ಮಹದಾಯಿ ವಿವಾದ: ಪರಿಕ್ಕರ್ ಟ್ರಿಬ್ಯುನಲ್'ಗೇ ಪತ್ರ ಬರೆಯಲಿ- ಸಿಎಂ ಸಿದ್ದರಾಮಯ್ಯ

ಮಹದಾಯಿ ನದಿ ನೀರಿನ ವಿಚಾರದಲ್ಲಿ ತಮ್ಮೊಂದಿಗೆ ಮಾತುಕತೆ ನಡೆಸಲು ಇಷ್ಟವಿಲ್ಲದಿದ್ದರರೆ, ನೀರು ಬಿಡುಗಡೆ ಮಾಡಲು ಸಿದ್ಧ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ನೇರವಾಗಿ ಮಹದಾಯಿ ನ್ಯಾಯ ಮಂಡಳಿಗೇ ಪತ್ರ ಬರೆಯಲಿ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಮಹದಾಯಿ ನದಿ ನೀರಿನ ವಿಚಾರದಲ್ಲಿ ತಮ್ಮೊಂದಿಗೆ ಮಾತುಕತೆ ನಡೆಸಲು ಇಷ್ಟವಿಲ್ಲದಿದ್ದರರೆ, ನೀರು ಬಿಡುಗಡೆ ಮಾಡಲು ಸಿದ್ಧ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ನೇರವಾಗಿ ಮಹದಾಯಿ ನ್ಯಾಯ ಮಂಡಳಿಗೇ ಪತ್ರ ಬರೆಯಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ. 
ವಿವಾದ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಹದಾಯಿ ವಿವಾದ ಕುರಿತಂತೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರ ರಾಜಕೀಯ ತಂತ್ರವಷ್ಟೇ. ವಿವಾದ ಕುರಿತಂತೆ ಹಲವು ಬಾರಿ ನಾನು ಪತ್ರ ಬರೆದಾಗ ಪರಿಕ್ಕರ್ ಪ್ರತಿಕ್ರಿಯೆ ನೀಡಿರಲಿಲ್ಲ. ಬಿಜೆಪಿ ನಾಯಕರ ವೈಫಲ್ಯವನ್ನು ಜನರು ಪ್ರಶ್ನಿಸಿದ್ದಾರೆ. ಯಡಿಯೂರಪ್ಪ ಅವರಿಗೆ ಪರಿಕ್ಕರ್ ಅವರು ಬರೆದಿರುವ ಪತ್ರ ಕೇವಲ ರಾಜ್ಯದ ಜನರನ್ನು ತಪ್ಪು ಹಾದಿಗೆ ಎಳೆಯುವ ಸಲುವಾಗಿ ಎಂದು ಹೇಳಿದ್ದಾರೆ. 
ಯಡಿಯೂರಪ್ಪ ಅವರಿಗೆ ಗೋವಾ ಮುಖ್ಯಮಂತ್ರಿ ಬರೆದಿರುವ ಪತ್ರವನ್ನು ನ್ಯಾಯಮಂಡಳಿ ಮುಂದೆ ಸಲ್ಲಿಕೆ ಮಾಡಬೇಕೆಂದು ಜಗದೀಶ್ ಶೆಟ್ಟರ್ ಅವರು ಸಲಹೆ ನೀಡಿದ್ದಾರೆ. ಇದು ಸಾಧ್ಯವೇ. ಶೆಟ್ಟರ್ ಸಲಹೆ ನಿಜಕ್ಕೂ ಅಸಂಬದ್ಧವಾದದ್ದು. ಒಬ್ಬ ಮಾಜಿ ಮುಖ್ಯಮಂತ್ರಿ ಹಾಗೂ ವಕೀಲರಾಗಿ ಈ ಬಗ್ಗೆ ತಿಳಿದಿರಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಒಬ್ಬ ಮುಖ್ಯಮಂತ್ರಿ ಇನ್ನೊಬ್ಬ ಮುಖ್ಯಮಂತ್ರಿಗೆ ಪತ್ರ ಬರೆಯಬೇಕು. ಅದು ಬಿಟ್ಟು ಸ್ವಪಕ್ಷದವರಿಗೆ ಬರೆದ ಪತ್ರವನ್ನು ಪರಿಗಣಿಸಲು ಸಾಧ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ. 
ಯಡಿಯೂರಪ್ಪ ಅವರಿಗೆ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ಸಾಧ್ಯವಿಲ್ಲ. ಅದನ್ನೂ ಅಮಿತ್ ಶಾ ಅವರೇ ಮಾಡುತ್ತಿದ್ದಾರೆ. ಬಿಜೆಪಿ ಪಕ್ಷದಿಂದ ಅಭ್ಯರ್ಥಿಗಳ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಕೆಲ ನಾಯಕರು ಅಮಿತ್ ಶಾ ವಿರುದ್ಧ ಯಡಿಯೂರಪ್ಪ ಅವರನ್ನು ಎತ್ತಿಕಟ್ಟುತ್ತಾರೆ. ಅಮಿತ್ ಶಾ ಅವರ ತಂತ್ರಗಳು ಕರ್ನಾಟಕದಲ್ಲಿ ಕೆಲಸಕ್ಕೆ ಬರುವುದಿಲ್ಲ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com