'ಹಂಪಿ'ಯನ್ನು ಐತಿಹಾಸಿಕ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಮುಂದಾದ ಕೇಂದ್ರ

ಕರ್ನಾಟಕ ಹೆಮ್ಮೆಯ ಪ್ರತೀಕವಾಗಿರುವ ವಿಶ್ವಪಾರಂಪರಿಕ ತಾಣ 'ಹಂಪಿ'ಯನ್ನು ಐತಿಹಾಸಿಕ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ...
ಹಂಪಿ
ಹಂಪಿ
ಬೆಂಗಳೂರು: ಕರ್ನಾಟಕ ಹೆಮ್ಮೆಯ ಪ್ರತೀಕವಾಗಿರುವ ವಿಶ್ವಪಾರಂಪರಿಕ ತಾಣ 'ಹಂಪಿ'ಯನ್ನು ಐತಿಹಾಸಿಕ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. 
ದೇಶದ ಟಾಪ್ 10 ಪ್ರವಾಸಿಗರ ತಾಣಗಳ ಪಟ್ಟಿಗೆ ಹಂಪಿಯನ್ನು ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಹಿನ್ನಲೆಯಲ್ಲಿ 'ಹಂಪಿ'ಯನ್ನು ಐತಿಹಾಸಿಕ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. 
ಫೆ.1 ರಂದು ಕೇಂದ್ರ ಬಜೆಟ್ ಮಂಡನೆ ಮಾಡಿದ್ದ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ದೇಶದ ಟಾಪ್ 10 ಪ್ರವಾಸಿತಾಣಗಳನ್ನು ಐತಿಹಾಸಿಕ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸುವುದಾಗಿ ಘೋಷಣೆ ಮಾಡಿದ್ದರು. 
ಐತಿಹಾಸಿಕ ಪ್ರವಾಸೋದ್ಯಮ ತಾಣಗಳಲ್ಲಿ ಮೂಲಸೌಕರ್ಯ ಮತ್ತು ಕೌಶಲ್ಯ ಅಭಿವೃದ್ಧಿ, ಬ್ರ್ಯಾಂಡಿಂಗ್ ಮತ್ತು ಮಾರ್ಕೆಂಟ್, ಖಾಸಗಿ ಹೂಡಿಕೆ, ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದಾಗಿ ತಿಳಿಸಿದ್ದರು. 
ಜೇಟ್ಲಿಯವರ ಅವರು ಘೋಷಣೆಯಂತೆಯೇ ನಿನ್ನೆ ದೇಶದ ಟಾಪ್ 10 ಪ್ರವಾಸೋದ್ಯಮ ತಾಣಗಳ ಪಟ್ಟಿಯನ್ನು ಮಂಗಳವಾರ ಘೋಷಣೆ ಮಾಡಲಾಗಿದ್ದು, ಪಟ್ಟಿಯಲ್ಲಿ ಹಂಪಿ ಕೂಡ ಸೇರ್ಪಡೆಗೊಂಡಿದೆ.
ಇದರಂತೆ ಶೌಚಾಲಯ ಅಭಿವೃದ್ಧಿ, ಸ್ಮಾರಕಗಳು, ಕುಡಿಯುವ ನೀರಿನ ಸೌಲಭ್ಯ, ರಸ್ತೆ ಮಾರ್ಗಗಳ ಅಭಿವೃದ್ಧಿ, ಅಗತ್ಯವರಿಸುವ ಆಸನಗಳು, ಪಾರ್ಕಿಂಗ್ ವ್ಯವಸ್ಥೆಗಳು, ಟಿಕೆಟ್ ಕೌಂಟರ್ ಗಳು, ಕಸದ ಬುಟ್ಟಿಗಳು ಹಾಗೂ ಕ್ಯೂ ನಿರ್ವಹಣೆ, ಭೂ ದೃಶ್ಯ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದೆ. 
ಬಳ್ಳಾರಿಯ ಹೊಸಪೇಟೆಯ ಬಳಿ ಇರುವ ಊರು ಹಂಪಿಯಾಗಿದ್ದು, ಶ್ರೀಮಂತ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಯುನೆಸ್ಕೋದ ವಿಶ್ವ ಪರಂಪರೆಯ ತಾಣ ಎಂದು ಕರೆಯಲ್ಪಟ್ಟ ಈ ಪ್ರದೇಶವು ಕರ್ನಾಟಕದ ಹೆಮ್ಮೆಯ ತಾಣವೂ ಆಗಿದೆ. ಹಂಪಿ ಎಂದಾಕ್ಷಣ ನೆನಪಾಗುವುದು ಸುಂದರವಾದ ವಾಸ್ತುಶಿಲ್ಪ, ಕರೆ, ಸಂಸ್ಕೃತಿ, ವಿಜಯನಗರ ಸಾಮ್ರಾಜ್ಯ. ಹಂಪಿ ಪರಿಸರದಲ್ಲಿರುವ ಪ್ರತೀಯೊಂದು ಸ್ಮಾರಕಗಳು ಅತ್ಯಂತ ವಿಸ್ಮಯಕಾರಿಯಿಂದ ಕೂಡಿದೆ. 
ಪ್ರತೀ ವರ್ಷ 2 ಲಕ್ಷಕ್ಕೂ ಅಧಿಕ ಪ್ರವಾಸಿಗರು ಹಂಪಿಗೆ ಬರುತ್ತಾರೆ, ಇದರಲ್ಲಿ ಬಹುತೇಕ ಪ್ರವಾಸಿಗರು ವಿದೇಶಿಗರಾಗಿರುತ್ತಾರೆ. ಕೆಲವು ಸ್ಮಾರಕಗಳನ್ನು ನೋಡಲು ಟಿಕೆಟ್ ಗಳ ವ್ಯವಸ್ಥೆಯಿದೆ. ಆದರೆ, ಹಲವೆಡೆ ಶೌಚಾಲಯಗಳ ಕೊರತೆಯಿರುವುದರಿಂದ ಸಾಕಷ್ಟು ಪ್ರವಾಸಿಗರು ಸ್ಮಾರಕಗಳ ಹಿಂದೆಯೇ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದು ನಿಜಕ್ಕೂ ಬೇಸರವನ್ನುಂಟು ಮಾಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com