ಅಂಬಿ ವೈಕುಂಠ ಸಮಾರಾಧನೆಗೆ ರಮ್ಯಾ ಬರಬಹುದು, ನೋಡೋಣ: ಜಯಮಾಲಾ

ಹಿರಿಯ ನಟ ಅಂಬರೀಷ್ ನಿಧನ ಹೊಂದಿದ ಸಂದರ್ಭದಲ್ಲಿ ಅಂತಿಮ ದರ್ಶನಕ್ಕೆ, ಕೊನೆಗೆ ಅಂತ್ಯ ಸಂಸ್ಕಾರಕ್ಕೆ...
ಉಡುಪಿಯಲ್ಲಿ ಸಚಿವೆ ಜಯಮಾಲಾ
ಉಡುಪಿಯಲ್ಲಿ ಸಚಿವೆ ಜಯಮಾಲಾ

ಉಡುಪಿ: ಹಿರಿಯ ನಟ ಅಂಬರೀಷ್ ನಿಧನ ಹೊಂದಿದ ಸಂದರ್ಭದಲ್ಲಿ ಅಂತಿಮ ದರ್ಶನಕ್ಕೆ, ಕೊನೆಗೆ ಅಂತ್ಯ ಸಂಸ್ಕಾರಕ್ಕೆ ಕೂಡ ನಟಿ ಹಾಗೂ ಮಂಡ್ಯ ಜಿಲ್ಲೆಯ ಮಾಜಿ ಸಂಸದೆ ರಮ್ಯ ಬರಲಿಲ್ಲ ಎಂದು ಭಾರೀ ಸುದ್ದಿಯಾಗಿತ್ತು. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಬಗ್ಗೆ ವ್ಯಾಪಕ ಟೀಕೆ ಮತ್ತು ಖಂಡನೆ ಕೂಡ ವ್ಯಕ್ತವಾಗಿತ್ತು.

ಇದೀಗ ಈ ಬಗ್ಗೆ ಸಚಿವೆ ಜಯಮಾಲಾ ಪ್ರತಿಕ್ರಿಯಿಸಿದ್ದಾರೆ. ಉಡುಪಿ ಜಿಲ್ಲೆಯ ಮೂಡನಿಡಂಬೂರು ಎಪಿಎಂಸಿ ಯಾರ್ಡ್ ಬಳಿ ಜಿಲ್ಲಾ ರಂಗ ಮಂದಿರ ಮತ್ತು ರಂಗಾಯಣ ಕಟ್ಟಡಕ್ಕೆ ನಿನ್ನೆ ಶಿಲಾನ್ಯಾಸ ನೆರವೇರಿಸಿ ಮಾಧ್ಯಮದೊಂದಿಗೆ ಜಯಮಾಲಾ ಮಾತನಾಡಿದರು.

ನಟಿ ರಮ್ಯಾ ಆರೋಗ್ಯದ ಸಮಸ್ಯೆಯಿಂದಾಗಿ ಅಂಬರೀಶ್ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿಲ್ಲ, ಇದಕ್ಕೆ ಬೇರೇನೂ ರಾಜಕೀಯ ಕಾರಣ ಇಲ್ಲ. ಈ ವಿಷಯವನ್ನು ದೊಡ್ಡದು ಮಾಡುವ ಅಗತ್ಯವಿಲ್ಲ, ಹೆಣ್ಮಕ್ಕಳಿಗೆ ಹಲವಾರು ತೊಂದರೆ ಇರುತ್ತದೆ. ಅವೆಲ್ಲವನ್ನೂ ಎಲ್ಲರ ಮುಂದೆ ಮುಕ್ತವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಅಂಬರೀಶ್ ಅವರ ವೈಕುಂಠ ಸಮಾರಾಧನೆಗಾದರೂ ಬರಬಹುದು ನೋಡೋಣ ಎಂದು ಹೇಳಿದರು.

ಅಂಬರೀಶ್ ಓರ್ವ ಮಹಾನ್ ನಾಯಕ. ನಿಜವಾದ ಜನ ನಾಯಕ. ಜನರ ಹೃದಯದಲ್ಲಿ ವಾಸ ಮಾಡಿದ ಮಹಾನ್ ನಟ. ಅಂಬರೀಶ್ ಸ್ಮಾರಕಕ್ಕೆ ಯಾವುದೇ ತೊಂದರೆಯಿಲ್ಲ. ಹಿರಿಯ ನಟ ದಿ. ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ನಾವೆಲ್ಲ ಅಸಹಾಯಕರಾಗಿದ್ದೇವೆ. ಎಲ್ಲೇ ಸ್ಮಾರಕ ಮಾಡಲು ಹೋದರೂ ಒಂದು ವಿವಾದ ಸೃಷ್ಟಿಯಾಗುತ್ತಿದೆ. ಯಾಕೆ ಹೀಗೆ ಆಗುತ್ತಿದೆ ಎನ್ನುವುದೇ ಗೊತ್ತಾಗುತ್ತಿಲ್ಲ. ಈ ವಿಚಾರದಲ್ಲಿ ನಾವೆಲ್ಲರೂ ಭಾರತಿ ಪರವಾಗಿಯೇ ನಿಲ್ಲುತ್ತೇವೆ ಎಂದರು.

ರಾಜ್ಯ ಸಮ್ಮಿಶ್ರ ಸರಕಾರದಿಂದ ಅಸಮಾಧಾನಗೊಂಡಿರುವ ಸಚಿವ ಸ್ಥಾನ ಆಕಾಂಕ್ಷಿ ಶಾಸಕರು ಮುಂಬೈಗೆ ತೆರಳುತ್ತಿದ್ದಾರೆ ಎನ್ನುವ ವಿಚಾರ ತಳ್ಳಿ ಹಾಕಿದ ಸಚಿವೆ ರಾಜ್ಯ ಸರಕಾರ ಭದ್ರವಾಗಿದೆ. ಅಸಮಾಧಾನ ಎಲ್ಲ ಸುಳ್ಳು ಎಂದು ಹೇಳಿದರು.

ಸಿಎಂ ಎಚ್.ಡಿ. ಕುಮಾರಸ್ವಾಮಿ ಕೂಡಾ ಸಿನೆಮಾ ರಂಗದವರೇ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಬರಲ್ಲ. ಭೂಮಿಗೆ ಸಂಬಂಧಿಸಿ ಸಣ್ಣ ತಕರಾರು ಇರಬೇಕು. ಗುರುವಾರ ಮುನಿರತ್ನ, ಮಂಜು ಸಂಧಾನ ನಡೆಸಿದ್ದಾರೆ. ಈ ಬಗ್ಗೆ ಭಾರತಿ ಅವರಿಗೂ ಪತ್ರದ ಮೂಲಕ ತಿಳಿಸಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com