ಗೌರಿ ಲಂಕೇಶ್ ಹತ್ಯೆ ಪ್ರಕರಣ: ಎಸ್ಐಟಿ ವಶದಲ್ಲಿ ಮತ್ತೊಬ್ಬ ಶಂಕಿತ?

ದೇಶದಾದ್ಯಂತ ತೀವ್ರ ಸುದ್ದಿಗೆ ಗ್ರಾಸವಾಗಿದ್ದ ಪ್ರಗತಿಪರ ಚಿಂತಕಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಶಂಕಿತ ಎಸ್ಐಟಿ ವಶದಲ್ಲಿದ್ದಾನೆಂದು ಹೇಳಲಾಗುತ್ತಿದೆ...
ಪ್ರಗತಿಪರ ಚಿಂತಕಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್
ಪ್ರಗತಿಪರ ಚಿಂತಕಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್
ಬೆಂಗಳೂರು: ದೇಶದಾದ್ಯಂತ ತೀವ್ರ ಸುದ್ದಿಗೆ ಗ್ರಾಸವಾಗಿದ್ದ ಪ್ರಗತಿಪರ ಚಿಂತಕಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಶಂಕಿತ ಎಸ್ಐಟಿ ವಶದಲ್ಲಿದ್ದಾನೆಂದು ಹೇಳಲಾಗುತ್ತಿದೆ. 
ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ ಈವರೆಗೂ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದೆ. ಪ್ರಸ್ತುತ ಎಸ್ಐಟಿ ವಶದಲ್ಲಿರುವ ಶಂಕಿತ ವ್ಯಕ್ತಿ ಗೌರಿ ಹತ್ಯೆ ಮಾಡಿದ್ದ ಪ್ರಮುಖ ವ್ಯಕ್ತಿಯಾಗಿದ್ದಾನೆಂದು ಮೂಲಗಳು ತಿಳಿಸಿವೆ. 
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು, ರಾಜ್ಯದ ಸಾಕಷ್ಟು ಶಸ್ತ್ರಾಸ್ತ್ರ ದಲ್ಲಾಳಿಗಳನ್ನು ವಿಚಾರಣೆ ನಡೆಸಿದ್ದು, ಪ್ರಮುಖವಾಗಿ ವಿಜಯಪುರ ಹಾಗೂ ಮಹಾರಾಷ್ಟ್ರದಲ್ಲಿರುವ ಶಸ್ತ್ರಾಸ್ತ್ರ ದಲ್ಲಾಳಿಗಳನ್ನು ವಿಚಾರಣೆ ನಡೆಸಿದ್ದಾರೆಂದು ತಿಳಿದುಬಂದಿದೆ. 
ಶಸ್ತ್ರಾಸ್ತ್ರ ದಲ್ಲಾಳಿಗಳ ಬಳಿ ಮಾಹಿತಿಗಳನ್ನು ಕಲೆ ಹಾಕಲಾಗಿದೆ. ಕಂಟ್ರಿಮೇಡ್ ಪಿಸ್ತೂಲ್'ನ್ನು ಯಾರಿಗಾದರೂ ಸರಬರಾಜು ಮಾಡಿದ್ದರೇ ಎಂಬುದರ ಕುರಿತಂತೆ ವಿಚಾರಣೆ ನಡೆಸಲಾಗಿದೆ. ಈ ವೇಳೆ ದಲ್ಲಾಳಿಗಳು ನೀಡಿರುವ ಮಾಹಿತಿ ಆಧಾರದ ಮೇಲೆ ಪಿಸ್ತೂಲ್'ನ್ನು ಖರೀದಿಸಿದ ವ್ಯಕ್ತಿಗಳ ಪಟ್ಟಿಯನ್ನು ಮಾಡಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದರೆ, ಹಂತಕರು ಗುತ್ತಿಗೆದಾರರಂತೆ ಕಂಡು ಬರುತ್ತಿದ್ದಾರೆ. ಹಂತಕರ ದೈಹಿಕ ಭಾಷೆಯನ್ನು ನೋಡಿದರೆ, ಸೂಪಾರಿ ಹಂತಕರಂತೆ ಕಂಡು ಬರುತ್ತಿದ್ದಾರೆ. ಈಗಾಗಲೇ ವ್ಯಕ್ತಿಗಳ ಕುರಿತಂತೆ ಮಾಹಿತಿಗಳನ್ನು ಕಲೆ ಹಾಕಲಾಗಿದ್ದು, ತನಿಖೆ ವೇಳೆ ಮತ್ತೊಬ್ಬ ಶಂಕಿತ ಮಾಹಿತಿ ಕೂಡ ದೊರಕಿದೆ ಎಂದಿದ್ದಾರೆ. 
ಹಂತಕರ ಕುರಿತಂತೆ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಲಾಗಿದ್ದು, ಶೀಘ್ರದಲ್ಲಿಯೇ ಗೌರಿ ಹಂತಕರು ಇವರೇ ಎಂದು ಬಹಿರಂಗಗೊಳಿಸಲಾಗುತ್ತದೆ. ಹಂತಕರಿಗಾಗಿ ಹಲವಾರು ರಾಜ್ಯಗಳಲ್ಲಿ ಹುಡುಕಾಟ ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ. 
ಹಂತಕರ ಕುರಿತ ಮಾಧ್ಯಮಗಳ ವರದಿಗಳು ಬಿತ್ತರಗೊಳ್ಳುತ್ತಿದ್ದಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಕರಣದ ತನಿಖಾಧಿಕಾರಿಯೂ ಆಗಿರುವ ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ಅವರು, ಪತ್ರಕರ್ತೆ ಗೌರಿ ಲಂಕೇಶ್ ಅವರ ಕೊಲೆ ಪ್ರಕರಣ ಸಂಬಂಧ ಈ ವರೆಗೂ ಯಾರನ್ನೂ ಬಂಧನಕ್ಕೊಳಪಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com