ವೈದ್ಯಕೀಯ ಸೀಟು ವಂಚನೆ ಜಾಲ:ಬ್ಯಾಂಕ್ ಖಾತೆ ತೆರೆಯಲು ಆರೋಪಿಗಳು ನಕಲಿ ಆಧಾರ್ ಕಾರ್ಡು ಬಳಕೆ

ವೈದ್ಯಕೀಯ ಸೀಟು ಮೋಸ ಜಾಲವನ್ನು ಭೇದಿಸಿರುವ ಮೈಕೊ ಲೇಔಟ್ ಪೊಲೀಸರು, ಸ್ನಾತಕೋತ್ತರ....
ಆರೋಪಿಗಳಾದ ರಜತ್ ಶೆಟ್ಟಿ ಮತ್ತು ಜಯಪ್ರಕಾಶ್ ಸಿಂಗ್
ಆರೋಪಿಗಳಾದ ರಜತ್ ಶೆಟ್ಟಿ ಮತ್ತು ಜಯಪ್ರಕಾಶ್ ಸಿಂಗ್
ಬೆಂಗಳೂರು:ವೈದ್ಯಕೀಯ ಸೀಟು ಮೋಸ ಜಾಲವನ್ನು ಭೇದಿಸಿರುವ ಮೈಕೊ ಲೇಔಟ್ ಪೊಲೀಸರು, ಸ್ನಾತಕೋತ್ತರ ವೈದ್ಯಕೀಯ ಸೀಟು ಆಕಾಂಕ್ಷಿಗಳಿಗೆ ಮೋಸ  ಮಾಡಲು ಬ್ಯಾಂಕು ಖಾತೆಗಳನ್ನು ಸೃಷ್ಟಿಸಲು ನಕಲಿ ಆಧಾರ್ ಕಾರ್ಡುಗಳನ್ನು ಬಳಸಿರುವುದು ಬೆಳಕಿಗೆ ಬಂದಿದೆ.
ಆರೋಪಿಗಳಾದ ರಜತ್ ಶೆಟ್ಟಿ ಮತ್ತು ಜಯಪ್ರಕಾಶ್ ಸಿಂಗ್ ತಮ್ಮ ಹೆಸರು ಬದಲಿಸಿ ನಕಲಿ ಆಧಾರ್ ಕಾರ್ಡುಗಳನ್ನು ಸೃಷ್ಟಿಸಿ ಬೆಂಗಳೂರಿನಲ್ಲಿ ಬ್ಯಾಂಕ್ ಖಾತೆ ತೆರೆದಿದ್ದರು. ಆ ಖಾತೆಗಳಿಗೆ ವೈದ್ಯಕೀಯ ಪದವಿ ಆಕಾಂಕ್ಷಿಗಳು ಹಣ ವರ್ಗಾವಣೆ ಮಾಡಿದ್ದರು.
ರಜತ್ ಶೆಟ್ಟಿ ಉಡುಪಿಯವರಾಗಿದ್ದು ಮಣಿಪಾಲ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವಿ ಪಡೆದವರು. ಕೆಲವು ವರ್ಷಗಳವರೆಗೆ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಜಯಪ್ರಕಾಶ್ ಸಿಂಗ್ ಜಾರ್ಖಂಡ್ ಮೂಲದ ಬಿಬಿಎಂ ಪದವೀಧರ.
ಗ್ಲೋಬಲ್ ಲರ್ನಿಂಗ್ ಎಂಡ್ ಎಜುಕೇಶನ್ ಕನ್ಸಲ್ಟೆನ್ಸಿ ಕಂಪೆನಿಯನ್ನು ಆರಂಭಿಸಿದ ಆರೋಪಿಗಳು ಆ ಮೂಲಕ ವೈದ್ಯಕೀಯ ಪದವಿ ಆಕಾಂಕ್ಷಿಗಳಿಗೆ ಪ್ರತಿಷ್ಟಿತ ಕಾಲೇಜುಗಳಲ್ಲಿ ಸೀಟು ಕೊಡಿಸುತ್ತಿದ್ದರು. ಬಿಟಿಎಂ ಲೇ ಔಟ್ ನ ಎರಡನೇ ಹಂತದಲ್ಲಿ ಕಚೇರಿಯನ್ನು ತೆರೆದಿದ್ದರು. ಅವರನ್ನು ನಂಬಿ ಮೂವರು ವೈದ್ಯಕೀಯ ಪದವಿ ಆಕಾಂಕ್ಷಿಗಳು 1.10 ಕೋಟಿ ರೂಪಾಯಿ ಹಣ ನೀಡಿದ್ದರು. ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗಿತ್ತು. ಬ್ಯಾಂಕು ಖಾತೆಗಳನ್ನು ನಕಲಿ ದಾಖಲೆ ಸಲ್ಲಿಸಿ ಸೃಷ್ಟಿಸಲಾಗಿತ್ತು.
ಜಯಪ್ರಕಾಸ್ ಮತ್ತು ರಜತ್ ಆಗಾಗ ತಮ್ಮ ಹೆಸರುಗಳನ್ನು ಬದಲಿಸುತ್ತಿದ್ದರು. ಜಯಪ್ರಕಾಶ್ ತನ್ನ ಅತ್ತೆ-ಮಾವನ ಖಾತೆಗೆ 50 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿ ಅದನ್ನು ಎಫ್ ಡಿ ಹಾಕಿ ಇಟ್ಟಿದ್ದರು.
ನಗರದ ವಿವಿಧ ಭಾಗಗಳಲ್ಲಿ ಕಚೇರಿ ಆರಂಭಿಸಲು ಈ ಹಣವನ್ನು ಬಳಕೆ ಮಾಡಿಕೊಳ್ಳುತ್ತಿದ್ದ ಆರೋಪಿಗಳು ಹಣ ಬಂದ ನಂತರ ಆ ಕಚೇರಿಯನ್ನು ಮುಚ್ಚುತ್ತಿದ್ದರು. ನಂತರ ಬೇರೆ ಕಡೆಗೆ ಹೋಗುತ್ತಿದ್ದರು. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ವೈದ್ಯ ದಂಪತಿಗೆ 90 ಲಕ್ಷ ರೂಪಾಯಿ ವಂಚಿಸಿದ ನಂತರ ಅವರ ವಿರುದ್ಧ ದೂರು ದಾಖಲಿಸಲಾಗಿತ್ತು. 
ಇತ್ತೀಚೆಗೆ ಆರೋಪಿಗಳು ಡಾಲರ್ಸ್ ಕಾಲೊನಿಯಲ್ಲಿ ಕಚೇರಿ ಅತ್ಯಾಧುನಿಕ ಕಚೇರಿ ಆರಂಭಿಸಿದ್ದರು. 40 ಲಕ್ಷ ರೂಪಾಯಿಯಲ್ಲಿ ಒಳಾಂಗಣ ವಿನ್ಯಾಸ ಮಾಡಿಸಿದ್ದರು. ಸುತ್ತಮುತ್ತಲಿವರಿಗೆ ಸಂಶಯ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.
ಡಿಸಿಪಿ ಬೋರಲಿಂಗಯ್ಯ ಅವರು ಆರೋಪಿ ರಜತ್ ಫೋಟೋವನ್ನು ಗುರುತಿಸಿದರು. ಅವರು ಈ ಹಿಂದೆ ಉಡುಪಿ ಜಿಲ್ಲೆಯ ಎಸ್ ಪಿಯಾಗಿದ್ದಾಗ ಪ್ರಕರಣವೊಂದರಲ್ಲಿ ರಜತ್ ನನ್ನು 2013ರಲ್ಲಿ ಬಂಧಿಸಿದ್ದರು. ತನಿಖೆ ವೇಳೆ ಇಬ್ಬರು ಆರೋಪಿಗಳು ಜೆಪಿ ಕನ್ಸಲ್ಟೆನ್ಸಿ, ಎಜೆಎ ಇನ್ಫ್ರಾಸ್ಟ್ರಕ್ಚರ್, ಫ್ರಾಂಟಿಯರ್, ನಾರಾಯಣ ಕನ್ಸಲ್ಟೆನ್ಸಿ ಮತ್ತು ಐಆರ್ಎಸ್ ಕನ್ಸಲ್ಟೆನ್ಸಿ ಎಂಬಿತ್ಯಾದಿ ಹೆಸರುಗಳಲ್ಲಿ ಕಂಪೆನಿಗಳನ್ನು ತೆರೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com