ಜೈನ ಕಾಶಿಯಲ್ಲಿ ಮಹಾಮಸ್ತಕಾಭಿಷೇಕ: ಡೋಲಿ ನಿರಾಕರಿಸಿ, ಬೆಟ್ಟ ಹತ್ತಿ ಅಭಿಷೇಕ ಮಾಡಿದ ಸಿಎಂ ಸಿದ್ದರಾಮಯ್ಯ

ವೈಭೋಗದ ಹಂಗನ್ನು ತೊರೆದು ಸಾವಿರಾರು ವರ್ಷಗಳಿಂಚ ಅಚರವಾಗಿ ನಿಂತಿರುವ ವಿಂಧ್ಯಗಿರಿ ಬೆಟ್ಟದೊಡೆಯ ತ್ಯಾಗಮೂರ್ತಿ ಬಾಹುಬಲಿಗೆ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕದ ಮೊದಲ ಮಜ್ಜನ ಶನಿವಾರ ಅತ್ಯಂತ ವೈಭವಯುತವಾಗಿ ನಡೆದಿದ್ದು...
ಜೈನ ಕಾಶಿಯಲ್ಲಿ ಮಹಾಮಸ್ತಕಾಭಿಷೇಕ: ಡೋಲಿ ನಿರಾಕರಿಸಿ, ಬೆಟ್ಟ ಹತ್ತಿ ಅಭಿಷೇಕ ಮಾಡಿದ ಸಿಎಂ ಸಿದ್ದರಾಮಯ್ಯ
ಜೈನ ಕಾಶಿಯಲ್ಲಿ ಮಹಾಮಸ್ತಕಾಭಿಷೇಕ: ಡೋಲಿ ನಿರಾಕರಿಸಿ, ಬೆಟ್ಟ ಹತ್ತಿ ಅಭಿಷೇಕ ಮಾಡಿದ ಸಿಎಂ ಸಿದ್ದರಾಮಯ್ಯ
ಶ್ರವಣಬೆಳಗೊಳ: ವೈಭೋಗದ ಹಂಗನ್ನು ತೊರೆದು ಸಾವಿರಾರು ವರ್ಷಗಳಿಂಚ ಅಚರವಾಗಿ ನಿಂತಿರುವ ವಿಂಧ್ಯಗಿರಿ ಬೆಟ್ಟದೊಡೆಯ ತ್ಯಾಗಮೂರ್ತಿ ಬಾಹುಬಲಿಗೆ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕದ ಮೊದಲ ಮಜ್ಜನ ಶನಿವಾರ ಅತ್ಯಂತ ವೈಭವಯುತವಾಗಿ ನಡೆದಿದ್ದು, ಡೋಲಿ ನಿರಾಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಟ್ಟ ಹತ್ತಿ ಬಾಹುಬಲಿಗೆ ಅಭಿಷೇಕ ಮಾಡಿದರು. 
ಮುಖ್ಯಮಂತ್ರಿ ಕಚೇರಿಯ ಪ್ರಕಟಣೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ ಹೆಲಿಕಾಪ್ಟರ್ ನಲ್ಲಿ ಬಂದು, ನಂತರ ಡೋಲಿ ಮೂಲಕ ವಿಂಧ್ಯಗಿರಿಗೆ ಹೋಗಿ ಬಾಹುಬಲಿ ದರ್ಶನ ಮಾಡಿ ಜಲಾಭಿಷೇಕ ಮಾಡಬೇಕಿತ್ತು. ಆದರೆ, ವಿಂಧ್ಯಗಿರಿ ಬೆಟ್ಟದ ಸಮೀಪ ಬರುತ್ತಿದ್ದಂತೆ ಮುಖ್ಯಮಂತ್ರಿ ಡೋಲಿ ಏರಲು ನಿರಾಕರಿಸಿದರು. ನಡೆದುಕೊಂಡೇ ಬಾಹುಬಲಿ ದರ್ಶನ ಮಾಡುವುದಾಗಿ ತಿಳಿಸಿದರು. 
ಬೆಟ್ಟವೇರುವ ವೇಳೆ ಮಧ್ಯೆ ಮಧ್ಯೆ ಕೆಲವರ ಭುಜ ಹಿಡಿದುಕೊಂಡು ಸಾಗಿದರೂ ನಡೆದುಕೊಂಡೇ ಅಂತಿಮವಾಗಿ ತುದಿ ತಲುಪಿದರು. ನಂತರ ಅಟ್ಟಣಿಗೆಯನ್ನು ಲಿಫ್ಟ್ ಮೂಲಕ ಏರಿ, ಬಾಹುಬಲಿ ಮಸ್ತಕ್ಕೆ ಜಲಾಭಿಷೇಕ ಮಾಡಿದರು. ಈ ವೇಳೆ ಕ್ಷೇತ್ರದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಇದ್ದರು. 
ಈ ವೇಳೆ ಸಚಿವರಾದ ಎ.ಮಂಜು, ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಜಿಲ್ಲಾ ಕಾಂಗ್ರೆಸ್ ಮುಖಂಡ ಜಾವಗಲ್ ಮಂಜುನಾಥ್ ಮತ್ತಿತರರು ಇದ್ದರು. 
ಹಿಂದಿನ ಮಹಾಮಸ್ತಕಾಭಿಷೇಕದ ವೇಳೆ ದೇವೇಗೌಡ ಅವರು ಸರ್ಕಾರದಿಂದ ನನ್ನನ್ನು ಹೊರಹಾಕಿದ್ದರು: ಸಿಎಂ
2006ರ ಮಹಾಮಸ್ತಕಾಭಿಷೇಕದ ವೇಳೆ ನಾನು ರಾಜ್ಯ ಉಪಮುಖ್ಯಂಮತ್ರಿ ಹಾಗೂ ಆರ್ಥಿಕ ಸಚಿವನಾಗಿದ್ದೆ. ಈ ವೇಳೆ ಮಹಾಮಸ್ತಕಾಭಿಷೇಕಕ್ಕೆ ಹೆಚ್ಚುವರಿ ಅನುದಾನವನ್ನು ನೀಡಿದ್ದೆ. ಇದಾದ ಬಳಿಕ ಅಂದಿನ ಮುಖ್ಯಮಂತ್ರಿ ದೇವೇಗೌಡ ಅವರ ಆದೇಶದ ಮೇರೆಗ ನನ್ನನ್ನು ಸರ್ಕಾರದಿಂದ ಹೊರ ಹಾಕಿದ್ದರು. ಸಮಾರಂಭ ಆರಂಭವಾಗುವ ವೇಳೆ ನಾನು ಅಧಿಕಾರದಲ್ಲಿರಲಿಲ್ಲ. ಹೀಗಾಗಿ ನಾನು ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಇದೇ ಮೊದಲ ಬಾರಿಗೆ ನಾನು ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಹೀಗಾಗಿ ಸಾಕಷ್ಟು ಸಂತೋಷವಾಗುತ್ತಿದೆ. ರಾಜ್ಯಕ್ಕೆ ಹಾಗೂ ರಾಜ್ಯದ ಜನತೆಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 
ರೂ.11.61ಕೋಟಿಗೆ ಕಳದ ಪಡೆದ ಪಾಟ್ನಿ
ಬಾಹುಬಲಿಗೆ ಮೊದಲ ಅಭಿಷೇಕ ಮಾಡುವ ಅವಕಾಶ ಈ ಬಾರಿಯೂ ಸಿಕ್ಕಿದ್ದು ಉದ್ಯಮಿ ಅಶೋಕ್ ಪಾಟ್ನಿ ಅವರಿಗೆ. ಆರ್.ಕೆ.ಮಾರ್ಬಲ್ ಮತ್ತು ಕಂಪ್ಯೂಟರ್ ಉದ್ಯಮಿಯಾಗಿರುವ ರಾಜಸ್ತಾನದ ಅಶೋಕ್ ಪಾಟ್ನಿ ಅವರು ಈ ಬಾರಿ ರೂ.11.61ಕೋಟಿ ಕೊಟ್ಟು ಮೊದಲ ಕಳಶ ಖರೀದಿಸಿದ್ದರು. ಈ ವಿಚಾರವನ್ನು ಸ್ವತಃ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರೇ ಘೋಷಿಸಿದರು. 
2006ರಲ್ಲಿ ನಡೆದ ಮಹಾಮಸ್ತಕಾಭಿಷೇಕದ ವೇಳೆ ಪಾಟ್ನಿ ರೂ.1.8ಕೋಟಿ ಕೊಟ್ಟು ಮೊದಲ ಕಳಶ ಪಡೆದುಕೊಂಡಿದ್ದರು. ಕಳಶಗಳ ಮಾರಾಟದಿಂದ ಬಂದ ಹಣವನ್ನು ಕ್ಷೇತ್ರದಲ್ಲಿ 200ಹಾಸಿಗೆಗಳುಳ್ಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಮಠದ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ. 
ಮಹಾಮಜ್ಜನಕ್ಕೆ ದೇಶ-ವಿದೇಶಗಳಿಂದ ಹರಿದು ಬಂದ ಜನಸಾಗರ
12 ವರ್ಷಗಳಿಗೊಮ್ಮೆ ನಡೆಯುವ ಈ ಮಹಾಮಸ್ತಕಾಭಿಷೇಕವನ್ನು ಕಣ್ತುಂಬಿಕೊಳ್ಳಲು ದೇಶ ಹಾಗೂ ವಿದೇಶಗಳಿಂದ ಬಂದಿದ್ದ ಯಾತ್ರಿಕರು, ಭಕ್ತರು, ಪ್ರವಾಸಿಗರಿಂದ ಶ್ರವಣಬೆಳಗೊಳ ತುಂಬಿ ತುಳುಕುತ್ತಿತ್ತು. ಜಾತಿ, ಭಾಷೆಗಳನ್ನು ಲೆಕ್ಕಿಸದೆ ಒಂದೆಡೆ ಸೇರಿ, ಬೆರೆತು ಬಾಹುಬಲಿ ದರ್ಶನ ಪಡೆದ ಜನ ಪುನೀತ ಭಾವ ಪ್ರದರ್ಶಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com