ರತ್ನಪ್ರಭಾ ಅವರ ಸಹಾಯವಿಲ್ಲದಿದ್ದರೆ, ಇಂದು ನಾನು ಕಾರ್ಮಿಕನಾಗೇ ಇರುತ್ತಿದ್ದೆ: ಪೇದೆ ನರಸಪ್ಪ

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ಸಹಾಯವಿಲ್ಲದಿದ್ದರೆ, ಇಂದು ನಾನು ಕಾರ್ಮಿಕನಾಗೇ ಇರುತ್ತಿದ್ದೆ ಎಂದು ಸುದ್ದಿಗೆ ಗ್ರಾಸವಾಗಿರುವ ಪೇದೆ ನರಸಪ್ಪ ಅವರು ಹೇಳಿದ್ದಾರೆ...
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಹಾಗೂ ಪೇದೆ ನರಸಪ್ಪ
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಹಾಗೂ ಪೇದೆ ನರಸಪ್ಪ
ರಾಯಚೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ಸಹಾಯವಿಲ್ಲದಿದ್ದರೆ, ಇಂದು ನಾನು ಕಾರ್ಮಿಕನಾಗೇ ಇರುತ್ತಿದ್ದೆ ಎಂದು ಸುದ್ದಿಗೆ ಗ್ರಾಸವಾಗಿರುವ ಪೇದೆ ನರಸಪ್ಪ ಅವರು ಹೇಳಿದ್ದಾರೆ. 
ರತ್ನಪ್ರಭಾ ಅವರು 27 ವರ್ಷಗಳ ಹಿಂದೆ ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ, ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಕುರಿ ಕಾಯುತ್ತಿದ್ದ ಬಾಲಕನನ್ನು ಕರೆದುಕೊಂಡು ಬಂದು ಶಾಲೆಗೆ ಸೇರಿಸಿದ್ದರು. ರತ್ನಪ್ರಭಾ ಅವರ ಸಹಾಯದಿಂದ ನರಸಪ್ಪ ಎಂಬ ಆ ಬಾಲಕ ಈಗ ವಿದ್ಯಾಭ್ಯಾಸ ಮುಗಿಸಿ ಕರ್ನಾಟಕದಲ್ಲಿ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 
ಈ ಮಾಹಿತಿಯನ್ನು ಕೆಲ ದಿನಗಳ ಹಿಂದಷ್ಟೇ ರತ್ನಪ್ರಭಾ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. 
ಇತ್ತೀಚೆಗೆ ನರಸಪ್ಪ ಎಂಬ ಪೊಲೀಸ್ ಕಾನ್ಸ್ ಟೇಬಲ್ ವಿಧಾನಸೌಧದಲ್ಲಿರುವ ನನ್ನ ಕಚೇರಿಗೆ ಬಂದು ಸೆಲ್ಯೂಟ್ ಹೊಡೆದು, ಅಮ್ಮ ನೀವು ಅಂದು ಕುರಿಗಾಹಿಯಾಗಿದ್ದ ನನ್ನ ಶಾಲೆಗೆ ಸೇರಿಸಿದ್ದರಿಂದಲೇ ಇಂದು ನಾನು ಕಾನ್ಸ್ ಟೇಬಲ್ ಆಗಿದ್ದೇನೆ ಎಂದು ಕಥೆ ಹೇಳಿದ್ದ. ನನಗೆ ನಿಜಕ್ಕೂ ನಂಬಲಿಕ್ಕೆ ಆಗಿಲ್ಲ, ಸಣ್ಣ ಉಪಕಾರವೂ ಹೇಗೆ ಉತ್ತಮ ಪರಿಣಾಮ ಬೀರುತ್ತೆ ಎಂಬುದಕ್ಕೆ ಇದು ಸಾಕ್ಷಿ ಎಂದು ರತ್ನಪ್ರಭಾ ಅವರು ಟ್ವೀಟ್ ಮಾಡಿದ್ದರು. 
ಈ ಟ್ವೀಟ್ ಪ್ರಧಾನಮಂತ್ರಿ ನರೇಂದ್ರ ಮೋದಿವರೆಗೂ ತಲುಪಿತ್ತು. ಜ.5ರಂದು ನವದೆಹಲಿಯ ಡಾ.ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿಯವರು, ಹೆಸರನ್ನು ಮರೆತಿದ್ದೇನೆ... ಆ ಹಿರಿಯ ಅಧಿಕಾರಿ ಮಾಡಿದ ಟ್ವೀಟ್ ನನ್ನ ನೆನಪಿನಲ್ಲಿದೆ ಎಂದು ರತ್ನಪ್ರಭಾ ಅವರ ಟ್ವೀಟ್ ನನ್ನು ಪ್ರಸ್ತಾಪಿಸಿದ್ದರು. ಇದು ನಿಮ್ಮ ಕಾರ್ಯಕ್ಕೆ ಹಿಡಿದ ಕನ್ನಡಿ ಎಂದಿದ್ದರು. 
ಮೋದಿಯವರು ರತ್ನಪ್ರಭಾ ಅವರನ್ನು ಪ್ರಶಂಸಿಸಿದ ಬಳಿಕ ಇದೀಗ ಪೇದೆ ನರಸಪ್ಪ ಅವರು ಸುದ್ದಿಗೆ ಗ್ರಾಸವಾಗಿದ್ದಾರೆ. 
ರತ್ನಪ್ರಭಾ ಅವರ ಸಹಾಯ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಗ್ರಾಮದಲ್ಲಿ ಕುರಿಗಳನ್ನು ಕಾಯುತ್ತಿದ್ದ ಸಂದರ್ಭದಲ್ಲಿ ರತ್ನಪ್ರಭಾ ಮೇಡಂ ಅವರು ಕಾರಿನಲ್ಲಿ ಬರುತ್ತಿದ್ದರು. ಕುರಿ ಕಾಯುತ್ತಿದ್ದ ನನ್ನನ್ನು ನೋಡಿ ಕಾರನ್ನು ನಿಲ್ಲಿಸಿದ್ದರು. ಇದು ನನ್ನ ಜೀವನವನ್ನೇ ಬದಲಾಯಿಸಿತ್ತು. ಕಾರನ್ನು ನಿಲ್ಲಿಸಿದ ಬಳಿಕ ನನ್ನ ಬಳಿಗೆ ಬಂದು ಶಾಲೆಯ ಬಗ್ಗೆ ವಿಚಾರಿಸಿದರು. ಆಗ ನಾನು ಸಣ್ಣ ವಯಸ್ಸಿನ ಹುಡುಗರನಾಗಿದ್ದೆ. ನಾವು ಕಡುಬಡವರಾಗಿದ್ದು, ಮನೆಯ ಪರಿಸ್ಥಿತಿಯನ್ನು ವಿವರಿಸಿದ್ದೆ. ಕೂಡಲೇ ನನ್ನನ್ನು ಅವರೊಂದಿಗೆ ಕರೆದುಕೊಂಡು ಹೋಗಿ ಶಾಲೆಯೊಂದರಲ್ಲಿ ನನ್ನನ್ನು ದಾಖಲು ಮಾಡಿಕೊಳ್ಳುವಂತೆ ಶಾಲೆಗೆ ತಿಳಿಸಿದ್ದರು. 
ಬಳಿಕ ಶಾಲೆ ಹಾಗೂ ಕಾಲೇಜು ದಿನಗಳಲ್ಲಿ ನಾನು ಪೊಲೀಸ್ ತರಬೇತಿಗಳಲ್ಲಿ ಭಾಗವಹಿಸಲು ಆರಂಭಿಸಿದ್ದರೆ. ಬಳಿಕ ಪೊಲೀಸ್ ಇಲಾಖೆಯಲ್ಲಿ ಸೇರ್ಪಡೆಗೊಳ್ಳಲು ಬಯಸಿದ್ದೆ. ರಾಯಚೂರಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದೆ, ಠಾಗೂರ್ ಪದವಿ ಕಾಲೇಜಿನಲ್ಲಿ ಬಿಎ ಪದವಿ ಪೂರ್ಣಗೊಳಿಸಿದ್ದೆ. 2006ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಮೀಸಲು ಪಡೆಯಲ್ಲಿ ಪೇದೆಯಾಗಿ ನೇಮಕಗೊಂಡೆ. ಪ್ರಸ್ತುತ ನಾನು ರಾಜ್ಯ ನಿಯಂತ್ರಣ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಅಂದು ರತ್ನಪ್ರಭಾ ಅವರು ಸಹಾಯ ಮಾಡದಿದ್ದಿದ್ದರೆ ಇಂದು ನಾನು ಕಾರ್ಮಿಕನಾಗಿಯೇ ಜೀವನ ನಡೆಸುತ್ತಿದ್ದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com