಮನೆಯೇ ಕೊಚ್ಚಿ ಹೋಗಿತ್ತು.
ಮಂಜುಳಾ ಕುಟುಂಬದವರೊಂದಿಗೆ ಹೇಗೋ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಮದುವೆಗೆ ಕೂಡಿಸಿಟ್ಟಿದೆಲ್ಲವೂ ನೀರು ಪಾಲಾಗಿತ್ತು. ಇದಾದ ಬಳಿಕ ಪೋಷಕರು ಮಂಜುಳಾ ಅವರ ವಿವಾಹದ ಆಸೆಯನ್ನೇ ಬಿಟ್ಟಿದ್ದರು. ಆದರೆ, ಜನರು, ಸಂಘಸಂಸ್ಥೆಗಳು ಸಹಾಯ ಹಸ್ತ ಚಾಚಿದ್ದರಿಂದ ನಿಗದಿತ ಮುಹೂರ್ತದಲ್ಲಿಯೇ ವಿವಾಹ ನೆರವೇರಿದೆ.


