ಬಿರುಕು ಬಿದ್ದಿದ್ದ ಹಳಿ: ರೈಲ್ವೇ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ ದೊಡ್ಡ ದುರಂತ ತಪ್ಪಿಸಿದ ಬಾಲಕರು!

ಉತ್ತರ ಕನ್ನಡ ಜಿಲ್ಲೆ ಕುಮಟಾ ಪಟ್ಟಣದ ನೆಲ್ಲಿಕೇರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಬ್ಬರು ಶನಿವಾರ ಸಂಜೆ ಸಂಭವಿಸಬೇಕಿದ್ದ ಭಾರೀ ರೈಲು ದುರಂತವೊಂದು ತಪ್ಪುವಂತೆ ಮಾಡಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕಾರವಾರ: ಉತ್ತರ ಕನ್ನಡ ಜಿಲ್ಲೆ ಕುಮಟಾ ಪಟ್ಟಣದ ನೆಲ್ಲಿಕೇರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಬ್ಬರು ಶನಿವಾರ ಸಂಜೆ ಸಂಭವಿಸಬೇಕಿದ್ದ ಭಾರೀ ರೈಲು ದುರಂತವೊಂದು ತಪ್ಪುವಂತೆ ಮಾಡಿದ್ದಾರೆ. 
ರೈಲು ಹಳಿ ಬಿರುಕು ಬಿಟ್ಟಿರುವುದನ್ನು ಕಂಡ ಇಬ್ಬರು ಬಾಲಕರು ಸಕಾಲಕ್ಕೆ ರೈಲ್ವೇ ಸಿಬ್ಬಂದಿಗಳಿಗೆ ಮಾಹಿತಿ ತಿಳಿಸಿ, ಸಂಭಾವ್ಯ ಭಾರೀ ರೈಲು ದುರಂತವನ್ನು ತಪ್ಪಿಸಿದ್ದಾರೆ. ವಿದ್ಯಾರ್ಥಿಗಳ ಸಮಯಪ್ರಜ್ಞೆಗೆ ಇದೀಗ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. 
ನೆಲ್ಲಿಕೇರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ಹಾವೇರಿ ಜಿಲ್ಲಾ ಮೂಲದ ಮಂಜುನಾಥ ನಾರಾಯಣರೆಡ್ಡಿ ಅರಸನಾಳ ಹಾಗೂ ಶಶಿಕುಮಾರ್ ರೈಲು ದುರಂತವನ್ನು ತಪ್ಪಿಸಿದ ಬಾಲಕರಾಗಿದ್ದಾರೆ. 
ಇಬ್ಬರೂ ಮಣಕಿ ಮೈದಾನದ ಹಾಸ್ಟೆಲ್ ನಲ್ಲಿ ತಂಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಇಬ್ಬರೂ ವಿದ್ಯಾರ್ಥಿಗಳು ಹಾಸ್ಟೆಲ್ ಸಮೀದ  ಮುಳ್ಳು ಹಣ್ಣುಗಳನ್ನು ಹುಡುಕುತ್ತಾ ರೈಲ್ವೇ ಹಳಿ ಮೇಲೆ ಹೋಗುತ್ತಿದ್ದರು. ಈ ವೇಳೆ ಹಳಿ ಬಿರುಕು ಬಿಟ್ಟಿರುವುದನ್ನು ನೋಡಿದ್ದಾರೆ. ಕೂಡಲೇ ಜಾಗೃತರಾದ ಬಾಲಕರು ಅಲ್ಲಿಂದ ಸುಮಾರು 400 ಮೀಟರ್ ದೂರ ಓಡಿ ರೈಲ್ವೇ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. 
ಬಳಿಕ ಸ್ಥಳಕ್ಕೆ ಬಂದ ಸಿಬ್ಬಂದಿಗಳು ಪರಿಶೀಲನೆ ನಡೆಸಿದಾಗ ಹಳಿ ಬಿರುಕು ಬಿಟ್ಟಿರುವುದು ಖಚಿತವೆಂದು ತಿಳಿಸಿದ್ದಾರೆ. ಕೂಡಲೇ ಈ ಮಾರ್ಗದಲ್ಲಿ ಚಲಿಸಬೇಕಿದ್ದ ರೈಲುಗಳಿಗೆ ತುಂಬಾ ನಿಧಾನವಾಗಿ ಚಲಿಸುವಂತೆ ಸೂಚಿಸಿದ್ದಾರೆ. ಇದರಿಂದ ಸಂಭವಿಸಬೇಕಿದ್ದ ದೊಡ್ಡ ದುರಂತ ತಪ್ಪಿದಂತಾಗಿದೆ. 
ಬಾಲಕರ ಸಮಯ ಪ್ರಜ್ಞೆಗೆ ರೈಲ್ವೇ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸುತ್ತಿದ್ದು, ಬಾಲಕರಿಗೆ ಪ್ರಮಾಣಪತ್ರ ನೀಡುವುದಾಗಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com