ಬೆಂಗಳೂರು ಬೆಂಗಳೂರಿನ ಮೊಟ್ಟ ಮೊದಲ ಕನ್ನಡ ಮಾಧ್ಯಮ ಶಾಲೆ ಇತಿಹಾಸದ ಪುಟ ಸೇರಿದೆ. ಚಾಮರಾಜಪೇಟೆಯ 4ನೆ ಮುಖ್ಯರಸ್ತೆಯಲ್ಲಿದ್ದ ‘ಮಾಡೆಲ್ ಸ್ಕೂಲ್ ಆಫ್ ಎಜುಕೇಷನ್ ಸೊಸೈಟಿ ಪ್ರೌಢಶಾಲೆ'ಯು ಮುಚ್ಚಿದೆ. ಒಂದು ತಿಂಗಳ ಹಿಂದೆಯೇ ಶಾಲೆ ಬಂದ್ ಆಗಿದ್ದರೂ ಇದುವರೆಗೆ ಯಾರೂ ಇತ್ತ ಗಮನ ನೀಡಿಲ್ಲ.
ಸಾಹಿತ್ಯ ಪರಿಷತ್ತು ಪ್ರಧಾನ ಕಛೇರಿ ಸನಿಹದಲ್ಲಿರುವ ಶಾಲೆಗೆ ಬೀಗ ಹಾಕಲಾಗಿದ್ದು ಶೈಕ್ಷಣಿಕ ವರ್ಷದ ಕಡೆಯ ಹಂತದಲ್ಲಿರುವಾಗ ಶಾಲೆ ಮುಚ್ಚಿದ್ದು ವಿದ್ಯಾರ್ಥಿ ಹಾಗೂ ಶಿಕ್ಷಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಇದೇ ವೇಳೆ ಶಾಲೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳನ್ನು ಬೇರೆ ಬೇರೆ ಶಾಲೆಗಳಿಗೆ ವರ್ಗಾಯಿಸಲಾಗಿದೆ. ಅನುದಾನಕ್ಕೊಳಪಟ್ಟ ನಾಲ್ಕು ಶಿಕ್ಷಕರನ್ನು ಕೌನ್ಸೆಲಿಂಗ್ ಮೂಲಕ ಅನ್ಯಶಾಲೆಗಳಿಗೆ ವರ್ಗಾವಣೆ ಮಾಡಲಾಗಿದೆ. ಆದರೆ ಶಾಲೆಯ ಮಕ್ಕಳಿಗೆ ಬೇರೊಂದು ಶಾಲೆಗೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಶಾಲಾ ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರದ ಆದೇಶ: ಸರ್ಕಾರಿ ಆದೇಶದ ಅನುಸಾರ ಅನುದಾನಿತ ಶಾಲೆಗಳಲ್ಲಿ ಪ್ರತಿ ತರಗತಿಗೆ ಕನಿಷ್ಠ 25 ವಿದ್ಯಾರ್ಥಿಗಳಿರಬೇಕೆನ್ನುವ ನಿಯಮವಿದ್ದು ಈ ಶಾಲೆಯಲ್ಲಿನ್ ಒಟ್ಟಾರೆ 62 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಎಂಟನೇ ತರಗತಿಯಲ್ಲಿ 16, ಹತ್ತನೇ ತರಗತಿಯಲ್ಲಿ 27 ವಿದ್ಯಾರ್ಥಿಗಳಿದ್ದರು.ಉಳಿದ ವಿದ್ಯಾರ್ಥಿಗಳು 9ನೇ ತರಗತಿಯಲ್ಲಿ ಕಲಿಯುತ್ತಿದ್ದರು.
ಇತ್ತೀಚಿನ ವರ್ಷಗಳಲ್ಲಿ ಈ ಶಾಲೆಗೆ ಪ್ರವೇಶ ಬಯಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಫಲಿತಾಂಶದಲ್ಲಿಯೂ ಕುಸಿತ ದಾಖಲಾಗಿತ್ತು ಮೂರು ವರ್ಷಗಳಲ್ಲಿ ಒಟ್ಟಾರೆ ಫಲಿತಾಂಶ ಗನನೀಯವಾಗಿ ಇಳಿಕೆ ಆಗಿತ್ತು. ವಿದ್ಯಾರ್ಥಿಗಳ ಸಂಖ್ಯೆ ಮತ್ತು ಫಲಿತಾಂಶ ಗುಣಮಟ್ಟವನ್ನು ಉತ್ತಮ ಪಡಿಸಿಕೊಳ್ಳುವಂತೆ ನೋಟೀಸ್ ನೀಡಲಾಗಿತ್ತು.
ಸಾಹಸ ಸಿಂಹ ವಿಷ್ಣುವರ್ಧನ್ ಕಲಿತಿದ್ದ ಶಾಲೆ: ಮಾಡೆಲ್ ಹೈ ಸ್ಕೂಲ್ ಶಾಲೆಯಲ್ಲಿ ಕನ್ನಡದ ಖ್ಯಾತ ನಟ ವಿಷ್ಣುವರ್ಧನ್ ವ್ಯಾಸಂಗ ಮಾಡಿದ್ದರು. ಇಷ್ಟೇ ಅಲ್ಲದೆ ರಮೇಶ್ ಭಟ್, ನಗರದ ಖ್ಯಾತ ವಕೀಲರು, ವಿಜ್ಞಾನಿಗಳು, ಶಿಕ್ಷಣ ತಜ್ಞರು ಇಲ್ಲಿ ಕಲಿತು ಮುಂದೆ ಸಾಕಷ್ಟು ಉನ್ನತ ಸ್ಥಾನಕ್ಕೆ ಏರಿದ್ದರು.
ಶಾಲೆಯ ಇತಿಹಾಸ:
1870 ರಲ್ಲಿ ನರ್ಸರಿ ತರಗತಿಗಳೊಡನೆ ಪ್ರಾರಂಭವಾದ ಈ ಶಾಲೆ ಅನಂತರ ಮಾಧ್ಯಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆ(1957) ಯಾಗಿ ಬೆಳೆಯಿತು. ಮಾಡೆಲ್ ಸ್ಕೂಲ್ ಎಜುಕೇಷನ್ ಸೊಸೈಟಿ ಅಡಿಯಲ್ಲಿ ಸ್ಥಾಪನೆಯಾಗಿದ್ದ ಈ ಶಾಲೆಗೆ 5 ನೆ ಪ್ರಿನ್ಸ್ ಚಾರ್ಲ್ಸ್ ಭೇಟಿ ನೀಡಿದ್ದ ಹೆಗ್ಗಳಿಕೆ ಇದೆ. ಬಾಸ್ಕೋ ಮನೆಯಲ್ಲಿದ್ದ ನೂರಾರು ಅನಾಥ ಮಕ್ಕಳು ಇಲ್ಲಿ ಶಿಕ್ಷಣ ಪಡೆದಿದ್ದರು. ಈ ರೀತಿಯಲ್ಲಿ ಇದೊಂದು ಮಾದರಿ ಶಾಲೆಯಾಗಿತ್ತು.