
ಬೆಂಗಳೂರು: ಕರ್ನಾಟಕಕ್ಕೆ 14.7 ಟಿಎಂಸಿ ನೀರನ್ನು ಹೆಚ್ಚುವರಿಯಾಗಿ ಸುಪ್ರೀಂಕೋರ್ಟ್ ಹಂಚಿಕೆ ಮಾಡಿದ ನಂತರ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ
ಆದರೆ, ಸುಪ್ರೀಂಕೋರ್ಟ್ ಆದೇಶ ಅನುಷ್ಠಾನಕ್ಕೆ ಬರಲಿದ್ದು, ಕಾವೇರಿ ಜಲಾಶಯದ ಮೇಲಿನ ಹಿಡಿತವನ್ನು ರಾಜ್ಯಸರ್ಕಾರ ಕಳೆದುಕೊಳ್ಳದಂತೆ ಕೇಂದ್ರಸರ್ಕಾರವನ್ನು
ಮನವೊಲಿಸಬೇಕಾದ ಅನೀವಾರ್ಯತೆ ಎದುರಾಗಿದೆ ಎಂದು ಕಾನೂನು ತಜ್ಞರು ಹೇಳುತ್ತಾರೆ.
ಕಾವೇರಿ ನ್ಯಾಯ ಮಂಡಳಿಯ ಶಿಫಾರಸುಗಳನ್ನು ಜಾರಿಗೊಳಿಸಲು ಆರು ವಾರಗಳಲ್ಲಿ ಸಮಿತಿಯೊಂದನ್ನು ರಚಿಸುವ ಪ್ರಸ್ತಾವವನ್ನು ಸುಪ್ರೀಂಕೋರ್ಟ್ ಮಾಡಿದೆ. ಆದರೆ, ಈ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಮಿತಿ ರಚಿಸುವ ಮುನ್ನ ಕೇಂದ್ರಸರ್ಕಾರ ಎಲ್ಲಾ ಸರ್ಕಾರಗಳ ವಿಶ್ವಾಸ ತೆಗೆದುಕೊಳ್ಳುವಂತೆ ಅವರು ಹೇಳಿದ್ದಾರೆ.
ಆದಾಗ್ಯೂ, ಈ ವಿವಾದದಲ್ಲಿ ಸುಪ್ರೀಂಕೋರ್ಟ್ ನಲ್ಲಿ ವಾದ ಮಂಡಿಸಿದ ವಕೀಲರ ತಂಡದ ಅಭಿಪ್ರಾಯ ಬೇರೆಯಾಗಿದೆ. ಮಂಡಳಿ ರಚನೆಯಾದರೆ ನೀರಿನ ಮೇಲಿನ ನಿಯಂತ್ರಣವನ್ನು ರಾಜ್ಯ ಕಳೆದುಕೊಳ್ಳಲಿದೆ. ನೀರಿನ ನಿರ್ವಹಣೆ ಆ ರಾಜ್ಯಕ್ಕೆ ದೊರೆತರೆ ಸವಲತ್ತು ಮತ್ತು ಹಕ್ಕಿನ ಮೀಸಲು ಆದಂತಾಗುತ್ತದೆ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದು ಅವರು ಹೇಳುತ್ತಾರೆ.
ಆರು ತಿಂಗಳೊಳಗೆ ನೀರು ನಿರ್ವಹಣಾ ಮಂಡಳಿ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಸಮಿತಿ ರಚಿಸಲು ಸುಪ್ರೀಂಕೋರ್ಟ್ ತಿಳಿಸಿದೆ. ಸಮಿತಿಯ ಅಧಿಕಾರಿ ಮತ್ತು ಕಾರ್ಯವಿಧಾನಗಳನ್ನು ಕೇಂದ್ರಸರ್ಕಾರವೇ ರೂಪಿಸಬೇಕಾಗಿದೆ ಎಂದು ಸುಪ್ರೀಂಕೋರ್ಟಿನ ಹಿರಿಯ ವಕೀಲ ಮೋಹನ್ ವಿ ಕಾತರ್ಕಿ ಹೇಳಿದ್ದಾರೆ.
ಸಮಿತಿ ರಚನೆಯಾದರೂ ನಂತರ ಸಂಸತ್ತಿನ ಅಂಗೀಕಾರ ಪಡೆಯಬೇಕಾಗುತ್ತದೆ, ಸಂಕಷ್ಟದ ಸಂದರ್ಭದಲ್ಲಿ ತಮಿಳುನಾಡಿಗೆ ಹರಿಸಬೇಕಾದ ನೀರಿನ ಪ್ರಮಾಣ ಕುರಿತು ಈ ಸಮಿತಿಯೇ ನಿರ್ಧಾರ ಕೈಗೊಳ್ಳಲಿದೆ.
Advertisement