
ಬೆಂಗಳೂರು: ಮೇಕೆದಾಟು ಯೋಜನೆ ಕಾರ್ಯಗತಗೊಂಡರೆ ಬೆಂಗಳೂರು ಮತ್ತು ಸುತ್ತಮುತ್ತಲ ಭಾಗಗಳ ಜನರಿಗೆ ಉಪಯೋಗವಾಗಲಿದೆ. ಬೆಂಗಳೂರಿಗರಿಗೆ ಕುಡಿಯುವ ನೀರು ಪೂರೈಕೆಗೆ ಯೋಜನೆಯಿಂದ ಸಹಾಯವಾಗಲಿದೆ ಎನ್ನುವುದು ಒಂದೆಡೆಯಾದರೆ ಇದರಿಂದ ಪ್ರವಾಸೋದ್ಯಮ ಮತ್ತು ವನ್ಯಜೀವಿಗಳಿಗೆ ತೊಂದರೆಯಾಗಲಿದೆ ಎನ್ನುವುದು ಪರಿಸರ ತಜ್ಞರ ಕಳಕಳಿಯಾಗಿದೆ.
ಬೆಂಗಳೂರಿನ ನಾಗರಿಕರಿಗೆ ಸಂಗಮ ವಾರಾಂತ್ಯದಲ್ಲಿ ಪ್ರಮುಖವಾದ ವಾರಾಂತ್ಯ ಪ್ರವಾಸಿ ಸ್ಥಳ. ಮೇಕೆದಾಟು ಅಣೆಕಟ್ಟು ನಿರ್ಮಾಣವಾದರೆ ಈ ಸಂಗಮ ಮುಚ್ಚಿಹೋಗುತ್ತದೆ. ಅಲ್ಲದೆ ಈ ಭಾಗದಲ್ಲಿ ಕರ್ನಾಟಕ ಮತ್ತು ತಮಿಳುನಾಡನ್ನು ಸಂಪರ್ಕಿಸುವ ಜಾಗದಲ್ಲಿರುವ ಆನೆ ಕಾರಿಡಾರ್ ಗೆ ಸಹ ಧಕ್ಕೆಯುಂಟಾಗಲಿದೆ.
ಸುಮಾರು 67 ಟಿಎಂಸಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದ ಕಾವೇರಿ ನದಿ ಪಾತ್ರದಲ್ಲಿ ಮೇಕೆದಾಟು ಯೋಜನೆಯ ಜಲಾಶಯ ನಿರ್ಮಾಣಗೊಂಡರೆ ಸಂಗಮ ಮುಳುಗಿಹೋಗುತ್ತದೆ. ಈ ಸಂಗಮ ಪ್ರಮುಖ ಪ್ರವಾಸಿ ಸ್ಥಳವಾಗಿದ್ದು ವಾರಾಂತ್ಯಗಳಲ್ಲಿ ಸುಮಾರು 3 ಸಾವಿರ ಪ್ರವಾಸಿಗರು ಬರುತ್ತಾರೆ. ಈ ಸಂಗಮದಲ್ಲಿ ಕಾವೇರಿ ಮತ್ತು ಅರ್ಕಾವತಿ ನದಿಗಳು ಒಟ್ಟು ಸೇರುವುದು.ನಂತರ ಅದು ಕೆಳಮುಖವಾಗಿ ಹರಿದು ಬೆಂಗಳೂರಿನಿಂದ 90 ಕಿಲೋ ಮೀಟರ್ ದೂರದಲ್ಲಿರುವ ಕನಕಪುರದ ಮೇಕೆದಾಟುವಿಗೆ ಸೇರುತ್ತದೆ.
ಮೇಕೆದಾಟು ಯೋಜನೆ ಕಾರ್ಯಗತವಾಗಲು ಸುಮಾರು 4,716 ಹೆಕ್ಟೇರ್ ಭೂಮಿ ಬೇಕಾಗುತ್ತದೆ. ಅವುಗಳಲ್ಲಿ ಶೇಕಡಾ 90ಕ್ಕೂ ಹೆಚ್ಚು ಅರಣ್ಯ ಭೂಮಿ ಹೊಂದಿದ್ದು ಉಳಿದವು ಕಂದಾಯ ಇಲಾಖೆಯ ಜಮೀನಾಗಿದೆ.ಹೀಗಾಗಿ ಆನೆಯ ಕಾರಿಡಾರ್ ಸೇರಿದಂತೆ ಪಶು-ಪಕ್ಷಿ ಸಂಕುಲಕ್ಕೆ ಧಕ್ಕೆಯಾಗಬಹುದು ಮತ್ತು ಮನುಷ್ಯ-ಪ್ರಾಣಿ ಸಂಘರ್ಷಕ್ಕೆ ಎಡೆಮಾಡಿಕೊಡಬಹುದು ಎಂಬುದು ವನ್ಯಜೀವಿ ರಕ್ಷಣೆ ಹೋರಾಟಗಾರರ ಆತಂಕವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಯೋಜನೆ ಆರಂಭಿಕ ಹಂತದಲ್ಲಿರುವುದರಿಂದ ಅದರ ಸಾಧಕ-ಬಾಧಕಗಳ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಸುಮಾರು 5,912 ಕೋಟಿ ರೂಪಾಯಿಗಳ ಮೇಕೆದಾಟು ಯೋಜನೆಗೆ ತಾತ್ವಿಕ ಒಪ್ಪಿಗೆ ಪಡೆಯಲು ವಿಸ್ತ್ರೃತ ಯೋಜನಾ ವರದಿ ತಯಾರಿಸುವ ಆರಂಭಿಕ ಪ್ರಕ್ರಿಯೆಗೆ ಕರ್ನಾಟಕ ಸರ್ಕಾರ ಮುಂದಾಗಿದೆ. ಅದು ಮುಂದಿನ 9-10 ತಿಂಗಳಲ್ಲಿ ಸಿದ್ದವಾಗಲಿದೆ. ನಂತರ ವರದಿಯನ್ನು ಕೇಂದ್ರ ಸರ್ಕಾರ, ಕಾವೇರಿ ನೀರು ವ್ಯಾಜ್ಯ ನ್ಯಾಯಮಂಡಳಿ ಮತ್ತು ತಮಿಳುನಾಡು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ವರದಿಯನ್ನು ಕೇಂದ್ರ ಸರ್ಕಾರ ಒಪ್ಪಿದ ಮೇಲಷ್ಟೇ ಕೆಲಸ ಪ್ರಾರಂಭಿಸಲು ಸಾಧ್ಯವಿದೆ.
ಮೇಕೆದಾಟು ಯೋಜನೆಯಿಂದ ಪ್ರಯೋಜನವೇನು?
ಮೇಕೆದಾಟು ಯೋಜನೆ ಜಾರಿಗೆ ಬಂದು ಅಣೆಕಟ್ಟು ನಿರ್ಮಾಣಗೊಂಡರೆ ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜನತೆಗೆ ಕುಡಿಯುವ ನೀರು ಒದಗಿಸುತ್ತದೆ.
-ಜಲ ವಿದ್ಯುತ್ ಯೋಜನೆ ಆರಂಭಿಸಬಹುದು.
-66 ಟಿಎಂಸಿ ಸಾಮರ್ಥ್ಯದಷ್ಟು ನೀರು ಸಂಗ್ರಹಿಸಬಹುದು.
-ಸುಮಾರು 40 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಬಹುದು.
ಪ್ರಸ್ತುತ ಬೆಂಗಳೂರು ನಗರಕ್ಕೆ ಪ್ರತಿದಿನ ಸುಮಾರು 1,350 ಮಿಲಿಯನ್ ಲೀಟರ್ ಕಾವೇರಿ ನೀರು ಸಿಗುತ್ತದೆ. 2030ರ ವೇಳೆಗೆ ನೀರಿನ ಅವಶ್ಯಕತೆ ನಗರದಲ್ಲಿ 2,285 ಎಂಎಲ್ ಡಿ(Millions of Liters Per Day) ಯಷ್ಟಾಗಬಹುದು, ಇದರಿಂದ ಕುಡಿಯುವ ನೀರಿನ ಅವಶ್ಯಕತೆ ಪೂರೈಕೆಯಾಗಬಹುದು ಎನ್ನುತ್ತಾರೆ ಬೆಂಗಳೂರು ನೀರು ಸರಬರಾಜು ಮಂಡಳಿಯ ಅಧಿಕಾರಿಗಳು.
Advertisement