ಧಾರವಾಡ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿ ಪೊಲೀಸ್ ಠಾಣೆ ಭಾರತದ 10 ಉತ್ತಮ ಪೊಲೀಸ್ ಸ್ಟೇಷನ್ ಗಳಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ.
ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಭಾರತದ ಉತ್ತಮವಾಗಿ ಕಾರ್ಯ ನಿರ್ವಹಿಸುವ ಪೊಲೀಸ್ ಠಾಣೆಗಳಲ್ಲಿ ಕರ್ನಾಟಕದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿ ಪೊಲೀಸ್ ಠಾಣೆ 5ನೇ ಸ್ಥಾನ ಪಡೆದಿದೆ.
ಇದೇ ಮೊದಲ ಬಾರಿಗೆ ಟಾಪ್ 10 ಪೊಲೀಸ್ ಠಾಣೆಗಳಲ್ಲಿ ಗುಡಗೇರಿ ಠಾಣೆ ಸ್ಥಾನ ಪಡೆದುಕೊಂಡಿದೆ. ಸೆಪ್ಟಂಬರ್ 23 ರಂದು ಮೌಲ್ಯ ಮಾಪನ ತಂಡ ಇಲ್ಲಿಗೆ ಭೇಟಿ ನೀಡಿತ್ತು. ಇಲ್ಲಿನ ಅಪರಾಧ ಪ್ರಕರಣಗಳು ಹಾಗೂ ಸಾರ್ವಜನಿಕರೊಂದಿಗಿನ ಸ್ನೇಹ ಮೂಲಭೂತ ಸೌಕರ್ಯಗಳು ಸೇರಿದಂತೆ ವಿವಿಧ ಮಾನದಂಡಗಳ ಆಧಾರದ ಮೇಲೆ ಸ್ಥಾನ ನೀಡಲಾಗಿದೆ ಎಂದು ದಾರವಾಡ ಎಸ್ ಪಿ ಸಂಗೀತಾ ಹೇಳಿದ್ದಾರೆ.
ಸಾರ್ವಜನಿಕರೊಂದಿಗೆ ಪೊಲೀಸರು ಅಹಂಕಾರ ಹಾಗೂ ಒರಟಾಗಿ ವರ್ತಿಸುತ್ತಾರೆ ಎಂಬ ಕೆಟ್ಟ ಇಮೇಜ್ ಮೂಡಿದೆ. ಇದನ್ನು ಹೋಗಲಾಡಿಸಿ ಜನಸ್ನೇಹಿ ಪೊಲೀಸ್ ಠಾಣೆ ಆಗಬೇಕೆಂಬುದು ನನ್ನ ಬಯಕೆ ಎಂದು ಗುಡಗೇರಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್, ನವೀನ್ ಜಕ್ಕಳ್ಲಿ ತಿಳಿಸಿದ್ದಾರೆ,
ರಾಜಸ್ತಾನ- ಕಾಲು, ಅಂಡಮಾನ್ ನಿಕೋಬಾರ್ -ಕ್ಯಾಂಪ್ ಬೆಲ್ ಬೇ, ಪಶ್ಚಿಮ ಬಂಗಾಳ- ಫಾರಕ್ಕಾ, ಪುದುಚೆರಿ-ನೆಟ್ಟಪಾಕಂ, ಕರ್ನಾಟಕ- ಗುಡೇರಿ, ಹಿಮಾಚಲ ಪ್ರದೇಶ-ಚೋಪಾಲ್, ಲಖೇರಿ- ರಾಜಸ್ತಾನ, ಪೆರಿಯಾಕುಲಂ- ತಮಿಳುನಾಡು, ಮುನ್ಸಾರಿ-ಉತ್ತರ ಖಂಡ, ಚುರ್ ಚೋರಂ-ಗೋವಾ ಉತ್ತಮ ಪೊಲೀಸ್ ಠಾಣೆಗಳೆಂದು ಹೆಸರು ಪಡೆದಿವೆ.
ಗುಜರಾತ್ ನಲ್ಲಿ ನಡೆಯುತ್ತಿರುವ ಡಿಜಿಪಿ ಮತ್ತು ಐಜಿಪಿಗಳ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪಟ್ಟಿ ಬಿಡುಗಡೆ ಮಾಡಿದ್ದಾರೆ, ಭಾರತದ ಪ್ರಮುಖ 10 ಪೊಲೀಸ್ ಠಾಣೆಗಳಲ್ಲಿ ಗುಜರಾತ್ ನ ಯಾವುದೇ ಒಂದು ಠಾಣೆ ಸ್ಥಾನ ಪಡೆದುಕೊಂಡಿಲ್ಲ.